ಜೋಹಾನ್ಸ್‌ಬರ್ಗ್, ಅ. 9: ದಕ್ಷಿಣ ಆಫ್ರಿಕಾದಲ್ಲಿ (South Africa) ವರ್ಣಭೇದ ನೀತಿಯ ಕರಾಳ ಛಾಯೆ ಆವರಿಸಿದ್ದ ಕಾಲದಲ್ಲಿ ಜನಾಂಗೀಯ ತಾರತಮ್ಯ (Racial Discrimination) ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ಬೆಳೆದ ಭಾರತ ಮೂಲದ ನವಿ ಪಿಳ್ಳೈ (Navi Pillay) ತಮ್ಮ ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಭಾರತೀಯ ಮೂಲದ ಈ ಖ್ಯಾತ ಕಾನೂನು ತಜ್ಞೆ, ಮಾನವ ಹಕ್ಕುಗಳ ರಕ್ಷಣೆ ಮತ್ತು ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇದೀಗ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ.
ವಿಶ್ವಸಂಸ್ಥೆಯ ಮಾಜಿ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವನೀತಮ್ ನವಿ ಪಿಳ್ಳೈ ಅವರ ವೃತ್ತಿ ಜೀವನವು ವರ್ಣಭೇದದ ವಿರುದ್ಧದ ಹೋರಾಟದಿಂದ ಹಿಡಿದು ಜಾಗತಿಕ ಮಟ್ಟದ ನ್ಯಾಯಾಂಗ ಸೇವೆಯ ಕ್ಷೇತ್ರದವರೆಗೆ ವಿಸ್ತರಿಸಿದೆ. ರಾಜಕೀಯ ಖೈದಿಗಳ ಹಕ್ಕುಗಳ ರಕ್ಷಣೆ, ಯುದ್ಧಾಪರಾಧಗಳ ವಿಚಾರಣೆ ಮತ್ತು ಲೈಂಗಿಕ ದೌರ್ಜನ್ಯಗಳ ವಿರುದ್ಧದ ಹೋರಾಟದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.
ಕಷ್ಟಗಳನ್ನು ಮೆಟ್ಟಿ ಸಾಧನೆಯ ಶಿಖರ ಏರಿದವರು
1941ರ ಸೆಪ್ಟೆಂಬರ್ 23ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಭಾರತೀಯ ಕುಟುಂಬದಲ್ಲಿ ಜನಿಸಿದ ನವಿ ಪಿಳ್ಳೈ ಅವರಿಗೆ ಎಂಟು ಮಂದಿ ಸಹೋದರ - ಸಹೋದರಿಯರು. ದೊಡ್ಡ ಕುಟುಂಬದಲ್ಲಿ ಹುಟ್ಟಿದ ಪಿಳ್ಳೈ ಅವರ ಬಾಲ್ಯ ಕಷ್ಟದಿಂದಲೇ ಕೂಡಿತು. ಅವರ ತಂದೆ ಬಸ್ ಚಾಲಕರಾಗಿದ್ದು, ಕುಟುಂಬದ ನಿರ್ವಹಣೆಗಾಗಿ ಹಲವು ಕೆಲಸಗಳನ್ನು ಮಾಡುತ್ತಿದ್ದರು. ತಾಯಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರದಿದ್ದರೂ, ಮಕ್ಕಳ ಶಿಕ್ಷಣಕ್ಕೆ ಅವರ ಪೋಷಕರು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಹೆಣ್ಣುಮಕ್ಕಳಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಬೇಕು ಎಂಬ ಕುಟುಂಬದ ನಿಲುವು ನವಿ ಪಿಳ್ಳೈ ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿದ್ದ ವರ್ಣಭೇದ ನೀತಿಯು ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. ಜನಾಂಗದ ಆಧಾರದ ಮೇಲೆ ಅವಕಾಶಗಳನ್ನು ನಿರ್ಬಂಧಿಸಲಾಗುತ್ತಿದ್ದ ವಾತಾವರಣದಲ್ಲಿ ಬೆಳೆದ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಂಡರು.
ವಕೀಲೆಯಾಗಿ ಅನ್ಯಾಯದ ವಿರುದ್ಧ ಹೋರಾಟ
ನಟಾಲ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಕಾನೂನು ಶಿಕ್ಷಣ ಪಡೆದ ನವಿ ಪಿಳ್ಳೈ, ವಿದ್ಯಾರ್ಥಿ ಜೀವನದಲ್ಲಿಯೇ ವರ್ಣಭೇದ ನೀತಿಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಶಿಕ್ಷಣ ಮುಗಿದ ಬಳಿಕ ವಕೀಲೆಯಾಗಿ ವೃತ್ತಿ ಆರಂಭಿಸಿ, ತಾರತಮ್ಯಕ್ಕೆ ಒಳಗಾದವರ ಪರವಾಗಿ ಕಾನೂನು ಹೋರಾಟ ನಡೆಸಿದರು.
1967ರಲ್ಲಿ ನಟಾಲ್ ಪ್ರಾಂತ್ಯದಲ್ಲಿ ಸ್ವಂತ ಕಾನೂನು ವೃತ್ತಿ ಆರಂಭಿಸಿದರು. ವರ್ಣಭೇದ ವಿರೋಧಿ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವುದರ ಜತೆಗೆ ಬಂಧನದಲ್ಲಿದ್ದ ರಾಜಕೀಯ ಖೈದಿಗಳ ಮೇಲಿನ ಹಿಂಸೆ ಮತ್ತು ಅಮಾನವೀಯ ವರ್ತನೆಯ ಆರೋಪಗಳನ್ನೂ ಪ್ರಶ್ನಿಸಿದರು. ನ್ಯಾಯ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬ ನಿಲುವು ಅವರ ವೃತ್ತಿ ಜೀವನದ ಪ್ರಮುಖ ಆಶಯವಾಗಿತ್ತು.
ಹಾರ್ವರ್ಡ್‌ನಲ್ಲಿ ಉನ್ನತ ಶಿಕ್ಷಣ
ಕಾನೂನು ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ಪಡೆದುಕೊಳ್ಳಲು ನವಿ ಪಿಳ್ಳೈ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. 1982ರಲ್ಲಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಅವರು, 1988ರಲ್ಲಿ ಹಾರ್ವರ್ಡ್ ಕಾನೂನು ಶಾಲೆಯಿಂದ ಡಾಕ್ಟರೇಟ್ ಪದವಿಯನ್ನೂ ಪಡೆದರು.
ದಕ್ಷಿಣ ಆಫ್ರಿಕಾದಲ್ಲಿ ನ್ಯಾಯಾಂಗ ಸೇವೆ ಸಲ್ಲಿಸಿದ ಬಳಿಕ, ಅವರ ವೃತ್ತಿ ಜೀವನ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿತು. 1995ರಲ್ಲಿ ದಕ್ಷಿಣ ಆಫ್ರಿಕಾದ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡ ಅವರು, ನಂತರ ರುವಾಂಡಾದ ನರಮೇಧಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ ಸೇವೆ ಸಲ್ಲಿಸಿದರು.
ಭಾರತೀಯ ಮೂಲದ ನ್ಯಾಯವಾದಿಗೆ ಒಲಿದ 2026ರ ನೊಬೆಲ್ ಶಾಂತಿ ಪ್ರಶಸ್ತಿ: ಯಾರು ಈ ನವಿ ಪಿಳ್ಳೈ?
ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ
ರುವಾಂಡಾದ ನರಮೇಧದ ವಿಚಾರಣೆ ವೇಳೆ ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆಯನ್ನು ಅಂತಾರಾಷ್ಟ್ರೀಯ ನ್ಯಾಯವ್ಯವಸ್ಥೆಯ ಗಮನಕ್ಕೆ ತರುವಲ್ಲಿ ನವಿ ಪಿಳ್ಳೈ ಮಹತ್ವದ ಪಾತ್ರ ವಹಿಸಿದರು. ನಿರ್ದಿಷ್ಟ ಜನಾಂಗೀಯ ಅಥವಾ ಧಾರ್ಮಿಕ ಸಮುದಾಯವನ್ನು ನಾಶಪಡಿಸುವ ಉದ್ದೇಶದಿಂದ ನಡೆಸಿದ ಲೈಂಗಿಕ ಹಿಂಸಾಚಾರವು ನರಮೇಧದ ಭಾಗವಾಗಬಹುದು ಎಂಬ ತತ್ವವನ್ನು ಪ್ರತಿಪಾದಿಸಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡಿದ್ದರಲ್ಲಿ ಅವರ ಕೊಡುಗೆ ಗಮನಾರ್ಹ.
ನಂತರ ನೆದರ್ಲೆಂಡ್ಸ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿಯೂ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ ಅವರು, ಗಂಭೀರ ಅಂತರರಾಷ್ಟ್ರೀಯ ಅಪರಾಧಗಳ ವಿಚಾರಣೆಯನ್ನು ನಡೆಸಿರುವ ಖ್ಯಾತಿ ಗಳಿಸಿದರು.
ವಿಶ್ವಸಂಸ್ಥೆಯಲ್ಲಿ ಆರು ವರ್ಷಗಳ ಮಹತ್ವದ ಸೇವೆ
2008ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ ನವಿ ಪಿಳ್ಳೈ, ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಧ್ವನಿ ಎತ್ತಿದರು. ಸಿರಿಯಾ ಮತ್ತು ಶ್ರೀಲಂಕಾ ಸೇರಿ ವಿವಿಧ ದೇಶಗಳಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಗಳ ಕುರಿತು ಕಳವಳ ವ್ಯಕ್ತಪಡಿಸಿ, ಹೊಣೆಗಾರಿಕೆಯನ್ನು ಖಚಿತಪಡಿಸುವಂತೆ ಕರೆ ನೀಡಿದರು.
ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲಸ್ತೀನ್ ಪ್ರದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಯುದ್ಧಾಪರಾಧಗಳ ಕುರಿತು ತನಿಖೆ ನಡೆಸಿದ ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ ಪ್ರಯತ್ನಗಳಲ್ಲಿ ತಮ್ಮ ಪಾತ್ರ ಮುಂದುವರಿಸಿದರು.
ಬಡತನ ಮತ್ತು ವರ್ಣಭೇದದ ನಡುವೆಯೂ ಶಿಕ್ಷಣ ಪಡೆದು, ವಕೀಲೆಯಾಗಿ ವೃತ್ತಿ ಆರಂಭಿಸಿ, ವಿಶ್ವಸಂಸ್ಥೆಯ ಉನ್ನತ ಹುದ್ದೆಯವರೆಗೆ ಬೆಳೆದ ನವಿ ಪಿಳ್ಳೈ ಅವರ ಬದುಕು ಸವಾಲುಗಳನ್ನು ಎದುರಿಸಿ ಮುನ್ನಡೆಯುವ ದೃಢಸಂಕಲ್ಪಕ್ಕೆ ಉದಾಹರಣೆ. ನ್ಯಾಯ, ಸಮಾನತೆ ಮತ್ತು ಮಾನವ ಘನತೆಯ ಪರವಾಗಿ ಅವರು ನಡೆಸಿದ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಬಲ್ಲದು.