ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಮೂಲದ ನ್ಯಾಯವಾದಿಗೆ ಒಲಿದ 2026ರ ನೊಬೆಲ್ ಶಾಂತಿ ಪ್ರಶಸ್ತಿ: ಯಾರು ಈ ನವಿ ಪಿಳ್ಳೈ?

Who is Navanethem Navi Pillay? ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉತ್ತೇಜನಕ್ಕಾಗಿ ನಡೆಸಿದ ಪ್ರಯತ್ನಗಳಿಗಾಗಿ ನವನೀತಮ್ ನವಿ ಪಿಳ್ಳೈ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ಪಿಳ್ಳೈ ವರ್ಣಭೇದ ನೀತಿಯನ್ನು ವಿರೋಧಿಸಿ ಹೋರಾಡುತ್ತಿದ್ದ ಜನರಿಗೆ ಕಾನೂನಿನ ಮೂಲಕ ಸಹಾಯ ಮಾಡಿದ್ದಾರೆ.

ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೆ ನೊಬೆಲ್ ಶಾಂತಿ ಪ್ರಶಸ್ತಿ

ನವಿ ಪಿಳ್ಳೈ -

Priyanka P
Priyanka P Oct 9, 2026 4:17 PM

ಓಸ್ಲೋ, ಅ. 9: ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉತ್ತೇಜನಕ್ಕಾಗಿ ನಡೆಸಿದ ಪ್ರಯತ್ನಗಳಿಗಾಗಿ ನವನೀತಮ್ ನವಿ ಪಿಳ್ಳೈ (Navanethem Navi Pillay) ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ನೀಡಲಾಗಿದೆ. ಸಾರ್ವತ್ರಿಕ ಕಾನೂನು ತತ್ವಗಳ ಬಗೆಗಿನ ಬದ್ಧತೆ ಮತ್ತು ಬಲವಾದ ನೈತಿಕ ಮೌಲ್ಯಗಳು ಪಿಳ್ಳೈ ಅವರ ಸುದೀರ್ಘ ವೃತ್ತಿ ಜೀವನದ ಪ್ರಮುಖ ಲಕ್ಷಣಗಳು.

ನೊಬೆಲ್ ಪ್ರಶಸ್ತಿ ಸಮಿತಿಯ ಪ್ರಕಾರ, ನವಿ ಪಿಳ್ಳೈ ತಮ್ಮ ವೃತ್ತಿಜೀವನದ ಆರಂಭದಲ್ಲಿ ವರ್ಣಭೇದ ನೀತಿಯನ್ನು ವಿರೋಧಿಸಿದ ನೆಲ್ಸನ್ ಮಂಡೇಲಾ ಸೇರಿ ಹಲವು ಹೋರಾಟಗಾರರ ಪರವಾಗಿ ವಕೀಲೆಯಾಗಿ ಹೋರಾಡಿದ್ದರು. ನಂತರ ಅವರು ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿ, ಮಹತ್ವದ ಪ್ರಕರಣಗಳ ವಿಚಾರಣೆಯಲ್ಲಿ ತೀರ್ಪು ನೀಡಿದರು.

ನವನೀತಮ್ ನವಿ ಪಿಳ್ಳೈ ಯಾರು?

ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ಪಿಳ್ಳೈ ಕಾನೂನಿನಲ್ಲಿ ಶಿಕ್ಷಣ ಪಡೆದರು. ವರ್ಣಭೇದ ನೀತಿಯನ್ನು ವಿರೋಧಿಸಿ ಹೋರಾಡುತ್ತಿದ್ದ ಜನರಿಗೆ ಕಾನೂನಿನ ಮೂಲಕ ಸಹಾಯ ಮಾಡಿದರು. 1967ರಲ್ಲಿ ಅವರು ತಮ್ಮದೇ ಆದ ಕಾನೂನು ಸಂಸ್ಥೆಯನ್ನು ಸ್ಥಾಪಿಸಿದರು. 1980ರ ದಶಕದಲ್ಲಿ ಅವರು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. 1988ರಲ್ಲಿ ಡಾಕ್ಟರ್ ಆಫ್ ಜುರಿಡಿಕಲ್ ಸೈನ್ಸ್ ಪದವಿಯನ್ನು ಪಡೆದರು.

ಕೆನಡಾದ ಕವಿಯಿತ್ರಿ ಆ್ಯನ್ ಕಾರ್ಸನ್‌ಗೆ 2026ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಣೆ

ಪಿಳ್ಳೈ ಅವರನ್ನು 1995ರಲ್ಲಿ ದಕ್ಷಿಣ ಆಫ್ರಿಕಾದ ಹೈಕೋರ್ಟ್‌ಗೆ ನೇಮಿಸಲಾಯಿತು. ನಾಲ್ಕು ವರ್ಷಗಳ ನಂತರ ಅವರು ರುವಾಂಡಾದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ನ್ಯಾಯಾಧೀಶೆ ಮತ್ತು ಅಧ್ಯಕ್ಷರಾದರು. ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ, ಹಾಗೆಯೇ ಪ್ರಚಾರದ ಮೂಲಕ ದ್ವೇಷ ಹರಡುವ ಕೃತ್ಯಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಅತ್ಯಾಚಾರ, ಲೈಂಗಿಕ ಹಿಂಸೆ ಮತ್ತು ನರಮೇಧಕ್ಕೆ ಪ್ರಚೋದನೆ ನೀಡುವ ಕೃತ್ಯಗಳನ್ನು ಅಂತಾರಾಷ್ಟ್ರೀಯ ಕಾನೂನಿನಡಿ ಗಂಭೀರವಾಗಿ ಪರಿಗಣಿಸುವುದಕ್ಕೆ ನವಿ ಪಿಳ್ಳೈ ಕೊಡುಗೆ ನೀಡಿದರು ಎಂದು ನೊಬೆಲ್ ಪ್ರಶಸ್ತಿ ವೆಬ್‌ಸೈಟ್‌ನಲ್ಲಿರುವ ಅವರ ಜೀವನ ಚರಿತ್ರೆಯಲ್ಲಿ ತಿಳಿಸಲಾಗಿದೆ.

ನವಿ ಪಿಳ್ಳೈ ಅವರನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ಐಸಿಸಿ) ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 2008ರಿಂದ 2014ರವರೆಗೆ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (ಒಎಚ್‌ಸಿಎಚ್‌ಆರ್) ಆಗಿ ಸೇವೆ ಸಲ್ಲಿಸಿದರು. ನವಿ ಪಿಳ್ಳೈ 2021ರಿಂದ 2025ರವರೆಗೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಕುರಿತು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. 2019ರಲ್ಲಿ ಮ್ಯಾನ್ಮಾರ್ ವಿರುದ್ಧ ನರಮೇಧದ ಆರೋಪ ಕೇಳಿಬಂದಿರುವ ಪ್ರಕರಣದಲ್ಲಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ತಾತ್ಕಾಲಿಕ ನ್ಯಾಯಾಧೀಶೆಯಾಗಿ ನೇಮಕಗೊಂಡರು.

ನವಿ ಪಿಳ್ಳೈ ತಮ್ಮ ವೃತ್ತಿ ಜೀವನದಲ್ಲಿ ದೇಶಗಳು ಮತ್ತು ರಾಜಕೀಯ ನಾಯಕರೂ ತಪ್ಪು ಮಾಡಿದರೆ, ಅವರನ್ನೂ ಕಾನೂನಿನ ಪ್ರಕಾರ ತಪ್ಪಿತಸ್ಥರನ್ನಾಗಿ ಮಾಡಬೇಕು ಎಂದು ಒತ್ತಿಹೇಳಿದ್ದಾರೆ. ಯುದ್ಧ, ಹಿಂಸಾಚಾರ ಮತ್ತು ಸಂಘರ್ಷಗಳಿಂದ ತೊಂದರೆಗೊಳಗಾದ ಜನರಿಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.