ʼʼಭಾರತದ ಪೈಲಟ್ ಮೇಲೆ ದಾಳಿ ನಡೆಸಿದ ಫ್ಲೈದುಬೈ ಸಹ-ಪೈಲಟ್ ಮತಾಂಧನಾಗಿದ್ದ, ಸ್ತ್ರೀಯರಿಗೆ ಶೇಕ್ ಹ್ಯಾಂಡ್ ಮಾಡುತ್ತಿರಲಿಲ್ಲʼʼ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಹೋದ್ಯೋಗಿ
Flydubai: ಯುಎಇಯ ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಪೈಲಟ್ ಭಾರತದ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿ ಸಹ-ಪೈಲಟ್ ಬಗ್ಗೆ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಆತ ಮತಾಂಧನಾಗಿದ್ದ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ -
ಟೆಲ್ ಅವೀವ್, ಅ. 1: ಯುಎಇಯ ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ ಬುಧವಾರ (ಸೆಪ್ಟೆಂಬರ್ 30) ಹೈಡ್ರಾಮಾವೇ ನಡೆದಿದ್ದು, ಹೈಜಾಕ್ ಮಾಡಲು ಯತ್ನಿಸಿದ ಸಹ-ಪೈಲಟ್ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchha) ಅವರಿಗೆ ಕೊಡಲಿಯಿಂದ ಇರಿದು ಗಾಯಗೊಳಿಸಿದ್ದಾನೆ. ತೀವ್ರ ಗಾಯಗೊಂಡರೂ ಸ್ಮಿತ್ ಮಚ್ಚಾರ್ ಕಾಕ್‌ಪಿಟ್‌ನ ಬಾಗಿಲು ತೆರೆದು ಸಹ ಪೈಲಟ್‌ನನ್ನು ನಿಯಂತ್ರಿಸಲು ಸಫಲರಾಗಿದ್ದಾರೆ. ಬಳಿಕ ಬೇರೊಬ್ಬ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬೂಕ್ ಸೇನಾನೆಲೆಯಲ್ಲಿ ಇಳಿಸಿದ್ದಾರೆ. ಇದೀಗ ದಾಳಿ ನಡೆಸಿದ ಒಮನ್ ಮೂಲದ ಸಹ ಪೈಲಟ್ ಬಗ್ಗೆ ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಆತ ತೀವ್ರ ಮತಾಂಧನಾಗಿದ್ದ ಎಂದು ಆತನೊಂದಿಗೆ ಕಾರ್ಯ ನಿರ್ವಹಿಸಿದ ಮತ್ತೊಬ್ಬ ಪೈಲಟ್ ತಿಳಿಸಿದ್ದಾರೆ.
ಮಚ್ಚಾರ್ ಮೇಲೆ ದಾಳಿ ನಡೆಸಿದ್ದ ಸಹ-ಪೈಲಟ್ ತೀವ್ರ ಧಾರ್ಮಿಕ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದ ಎಂದು ಅವರು ಹೇಳಿದ್ದಾರೆ. "ಆತ ದಿನವಿಡೀ ಪ್ರಾರ್ಥನೆ ಮಾಡುತ್ತಿದ್ದ ಹಾಗೂ ಮಹಿಳೆಯರೊಂದಿಗೆ ಕೈಕುಲುಕಲು ನಿರಾಕರಿಸುತ್ತಿದ್ದ" ಎಂದು ಪೈಲಟ್ 'ಚಾನೆಲ್ 16'ನ ವರದಿಗಾರ ಜತೆ ಮಾತನಾಡುತ್ತ ವಿವರಿಸಿದ್ದಾರೆ.
ಸಹ-ಪೈಲಟ್ ಬಗ್ಗೆ ಸಹೋದ್ಯೋಗಿ ಹೇಳಿಕೆ:
🚨 Omani co-pilot showed extreme religious behaviour, refused to shake hands with women, reveals flydubai colleague
— Maverick (@PainInYourFeed) October 1, 2026
🗞 The Omani co-pilot has been described as a ‘religious extremist’ by another fellow pilot who spoke to an Israeli newspaper
🗞 Israel has called the incident an… pic.twitter.com/IkGkVgiaRo
ವರದಿಗಳ ಪ್ರಕಾರ ಆತ ಒಮನ್‌ನ ಪ್ರಜೆಯಾಗಿದ್ದು, 8 ತಿಂಗಳ ಹಿಂದಷ್ಟೇ ಈ ವಿಮಾನಯಾನ ಸಂಸ್ಥೆಗೆ ಸೇರಿದ್ದ. ಇಸ್ರೇಲ್ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ. ಆದಾಗ್ಯೂ ಯುಎಇ ಮತ್ತು ಫ್ಲೈದುಬೈ ಸಂಸ್ಥೆ ಭಯೋತ್ಪಾದಕ ಕೃತ್ಯ ಎನ್ನುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ದಾಳಿಯು ಭಯೋತ್ಪಾದನಾ ಕೃತ್ಯವೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಸುವುದಾಗಿ ಯುಎಇ ತಿಳಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌ಗೆ ಇರುವ ಎಲ್ಲ ವಿಮಾನಯಾನ ಸೇವೆಗಳನ್ನು ಫ್ಲೈದುಬೈ ರದ್ದುಗೊಳಿಸಿದೆ.
ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದಲ್ಲ ಕೊಡಲಿಯಿಂದ ಹಲ್ಲೆ
ಬೆಂಜಮಿನ್ ನೆತನ್ಯಾಹು ಹೇಳಿದ್ದೇನು?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 'ಫಾಕ್ಸ್ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ, ಒಮಾನ್ ಮೂಲದ ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದ ಎಂದು ಹೇಳಿದ್ದಾರೆ. ಫ್ಲೈದುಬೈ ವಿಮಾನದ ಸಹ-ಪೈಲಟ್‌ಗೆ ಇರಾನ್‌ನೊಂದಿಗೆ ಏನಾದರೂ ಸಂಪರ್ಕವಿದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದಿದ್ದಾರೆ.
ಸೌದಿ ಅರೇಬಿಯಾದಲ್ಲಿ ವಿಮಾನ ಇಳಿದ ನಂತರ ಸಹ ಪೈಲಟ್‌ನನ್ನು ಬಂಧಿಸಲಾಯಿತು. ಆತನ ಕೃತ್ಯದ ಹಿಂದಿನ ಉದ್ದೇಶವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಇಸ್ರೇಲ್ ಪ್ರಕಾರ ಅಮೆರಿಕದಲ್ಲಿ ನಡೆದ 9/11 ಉಗ್ರ ದಾಳಿ ರೀತಿ ಆಕ್ರಮಣ ನಡೆಸಲು ಉದ್ದೇಶಿಸಲಾಗಿತ್ತು. ಇಸ್ರೇಲ್ ಪ್ರಧಾನಿ ಭವನಕ್ಕೆ ವಿಮಾನ ಡಿಕ್ಕಿ ಹೊಡೆಸಲು ಸಹ-ಪೈಲಟ್ ಸಂಚು ರೂಪಿಸಿದ್ದ ಎನ್ನುವ ಅನುಮಾನವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಭೀಕರ ದಾಳಿಯ ಸಂಚನ್ನು ಭಾರತದ ಪೈಲಟ್ ವಿಫಲಗೊಳಿಸಿದ್ದು, ಜಗತ್ತಿನಾದ್ಯಂತ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
9/11 ಮಾದರಿ ದಾಳಿ ಸಂಚು ವಿಫಲಗೊಳಿಸಿ 180 ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್
ವಿಮಾನ ಟೇಕಾಫ್ ಆಗಿ 2 ಗಂಟೆಗಳ ನಂತರ ಎಟಿಸಿಗೆ ತುರ್ತು ಕೋಡ್ ರವಾನೆಯಾಗಿತ್ತು. ಮೊದಲು ತುರ್ತು ಭೂಸ್ಪರ್ಶದ ಅಂತಾರಾಷ್ಟ್ರೀಯ ಕೋಡ್ 7700 ಕಳುಹಿಸಲಾಗಿತ್ತು. ಅದಾದ ಬಳಿಕ ಹೈಜಾಕ್ ಕೋಡ್ 7500 ರವಾನೆಯಾಗಿತ್ತು. ವಿಮಾನ ಹೈಜಾಕ್ ಆಗಿದೆ ಎನ್ನುವ ಅನುಮಾನದಲ್ಲಿ ವಾಯುಪಡೆಯ ವಿಮಾನಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.