ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್ ಗಾಂಧಿ ವೈರಲ್ ವಿಡಿಯೋ ವಿವಾದ: ಕರ್ನಾಟಕಕ್ಕೆ ಅವಮಾನ ಎಂದ ಬಿಜೆಪಿ, ಡಿಕೆ ಶಿವಕುಮಾರ್ ತಿರುಗೇಟು

Rahul Gandhi controversy: ಸೋಮವಾರ (ಅ.12) ದೆಹಲಿಯಲ್ಲಿ ನಡೆದ ವಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೆಲವರನ್ನು ತಳ್ಳಿಕೊಂಡು ಮುಂದೆ ಸಾಗಿರುವ ವಿಡಿಯೊ ವೈರಲ್ ಆಗಿತ್ತು. ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಒಬ್ಬರಾಗಿದ್ದಾರೆ. ಈ ಘಟನೆಯು ಕರ್ನಾಟಕಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಕರ್ನಾಟಕಕ್ಕೆ ಅವಮಾನ ಎಂದ ಬಿಜೆಪಿ, ಡಿಕೆಶಿ ತಿರುಗೇಟು

ರಾಹುಲ್ ಗಾಂಧಿ ವೈರಲ್ ವಿಡಿಯೋ ವಿವಾದ -

Priyanka P
Priyanka P Oct 14, 2026 2:39 PM

ನವದೆಹಲಿ, ಅ.14: ಸೋಮವಾರ (ಅ.12) ದೆಹಲಿಯಲ್ಲಿ ನಡೆದ ವಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi) ಸುತ್ತಲೂ ನೂಕುನುಗ್ಗಲು ಉಂಟಾದ ಜನಸಂದಣಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಕಾಂಗ್ರೆಸ್ ವಿರುದ್ಧ ಬಿಜೆಪಿ (BJP) ವಾಕ್ಪ್ರಹಾರ ನಡೆಸಿದೆ. ಬಿಜೆಪಿಯ ಪ್ರಮುಖ ನಾಯಕರು ಎಕ್ಸ್‌ನಲ್ಲಿ, ಟೀಕಿಸುತ್ತಾ ಪೋಸ್ಟ್ ಮಾಡಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೊದಲ್ಲಿ ರಾಹುಲ್ ಗಾಂಧಿ ಕೆಲವರನ್ನು ತಳ್ಳಿಕೊಂಡು ಮುಂದೆ ಸಾಗುತ್ತಿರುವುದು ಕಂಡುಬಂದಿದೆ. ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಒಬ್ಬರಾಗಿದ್ದಾರೆ. ಈ ಘಟನೆಯು ಕರ್ನಾಟಕಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇದಕ್ಕೆ ಡಿ.ಕೆ. ಶಿವಕುಮಾರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

“ನಿನ್ನೆ ನಡೆದ ಪ್ರತಿಭಟನೆಯಲ್ಲಿ ಮತಗಳ್ಳತನದ ವಿರುದ್ಧ ಮತ್ತು ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಂದಾದ ಜನಸಾಗರವೇ ಕಂಡುಬಂತು. ರಾಹುಲ್ ಗಾಂಧಿ ಅವರು ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದರು. ವಾಹನದ ಬಳಿಗೆ ಹಿಂತಿರುಗುವಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು. ನಮ್ಮ ನಡುವಿನ ಬಾಂಧವ್ಯ ಹೇಗಿದೆಯೆಂದರೆ- ಅದು ನಂಬಿಕೆ, ಪ್ರೀತಿ ಮತ್ತು ಕುಟುಂಬದ ಭಾವನೆಗಳನ್ನು ಆಧರಿಸಿದೆ. 10 ಸೆಕೆಂಡ್‌ಗಳ ವಿಡಿಯೊದಿಂದ ಸಂಪೂರ್ಣ ಘಟನೆಯನ್ನು ಹೇಳಲು ಸಾಧ್ಯವಿಲ್ಲ. ಮುಖ್ಯ ವಿಷಯದಿಂದ ನಮ್ಮ ಗಮನ ಬೇರೆಡೆಗೆ ಹೋಗದಿರಲಿ. ಮತಗಳ್ಳತನದ ಆರೋಪ ಮತ್ತು ಪ್ರತಿಯೊಬ್ಬ ಭಾರತೀಯನ ಮತದಾನದ ಹಕ್ಕನ್ನು ರಕ್ಷಿಸುವ ಹೋರಾಟದ ಕಡೆಗೆ ಗಮನ ಹರಿಸಬೇಕು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇಲ್ಲಿದೆ ಸಿಎಂ ಡಿಕೆಶಿ ಪೋಸ್ಟ್:



ಸೌರವ್ ದಾಸ್, ಅಶುತೋಷ್ ರಂಕಾ ಬಂಧನ ಹೇಡಿತನದ ಕೃತ್ಯ: ಸಿಜೆಪಿ ನಾಯಕರ ಪರ ರಾಹುಲ್ ಗಾಂಧಿ ಭರ್ಜರಿ ಬ್ಯಾಟಿಂಗ್

ತಮ್ಮ ಹೋರಾಟ ಪ್ರಜಾಪ್ರಭುತ್ವಕ್ಕಾಗಿ, ಗಮನ ಬೇರೆಡೆಗೆ ಸೆಳೆಯುವ ವಿಚಾರಗಳಿಗಾಗಿ ಅಲ್ಲ ಎಂದು ಅವರು ಬರೆದಿದ್ದಾರೆ. ಈ ಮೂಲಕ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವ ಮೂಲಕ ವಿಪಕ್ಷಗಳು ಪ್ರಸ್ತಾಪಿಸಲು ಹೊರಟಿರುವ ಪ್ರಮುಖ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ನೂಕುನುಗ್ಗಲಿನ ವಿಡಿಯೊವನ್ನು ಪೋಸ್ಟ್ ಮಾಡಿದವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಒಬ್ಬರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಅವರು, ಎಕ್ಸ್‌ನಲ್ಲಿ ಈ ರೀತಿ ಬರೆದಿದ್ದಾರೆ. “2015ರಲ್ಲಿ ಹೆಮ್ಮೆಯ ಅಸ್ಸಾಮೀಯನಾಗಿ ನಾನು ಅವಮಾನವನ್ನು ಸಹಿಸಿಕೊಳ್ಳಲು ನಿರಾಕರಿಸಿದೆ. ದೇವರು ನನ್ನ ಮೇಲೆ ಕರುಣೆ ತೋರಿದನು” ಎಂದು ಪೋಸ್ಟ್ ಮಾಡಿದ್ದಾರೆ.

ಅಸ್ಸಾಂ ಸಿಎಂ ಪೋಸ್ಟ್:



“ಕರ್ನಾಟಕದ ಮುಖ್ಯಮಂತ್ರಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರು. ಭವ್ಯ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ಅಪಾರ ಹೆಮ್ಮೆಯನ್ನು ಹೊಂದಿರುವ ರಾಜ್ಯದ ಪ್ರತಿನಿಧಿ. ಇಂತಹ ಸಾರ್ವಜನಿಕ ಅವಮಾನಕ್ಕೆ ಅವರು ತಲೆಬಾಗುತ್ತಾರೆಯೇ?” ಎಂದು ಅವರು ಬರೆದಿದ್ದಾರೆ.

“ವೀರೇಂದ್ರ ಪಾಟೀಲ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿರುವುದಾಗಿ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲೇ ಯಾವುದೇ ಮುಲಾಜಿಲ್ಲದೆ ಘೋಷಿಸಿದ್ದರಿಂದ ಹಿಡಿದು, ರಸ್ತೆಯ ಮಧ್ಯೆಯೇ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರ ಕುರ್ತಾ ಹಿಡಿದು ಎಳೆದಿರುವವರೆಗೆ, ಕಾಂಗ್ರೆಸ್‌ನ ಒಂದು ರಾಜಕೀಯ ಕುಟುಂಬವು ತಮಗೆ ಅಧಿಕಾರದ ಮೇಲೆ ವಿಶೇಷ ಹಕ್ಕಿದೆ ಎಂಬಂತೆ ವರ್ತಿಸುವ ಮನೋಭಾವ ಇಂದಿಗೂ ಬದಲಾಗಿಲ್ಲ” ಎಂದು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.