ಟೆಲ್ ಅವೀವ್: ಫ್ಲೈದುಬೈ (Flydubai) ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಮೇಲೆ ಹಲ್ಲೆ ಮಾಡಿ ವಿಮಾನ ಹೈಜಾಕ್ ಮಾಡಲು ಯತ್ನಿಸಿದ್ದ ಪೈಲಟ್ ತೀವ್ರಗಾಮಿ ಚಿಂತನೆಗೆ ಒಳಗಾಗಿದ್ದ. ಒಳಗಾಗಿದ್ದ ಮತ್ತು ಆತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿದ್ದ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Netanyahu) ತಿಳಿಸಿದ್ದಾರೆ. ಫ್ಲೈದುಬೈ FZ1073 ವಿಮಾನದಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್, ಹಾರಾಟದ ಮಧ್ಯೆ ಭಾರತೀಯ ಮೂಲದ ಮುಖ್ಯ ಪೈಲಟ್ (ಕ್ಯಾಪ್ಟನ್) ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ವಿಮಾನವನ್ನು ಅಪಘಾತಕ್ಕೀಡುಮಾಡಲು ಯತ್ನಿಸಿದ್ದ.
ಅಮೆರಿಕದ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, "ಆತನ ವೈಯಕ್ತಿಕ ಮಾಹಿತಿ ಹಾಗೂ ಹಿನ್ನೆಲೆಯನ್ನು ಗಮನಿಸಿದಾಗ ಆತ ತೀವ್ರಗಾಮಿ ಇಸ್ಲಾಮಿಕ್ ಸಿದ್ಧಾಂತಕ್ಕೆ ಒಳಗಾಗಿರುವುದು ಮತ್ತು ವಿಮಾನವನ್ನು ಪತನಗೊಳಿಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ" ಎಂದಿದ್ದಾರೆ. ಜೊತೆಗೆ ಆತನನ್ನು ನಿಯಂತ್ರಿಸಿದಾಗ ಆತ "ನನ್ನನ್ನು ಕೊಲ್ಲು, ನನ್ನನ್ನು ಕೊಲ್ಲು" ಎಂದು ಕಿರುಚಾಡುತ್ತಿದ್ದರಿಂದ ಆತ ಆತ್ಮಹತ್ಯೆಯ ಮನಸ್ಥಿತಿಯಲ್ಲಿದ್ದ ಎಂಬುದು ದೃಢಪಡುತ್ತದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲಿ ಮಾಧ್ಯಮಗಳ ವರದಿಯ ಪ್ರಕಾರ, ಆರೋಪಿ ಸಹ-ಪೈಲಟ್ ತೀವ್ರ ಧಾರ್ಮಿಕ ಮೂಲಭೂತವಾದಿ ನಡವಳಿಕೆ ಹೊಂದಿದ್ದ ಹಾಗೂ ಮಹಿಳೆಯರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸುತ್ತಿದ್ದ ಎಂದು ಆತನ ಸಹೋದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ. ಸಹ-ಪೈಲಟ್‌ನ ಹೆಸರನ್ನು ಈ ವರೆಗೆ ಬಹಿರಂಗಪಡಿಸಲಾಗಿಲ್ಲ. ಸೌದಿ ಅರೇಬಿಯಾದಿಂದ ಅಬುಧಾಬಿಗೆ ಸ್ಥಳಾಂತರಿಸಕಲಾಗಿದ್ದು, ಅಲ್ಲಿ ಆತನನ್ನು ಬಂಧಿಸಲಾಗಿದೆ.
ಈ ಘಟನೆಗೆ ಭಯೋತ್ಪಾದನೆಗೆ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗುರುವಾರ ತಿಳಿಸಿದೆ. ಆತನ ಉದ್ದೇಶವೇನಾಗಿತ್ತು ಮತ್ತು ಅವನು ವಿಮಾನವನ್ನು ಅಪಘಾತಕ್ಕೀಡುಮಾಡಲು ಅಥವಾ ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬೇರೆ ದೇಶದಲ್ಲಿ ಲ್ಯಾಂಡ್ ಮಾಡಲು ತಯಾರಿ ನಡೆಸಿದ್ದನೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ವಕ್ತಾರರ ಪ್ರಕಾರ, ಇಸ್ರೇಲ್‌ನ ತನಿಖಾಧಿಕಾರಿಗಳು ಸಹ ಯುಎಇ ತನಿಖಾ ತಂಡದೊಂದಿಗೆ ಕೈಜೋಡಿಸಲಿದ್ದು, ಆರೋಪಿಯ ನಿಜವಾದ ಉದ್ದೇಶ ಮತ್ತು ಆತನ ಹಿನ್ನೆಲೆಯನ್ನು ಜಂಟಿಯಾಗಿ ಪ್ರಶ್ನಿಸಲಿದ್ದಾರೆ. ಇದೇ ವೇಳೆ, ಆರೋಪಿಯನ್ನು ತಮಗೆ ಹಸ್ತಾಂತರಿಸುವಂತೆಯೂ ಇಸ್ರೇಲ್ ಕೋರಿದೆ ಎನ್ನಲಾಗಿದೆ. ಆರೋಪಿ ಸಹ-ಪೈಲಟ್ ಕಾಕ್‌ಪಿಟ್‌ಗೆ ಚಾಕು ಅಥವಾ ಕೊಡಲಿಯಂತಹ ಆಯುಧವನ್ನು ತರಲು ಹೇಗೆ ಸಾಧ್ಯವಾಯಿತು? ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಲೋಪವಾಗಿದೆಯೇ? ಅಥವಾ ವಿಮಾನದಲ್ಲೇ ತುರ್ತು ಪರಿಸ್ಥಿತಿಗೆ ಇಡುವ ಸುರಕ್ಷತಾ ಕೊಡಲಿಯನ್ನು ಆತ ಬಳಸಿದ್ದನೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.