ಢಾಕಾ, ಡಿ. 21: ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ (Bangladesh Violence) ಭುಗಿಲೆದ್ದಿದೆ. ಈ ನಡುವೆ ಮೈಮೆನ್ಸಿಂಗ್‌ನಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಯುವಕ ದೀಪು ಚಂದ್ರದಾಸ್ (Dipu Chandra Das) ಮೃತ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇಂತಹ ಹಿಂಸಾಚಾರಕ್ಕೆ ಅವಕಾಶವಿಲ್ಲ. ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತ ಮಧ್ಯಂತರ ಸರ್ಕಾರ ಕೊಲೆಯನ್ನು ಖಂಡಿಸಿದೆ.
ದೀಪು ಚಂದ್ರ ದಾಸ್ ಯಾರು?
ಕೊಲೆಯಾದ ವ್ಯಕ್ತಿಯನ್ನು ಹಿಂದೂ ಉಡುಪು ಕಾರ್ಖಾನೆಯ ಕೆಲಸಗಾರ ದೀಪು ಚಂದ್ರದಾಸ್ ಎಂದು ಗುರುತಿಸಲಾಗಿದೆ. ಗುರುವಾರ (ಡಿಸೆಂಬರ್ 18) ರಾತ್ರಿ ಮೈಮೆನ್‌ಸಿಂಗ್‌ನ ಭಾಲುಕಾದಲ್ಲಿ ಗುಂಪೊಂದು ಆತನನ್ನು ಥಳಿಸಿ ಬೆಂಕಿ ಹಚ್ಚಿತ್ತು. ಆತನ ದೇಹವನ್ನು ಮರಕ್ಕೆ ಕಟ್ಟಿ ಸುಟ್ಟು ಹಾಕಲಾಗಿತ್ತು.
ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ: ಕಾರಣವೇನು?
25 ವರ್ಷದ ದೀಪು ಮೈಮೆನ್‌ಸಿಂಗ್‌ನ ಸ್ಕ್ವೇರ್ ಮಾಸ್ಟರ್‌ಬರಿ ಪ್ರದೇಶದಲ್ಲಿರುವ ಪಯೋನೀರ್ ನಿಟ್ ಕಾಂಪೋಸಿಟ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಮೃತನ ತಂದೆ ರವಿಲಾಲ್ ದಾಸ್ ತಮ್ಮ ಮಗನ ಸಾವಿಗೆ ಕಾರಣವಾದ ಘಟನೆಗಳನ್ನು ವಿವರಿಸಿದ್ದಾರೆ. ಕುಟುಂಬವು ಮೊದಲು ಸಾಮಾಜಿಕ ಮಾಧ್ಯಮದ ಮೂಲಕ ಪುತ್ರನ ಸಾವಿನ ಬಗ್ಗೆ ತಿಳಿದುಕೊಂಡಿತು ಎಂದು ಅವರು ಹೇಳಿದರು.
ʼʼನಾವು ಆತನಿಗೆ ಥಳಿಸುತ್ತಿರುವುದನ್ನು ಫೇಸ್‌ಬುಕ್‌ನಲ್ಲಿ ನೋಡಿದೆವು. ನಂತರ ಯಾರೋ ನನಗೆ, ನನ್ನ ಮಗನನ್ನು ಕ್ರೂರವಾಗಿ ಹೊಡೆದರು ಎಂದು ಹೇಳಿದಾಗ ವಿಷಯ ತಿಳಿಯಿತುʼʼ ಎಂದು ಅವರು ಭಯಾನಕ ಘಟನೆಯ ಬಗ್ಗೆ ಹೇಳಿದರು. ದುಷ್ಕರ್ಮಿಗಳು ದೀಪುನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆಂದು ತಿಳಿಸಲಾಯಿತು ಎಂದು ರವಿಲಾಲ್ ಹೇಳಿದರು. ʼʼನಂತರ ಗುಂಪು ನನ್ನ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿತು. ಅವರು ಸುಟ್ಟ ಮುಂಡ ಮತ್ತು ತಲೆಯನ್ನು ಹೊರಗೆ ಕಟ್ಟಿದರು. ಅದು ಭಯಾನಕವಾಗಿತ್ತುʼʼ ಎಂದು ಅವರು ವಿವರಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ; 7 ಮಂದಿ ಶಂಕಿತರ ಬಂಧನ
10 ಜನರ ಬಂಧನ
ಹಿಂದೂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿ ಮುಹಮ್ಮದ್ ಯೂನಸ್ ಘೋಷಿಸಿದರು. ಹತ್ತು ಜನರಲ್ಲಿ ಏಳು ಜನರನ್ನು ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ಬಂಧಿಸಿದರೆ, ಮೂವರನ್ನು ಪೊಲೀಸರು ಪ್ರಕರಣದಲ್ಲಿ ಶಂಕಿತರೆಂದು ಬಂಧಿಸಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ಪ್ರಕಟಿಸಿದರು. ಹೇಳಿಕೆಯ ಪ್ರಕಾರ, 19ರಿಂದ 46 ವರ್ಷ ವಯಸ್ಸಿನ ಶಂಕಿತರನ್ನು ಬಂಧಿಸಲು ಆರ್‌ಎಬಿ ಮತ್ತು ಪೊಲೀಸರು ಹಲವಾರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದರು.