ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nepal Flodds: ಕ್ಷಣಾರ್ಧದಲ್ಲಿ ಕೊಚ್ಚಿ ಹೋದ ಹಳ್ಳಿಗಳು, ಸೇತುವೆ ಮುಳುಗಡೆ, ವಿದ್ಯುತ್, ಸಂವಹನ ಸಂಪರ್ಕ ಕಡಿತ; 165 ಮಂದಿ ಸಾವು

Nepal Floods: ನೇಪಾಳದಲ್ಲಿ ಬುಧವಾರ ಉಂಟಾದ ಭೀಕರ ಪ್ರವಾಹದಲ್ಲಿ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದು, ಹಲವಾರು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದೆ. ಸುಮಾರು 165 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಹಿಮ ನದಿ ಬಂಡೆ ಮತ್ತು ಮಂಜುಗಡ್ಡೆ ಕುಸಿತಗೊಂಡು ಈ ಭೀಕರ ಪ್ರವಾಹ ಉಂಟಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ತಿಳಿಸಿದೆ.

ಸಂಗ್ರಹ ಚಿತ್ರ

ಕಠ್ಮಂಡು: ಹಿಮಾಲಯದ (Himalaya) ಗಡಿ ಪ್ರದೇಶ ನೇಪಾಳದ (Nepal) ಭಾಗದಲ್ಲಿ ಬುಧವಾರ ಉಂಟಾದ ಭೀಕರ ಪ್ರವಾಹದಿಂದ (Flash Floods) ಸುಮಾರು 165 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯುಂಟು ಮಾಡಿದ ಪ್ರವಾಹದಿಂದಾಗಿ ರಸ್ತೆ, ಸೇತುವೆಗಳು ಕೊಚ್ಚಿಹೋದವು, ಹಲವಾರು ಹಳ್ಳಿಗಳು ಮುಳುಗಡೆಯಾದವು, ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾದವು. ಸಂಪರ್ಕ ಕಡಿತಗೊಂಡು, ಪ್ರವಾಹದಿಂದ ಉಂಟಾದ ಅವಶೇಷಗಳ ನಡುವೆ ರಕ್ಷಣಾ ಕಾರ್ಯಾಚರಣೆ ತಂಡಗಳು ಪರದಾಡುವಂತಾಯಿತು. ನಾಪತ್ತೆಯಾದವರ ಹುಡುಕಾಟ ಕಾರ್ಯಾಚರಣೆಯನ್ನು ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹಕ್ಕೆ ಏನು ಕಾರಣ?

ಭೂಕಂಪನ ಈ ಪ್ರವಾಹಕ್ಕೆ ಕಾರಣ ಎನ್ನಲಾಗುತ್ತಿದ್ದರೂ ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿಯ ಪ್ರಕಾರ ನೇಪಾಳ ಮತ್ತು ಟಿಬೆಟ್ ಗಡಿಯುದ್ದಕ್ಕೂ ಇರುವ ಲೆಂಡೆ ನದಿಯಲ್ಲಿ ಮಂಜುಗಡ್ಡೆ ಮತ್ತು ಬಂಡೆಗಳ ಭೂಕುಸಿತದಿಂದ ಉಂಟಾಗಿದೆ. ನದಿಯ ನೀರು ಭಾರಿ ಗಾತ್ರದ ಶಿಲಾಖಂಡರಾಶಿಗಳನ್ನು ಹೊತ್ತುಕೊಂಡು ಬಹುದೂರದವರೆಗೆ ಸಾಗಿದ್ದು ಹಠಾತ್ ಪ್ರವಾಹಕ್ಕೆ ಕಾರಣ ಎಂದು ತಿಳಿಸಿದೆ.

ನೇಪಾಳದಲ್ಲಿ ಭೀಕರ ಪ್ರವಾಹ: ಸದ್ಗುರು ಈಶಾ ಫೌಂಡೇಶನ್‌ನ 77 ಕೈಲಾಸ ಯಾತ್ರಿಕರು ನಾಪತ್ತೆ

ಈ ಕುರಿತು ಹೇಳಿಕೆ ನೀಡಿರುವ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ಬುಧವಾರ ಬೆಳಗ್ಗೆ 8.37ಕ್ಕೆ ಟಿಬೆಟ್ ಪ್ರದೇಶದಲ್ಲಿ ಭೂಕಂಪನ ಉಂಟಾಗಿದೆ. ಇದರ ಮೂರು ನಿಮಿಷಗಳ ಅನಂತರ ದಿಢೀರ್ ಪ್ರವಾಹ ಕಾಣಿಸಿಕೊಂಡಿದೆ. ಇದರೊಂದಿಗೆ ಹಿಮನದಿಯಲ್ಲಿ ಉಂಟಾದ ಕುಸಿತವು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರವಾಹದಲ್ಲಿ ಮಣ್ಣು, ಕಲ್ಲಿನ ರಾಶಿಯು ಭೋಟೆ ಕೋಶಿ ನದಿಗೆ ಚಲಿಸಿ ರಸುವಾ ಜಿಲ್ಲೆಯ ತಿಮುರೆಯಲ್ಲಿ ತ್ರಿಶೂಲಿ ನದಿಯನ್ನು ಪ್ರವೇಶಿಸಿದೆ ಎಂದು ತಿಳಿಸಿದ್ದಾರೆ.

ಎಲ್ಲಿ ಹಾನಿ?

ಪ್ರವಾಹದಿಂದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ನುವಾಕೋಟ್, ಚಿತಾವಾನ್, ಗೂರ್ಖಾ, ತನಹು ಮತ್ತು ನವಲ್ಪರಾಸಿ ಪ್ರದೇಶಗಳಲ್ಲೂ ಹಾನಿ ಉಂಟು ಮಾಡಿದೆ. ಕಠ್ಮಂಡುವಿನಿಂದ ಸುಮಾರು 70 ಕಿ.ಮೀ ನಿಂದ ಸುಮಾರು 200 ಕಿ.ಮೀ ವರೆಗಿನ ದೂರದಲ್ಲಿ ಈ ಪ್ರವಾಹ ಉಂಟಾಗಿದೆ. ಪ್ರವಾಹದ ತೀವ್ರತೆಗೆ ಹಲವು ಮನೆ, ವಾಹನ, ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ.

ಎಷ್ಟು ಸಾವು ?

ನೇಪಾಳ ಪೊಲೀಸರು ಮಾಹಿತಿ ಪ್ರಕಾರ ಸುಮಾರು 162 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಂವಹನ ಸಂಪರ್ಕ ಕಡಿತಗೊಂಡಿರುವುದರಿಂದ ಮತ್ತು ರಕ್ಷಣಾ ತಂಡಗಳು ಇನ್ನೂ ಹಲವಾರು ಸ್ಥಳಗಳನ್ನು ತಲುಪಲು ಸಾಧ್ಯವಾಗದ ಕಾರಣ ಸಾವುನೋವಿನ ಸ್ಪಷ್ಟ ಅಂಕಿಅಂಶಗಳು ಸಿಕ್ಕಿಲ್ಲ.

ಚೀನಾ ಗಡಿ ಭಾಗದಲ್ಲಿ ಮೂವರು ಸಾವನ್ನಪ್ಪಿದ್ದು, 265 ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನೇಪಾಳದಲ್ಲಿ ಕಾಣೆಯಾದವರಲ್ಲಿ ಕನಿಷ್ಠ 133 ಭಾರತೀಯ ಪ್ರಜೆಗಳು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರಮುಖ ಮಾರ್ಗವಾಗಿರುವ ವಲಸೆ ಕೇಂದ್ರದಲ್ಲಿ ಹಾಜರಿದ್ದ ತನ್ನ 77 ಸದಸ್ಯರು ನಾಪತ್ತೆಯಾಗಿರುವುದಾಗಿ ಇಶಾ ಫೌಂಡೇಶನ್ ತಿಳಿಸಿದೆ.

ಕಾಣೆಯಾದ ವಿದೇಶಿ ಪ್ರಜೆಗಳಲ್ಲಿ ಅಮೆರಿಕ, ಯುಕೆ, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳ ಪ್ರವಾಸಿಗರು ಕೂಡ ಸೇರಿದ್ದಾರೆ. ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಎಂಟು ಪ್ರಜೆಗಳು ಕಾಣೆಯಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಕೂಡ ತಿಳಿಸಿದೆ.



ರಕ್ಷಣಾ ಕಾರ್ಯಾಚರಣೆ

ಪ್ರವಾಹ ಪ್ರದೇಶದಾದ್ಯಂತ ನೇಪಾಳ ಸರ್ಕಾರವು ಸೈನ್ಯ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರನ್ನು ನಿಯೋಜಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ 12 ಹೆಲಿಕಾಪ್ಟರ್‌ಗಳನ್ನು ಕಳುಹಿಸಿದೆ. ಸಯಾಫ್ರುಬೆಸಿಯಿಂದ ಆರು, ಮೈಲುಂಗ್‌ನಿಂದ ಇಬ್ಬರು ಮತ್ತು ಧುಂಚೆಯಿಂದ ನಾಲ್ವರನ್ನು ರಕ್ಷಿಸಲಾಗಿದೆ. ರಸ್ತೆ, ಸಂವಹನ ಮತ್ತು ವಿದ್ಯುತ್ ಮೂಲಸೌಕರ್ಯಗಳು ನಾಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರವಾಹದ ನೀರು ಮತ್ತು ಅವಶೇಷಗಳಿಂದ ನಿರಂತರ ಅಪಾಯ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳು ಇಳಿಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ತ್ರಿಶೂಲಿಯಲ್ಲಿರುವ ಮಿಲಿಟರಿ ತರಬೇತಿ ಕೇಂದ್ರ ಸಂಖ್ಯೆ 1 ರಲ್ಲಿ ತುರ್ತು ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ವಿವಿಧ ಸ್ಥಳಗಳಿಂದ ಸುಮಾರು 100 ಜನರನ್ನು ರಕ್ಷಿಸಲಾಗಿದೆ. 30 ಮಂದಿ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದ ಅಪಾಯ ಇನ್ನು ಇದೆ ಎಂದು ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗವು ತಿಳಿಸಿದೆ. ಹೀಗಾಗಿ ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳು ಎಚ್ಚರಿಕೆಯನ್ನು ಘೋಷಿಸಲಾಗಿದೆ.

ಭಾರಿ ನಷ್ಟ

ನೇಪಾಳದ ವಿದ್ಯುತ್ ವಲಯದ ಮೇಲೆ ಪ್ರವಾಹವು ತೀವ್ರ ಪರಿಣಾಮವನ್ನು ಉಂಟು ಮಾಡಿದೆ. ನೇಪಾಳದ ಸ್ವತಂತ್ರ ವಿದ್ಯುತ್ ಉತ್ಪಾದಕರ ಸಂಘದ ಮಾಹಿತಿ ಪ್ರಕಾರ 354 ಮೆಗಾವ್ಯಾಟ್ ಒಟ್ಟು ಸಾಮರ್ಥ್ಯದ ಎಂಟು ಕಾರ್ಯಾಚರಣಾ ಜಲವಿದ್ಯುತ್ ಯೋಜನೆಗಳು ಹಾಗೂ ರಸುವಾ ಮತ್ತು ನುವಕೋಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಐದು ಹೆಚ್ಚುವರಿ ಯೋಜನೆಗಳು ಹಾನಿಗೀಡಾಗಿವೆ.

ಈಗಾಗಲೇ ನೇಪಾಳಕ್ಕೆ ಭಾರತವು ಮಾನವೀಯ ನೆರವು ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ ನವದೆಹಲಿಯು ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

ತುರ್ತು ಸಹಾಯವಾಣಿ

ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳ ರಕ್ಷಣೆಗಾಗಿ ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಸಹಾಯಕ್ಕಾಗಿ ತುರ್ತು ಸಂಖ್ಯೆಗಳನ್ನು ನೀಡಿದೆ: +977 985 131 6807 ಮತ್ತು +977 970 910 7500. ನೇಪಾಳ ಪ್ರವಾಸೋದ್ಯಮ ಮಂಡಳಿಯು ಟೋಲ್-ಫ್ರೀ ಸಂಖ್ಯೆ 1234, ಹಾಟ್‌ಲೈನ್ 1144 ಮತ್ತು ಪ್ರವಾಸಿ ಪೊಲೀಸ್ ಸಂಖ್ಯೆ 9851289445 ಸೇರಿದಂತೆ ತುರ್ತು ಸಹಾಯವಾಣಿಯನ್ನು ತೆರೆದಿದೆ.

ಚೀನಾ ತನ್ನ ಗಡಿಯ ಬದಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು, ಅಪಾಯದಲ್ಲಿರುವ ಜನರನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ನೆರವು ನೀಡಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪೀಪಲ್ಸ್ ಸಶಸ್ತ್ರ ಪೊಲೀಸ್ ಸುಮಾರು 145 ಸಿಬ್ಬಂದಿಯನ್ನು ಪೀಡಿತ ಗಡಿ ಪ್ರದೇಶಕ್ಕೆ ಕಳುಹಿಸೈಡ್ ಎನ್ನಲಾಗಿದೆ.

ನೇಪಾಳದಲ್ಲಿ ಭಾರಿ ಪ್ರವಾಹ: 8 ಮಂದಿ ಸಾವು, 105 ಭಾರತೀಯರು ನಾಪತ್ತೆ

ವಿಶ್ವಸಂಸ್ಥೆಯು ಸಂತ್ರಸ್ತರಿಗೆ ಸಹಾಯ ಮಾಡಲು ಸರಬರಾಜು ಮತ್ತು ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತಿದೆ. ದಕ್ಷಿಣ ಕೊರಿಯಾ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ಕಳುಹಿಸುತ್ತಿದೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author