ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಹಾರವಿಲ್ಲ, ಔಷಧವಿಲ್ಲ; ಪ್ರತಿಭಟನಕಾರರನ್ನು ಹತ್ತಿಕ್ಕಲು ಪಿಒಕೆ ಮೇಲೆ ದಿಗ್ಬಂಧನ ವಿಧಿಸಿದ ಪಾಕಿಸ್ತಾನ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪಾಕಿಸ್ತಾನ ಸರ್ಕಾರವು ದಿಗ್ಬಂಧನ ವಿಧಿಸಿದೆ. ಆಹಾರ, ಇಂಧನ, ಔಷಧ ಪೂರೈಕೆಯಾಗದಂತೆ ಮಾಡಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ. ಹೆಚ್ಚುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಆಹಾರ, ಔಷಧ ಸರಬರಾಜಿಗೆ ಅಡ್ಡಿ ಪಡಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಈ ಆರೋಪಗಳನ್ನು ಪಾಕಿಸ್ತಾನ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಜನಜೀವನ ಈಗ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಒಂದೆಡೆ ನಿರಂತರ ಪ್ರತಿಭಟನೆ (POK protest) ನಡೆಯುತ್ತಿದೆ. ಇನ್ನೊಂದೆಡೆ ಆಹಾರ, ಔಷಧ, ಇಂಧನದ ಕೊರತೆ ಎದುರಾಗಿದೆ. ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರವು (Pakistan govt) ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿಗೆ ಅಡ್ಡಿಪಡಿಸಿದೆ. ಇದು ಸಾಮಾನ್ಯ ಜನಜೀವನದ ಮೇಲೆ ಪ್ರಭಾವ ಬೀರಿದೆ. ಅಗತ್ಯವಸ್ತುಗಳು ಜನರಿಗೆ ಸಿಗದಂತೆ ಮಾಡಿ ಪ್ರತಿಭಟನೆಯನ್ನು ನಿಯಂತ್ರಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೇ ಪಾಕಿಸ್ತಾನ ಅಧಿಕಾರಿಗಳು ಇದು ಸುಳ್ಳು ಆರೋಪ ಎಂದು ಹೇಳಿದ್ದಾರೆ.

ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಸರ್ಕಾರಿ ವಿರೋಧಿ ದಂಗೆಯನ್ನು ಹತ್ತಿಕ್ಕಲು ಇಸ್ಲಾಮಾಬಾದ್ ಆಹಾರ, ಇಂಧನ ಮತ್ತು ಔಷಧಗಳ ಸರಬರಾಜನ್ನು ನಿರ್ಬಂಧಿಸಿದೆ. ಈ ಮೂಲಕ ಪ್ರತಿಭಟನಾಕಾರರು ಶರಣಾಗುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.

ವೆನೆಜುವೆಲಾದಲ್ಲಿ ಶತಮಾನದಲ್ಲೇ ಅತ್ಯಂತ ಪ್ರಬಲ ಭೂಕಂಪ: ಕುಸಿದ ಕಟ್ಟಡಗಳು ಸುನಾಮಿ ಎಚ್ಚರಿಕೆ, 32 ಸಾವು 700 ಮಂದಿಗೆ ಗಂಭೀರ ಗಾಯ

ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗಿನ ಪ್ರದೇಶವನ್ನು ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ ಎಂದು ಸ್ಥಳೀಯರು, ಟ್ರಕ್ ಚಾಲಕರು ಮತ್ತು ವಿರೋಧ ಪಕ್ಷದ ನಾಯಕರು ಸ್ಥಳೀಯ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಅಧಿಕಾರಿಗಳು, ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ, ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜೂನ್ ತಿಂಗಳ ಆರಂಭದಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಪಡೆಗಳು ಸಾಕಷ್ಟು ಹಿಂಸಾತ್ಮಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಪ್ರತಿಭಟನಾಕಾರರು ಬಗ್ಗದೇ ಇರುವುದರಿಂದ ಈಗ ಅಗತ್ಯ ಮೂಲಭೂತ ವಸ್ತುಗಳ ಪೂರೈಕೆ ಮಾರ್ಗವನ್ನು ಕಡಿತಗೊಳಿಸಿದೆ. ಈಗಾಗಲೇ ಮಿಲಿಟರಿ ಮತ್ತು ನಾಗರಿಕರ ನಡುವಿನ ಘರ್ಷಣೆಯಿಂದ ಸುಮಾರು 58 ಮಂದಿ ಸಾವನ್ನಪ್ಪಿದ್ದಾರೆ.

ಹಲವಾರು ಪಟ್ಟಣಗಳಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿರುವುದರಿಂದ ವ್ಯಾಪಾರ ವಹಿವಾಟಿಗೂ ಅಡ್ಡಿಯಾಗಿದ್ದು, ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಹೆಚ್ಚಿನ ಔಷಧಾಲಯಗಳು ಮುಚ್ಚಲ್ಪಟ್ಟಿದ್ದರಿಂದ ಔಷಧಗಳು ಕೂಡ ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಅನೇಕ ಅಂಗಡಿಗಳಲ್ಲಿ ಸ್ಟಾಕ್ ಕೊರತೆಯಾಗಿದೆ. ಆಹಾರ ವಸ್ತುಗಳು ಕೂಡ ಸಿಗದೇ ವಾರಗಳಿಂದ ತೊಂದರೆ ಅನುಭವಿಸುತ್ತಿರುವುದಾಗಿ ಕೂಡ ಸ್ಥಳೀಯರು ಮಾಧ್ಯಮಗಳ ಮುಂದೆ ಗೋಳು ತೋಡಿಕೊಂಡಿದ್ದಾರೆ. ಪೂಂಚ್ ಮತ್ತು ಮುಜಫರಾಬಾದ್ ಜಿಲ್ಲೆಗಳಲ್ಲಿ ಪೆಟ್ರೋಲ್ ಪಂಪ್‌ಗಳು ಮುಚ್ಚಲ್ಪಟ್ಟಿವೆ. ವಾಹನ ಚಾಲಕರು ತಮ್ಮ ವಾಹನಗಳನ್ನು ಚಾಲನೆಯಲ್ಲಿಡಲು ಕಪ್ಪು ಮಾರುಕಟ್ಟೆಯಲ್ಲಿ ಇಂಧನವನ್ನು ಖರೀದಿಸುತ್ತಿದ್ದಾರೆ. ಪೂಂಚ್ ವಲಯ, ರಾವಲಕೋಟ್, ಬಾಗ್ ಮತ್ತು ನೀಲಂ ಕಣಿವೆಯಲ್ಲಿ ಆಹಾರ, ಇಂಧನ ಮತ್ತು ಔಷಧಗಳ ಕೊರತೆ ತೀವ್ರವಾಗಿದೆ.

ಅಗತ್ಯ ವಸ್ತುಗಳ ಕೊರತೆ ಹೆಚ್ಚುತ್ತಿದ್ದಂತೆ ಅನೇಕರು ಅಗತ್ಯ ವಸ್ತುಗಳನ್ನು ಖರೀದಿಸಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದಾರೆ. ಮುಜಫರಾಬಾದ್ ನಿವಾಸಿಗಳು ಆಹಾರ ಮತ್ತು ಇಂಧನವನ್ನು ಖರೀದಿಸಲು ನೆರೆಯ ಖೈಬರ್ ಪಖ್ತುನ್ಖ್ವಾಕ್ಕೆ ತೆರಳುತ್ತಿದ್ದಾರೆ. ಪೂಂಚ್ ವಲಯ, ರಾವಲಕೋಟ್, ಬಾಗ್ ಮತ್ತು ನೀಲಂ ಕಣಿವೆಯ ನಿವಾಸಿಗಳು ಹಿಟ್ಟು, ಅಕ್ಕಿ, ಸಕ್ಕರೆ, ಬೇಳೆ, ಔಷಧಗಳು ಮತ್ತು ಪೆಟ್ರೋಲ್ ಖರೀದಿಸಲು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ಗೆ ಪ್ರಯಾಣಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಮಸ್ಯೆ ತೀವ್ರವಾಗಿ ಹದಗೆಡುತ್ತಿದ್ದರೂ ಕೂಡ ಈ ಸರಕುಗಳನ್ನು ಪಿಒಕೆಗೆ ತಲುಪದಂತೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆಹಾರ, ಔಷಧ ಮತ್ತು ಇಂಧನವನ್ನು ಸಾಗಿಸುವ ವಾಹನಗನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆಯಲಾಗುತ್ತಿದೆ. ಕೆಲವೆಡೆ ರಸ್ತೆ ತಡೆಗಳ ನಿರ್ಬಂಧಗಳಿಂದ ಸರಬರಾಜಿಗೆ ಅಡ್ಡಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ನವೀದ್, ರಾವಲ್ಪಿಂಡಿಯಲ್ಲಿ ಅಗತ್ಯ ವಸ್ತು ಖರೀದಿ ಮಾಡಿ ಬರುತ್ತಿದ್ದಾಗ ಆಜಾದ್ ಪಟ್ಟನ್ ಬಳಿ ತಮ್ಮ ವಾಹನವನ್ನು ಪೊಲೀಸರು ತಡೆದರು. ನನ್ನ ಮನೆಯಲ್ಲಿ ಹಸಿವಿನಿಂದ ಎಲ್ಲರೂ ನರಳುತ್ತಿದ್ದರೆ. ಆಹಾರ ಮತ್ತು ಪಾನೀಯಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡಿ ಎಂದು ತುಂಬಾ ಬೇಡಿಕೊಂಡೆ. ಹೆಂಡತಿ ಗರ್ಭಿಣಿಯಾಗಿದ್ದಾಳೆ. ಅವಳಿಗೆ ಔಷಧ ಸಿಗಬೇಕಿದೆ ಎಂದು ಕೂಡ ಹೇಳಿದೆ. ಆದರೆ ಪೊಲೀಸರು ಅದನ್ನು ಲೆಕ್ಕಿಸಲಿಲ್ಲ. ನೀವು ಹೋಗಿ. ಆದರೆ ಆಹಾರ, ಪಾನೀಯ ಮತ್ತು ಔಷಧಗಳನ್ನು ಎಸೆದು ಹೋಗಬೇಕು. ಇಲ್ಲವಾದರೆ ಇಲ್ಲಿಂದ ಹಿಂದಕ್ಕೆ ಹೋಗಿ ಎಂದು ಅಳಲು ತೋಡಿಕೊಂಡರು.

ಹಿಟ್ಟು, ಅಕ್ಕಿ, ಬೇಳೆ, ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳನ್ನು ಆಜಾದ್ ಪಟ್ಟನ್ ಮತ್ತು ಫಾಗ್ವಾರಿ ಬಳಿಯ ಚೆಕ್‌ಪೋಸ್ಟ್‌ಗಳಲ್ಲಿ ತಡೆಹಿಡಿಯಲಾಗಿದೆ. ಹಲವು ದಿನಗಳಿಂದ ವಾಹನಗಳು ಇಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ಸರಕುಗಳು ಹಾಳಾಗುತ್ತಿವೆ ಎಂದು ಹಲವಾರು ಟ್ರಕ್ ಚಾಲಕರು ಆರೋಪಿಸಿದ್ದಾರೆ.

ಈ ನಡುವೆ ಪಾಕಿಸ್ತಾನದ ಅತಿದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೂಡ ಪಿಒಕೆಗೆ ಅಗತ್ಯ ಸಾಮಗ್ರಿಗಳು ತಲುಪದಂತೆ ಪಾಕಿಸ್ತಾನಿ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಆರೋಪಿಸಿದೆ.

ಈ ಕುರಿತು ಎಕ್ಸ್‌ನಲ್ಲಿನ ಪೋಸ್ಟ್ ಮಾಡಿರುವ ಅದು ಆಜಾದ್ ಪಟ್ಟನ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಾಗುವ ಪ್ರಯಾಣಿಕರನ್ನು ತಡೆಯಲಾಗುತ್ತಿದೆ. ಆಹಾರ, ಕುಡಿಯುವ ನೀರು ಮತ್ತು ಜೀವ ಉಳಿಸುವ ಔಷಧಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದು ಅತ್ಯಂತ ಕೆಟ್ಟ ದಬ್ಬಾಳಿಕೆ ಎಂದು ಹೇಳಿದೆ.

ಉಕ್ರೇನ್‌ನಲ್ಲಿ ಭಾರತೀಯ ಸೈನಿಕರ ನಿಯೋಜನೆ; ಜೆ.ಡಿ. ವ್ಯಾನ್ಸ್ ಪ್ರಸ್ತಾವನೆಗೆ ಡೊನಾಲ್ಡ್‌ ಟ್ರಂಪ್ ಬ್ರೇಕ್

ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಪೊಲೀಸ್ ಮುಖ್ಯಸ್ಥರು ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪೂಂಚ್, ಮುಜಫರಾಬಾದ್ ಮತ್ತು ನೀಲಮ್ ಕಣಿವೆಯ ಆಡಳಿತಗಾರರು ಪಿಒಕೆಗೆ ಸಾಗುವ ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಯಾವುದೇ ವಾಹನಗಳನ್ನು ನಿಲ್ಲಿಸಲಾಗಿಲ್ಲ ಮತ್ತು ಆಹಾರ ವಿತರಣೆ ಮುಂದುವರೆದಿದೆ ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author