DSS Protest: ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ 10 ಕಿ.ಮೀ. ಕಾಲ್ನಡಿಗೆ ಜಾಥಾ; ಟೆಂಟ್ ತೆರವುಗೊಳಿಸಿದ್ದಕ್ಕೆ ಆಕ್ರೋಶ, ಅನಿರ್ದಿಷ್ಟಾವಧಿ ಧರಣಿ ಆರಂಭ
ಗ್ರಾಮದಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿವರೆಗೆ ಸುಮಾರು 10 ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಸಿದ ನೂರಾರು ರೈತರು ಮತ್ತು ಹೋರಾಟಗಾರರು, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವು ದಾಗಿ ಘೋಷಿಸಿದರು.
ಸಿಂಗಾಟಕದಿರೇನಹಳ್ಳಿ ಗ್ರಾಮದ ದಲಿತ ರೈತರ ಭೂಮಿಯನ್ನು ಅರಣ್ಯ ಇಲಾಖೆ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿ, ದಲಿತ ಸಂಘರ್ಷ ಸಮಿತಿ (ದಸಂಸ) ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು -
ಚಿಕ್ಕಬಳ್ಳಾಪುರ: ಸಿಂಗಾಟಕದಿರೇನಹಳ್ಳಿ ಗ್ರಾಮದ ದಲಿತ ರೈತರ ಭೂಮಿಯನ್ನು ಅರಣ್ಯ ಇಲಾಖೆ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿ, ದಲಿತ ಸಂಘರ್ಷ ಸಮಿತಿ (ದಸಂಸ) ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಗ್ರಾಮದಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿವರೆಗೆ ಸುಮಾರು 10 ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಸಿದ ನೂರಾರು ರೈತರು ಮತ್ತು ಹೋರಾಟಗಾರರು, ನ್ಯಾಯ ಸಿಗುವವರೆಗೆ ಹೋರಾಟ ಮುಂದು ವರಿಸುವುದಾಗಿ ಘೋಷಿಸಿದರು.
ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತ ಕುಟುಂಬಗಳು ಮತ್ತು ದಸಂಸ ಕಾರ್ಯಕರ್ತರು ವ್ಯವಸ್ಥೆಯ ವಿರುದ್ಧ ಘೋಷಣೆಗಳೊಂದಿಗೆ ಕಾಲ್ನಡಿಗೆಯಲ್ಲಿ ಬಂದು ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Chikkaballapur News: ಸಮಗ್ರ ಆರೋಗ್ಯ ಅಭಿಯಾನಕ್ಕೆ ಶೀಘ್ರ ಚಾಲನೆ: ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಕರೆ
ಆದರೆ ಪ್ರತಿಭಟನೆಗಾಗಿ ಪೂರ್ವಾನುಮತಿ ಪಡೆದು ನಿರ್ಮಿಸಿದ್ದ ಟೆಂಟ್ ಅನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣ ವಾಯಿತು.
ಅಂಬೇಡ್ಕರ್ ಭಾವಚಿತ್ರ ಅಳವಡಿಸಿದ್ದ ಟೆಂಟ್ ಅನ್ನು ತೆರವುಗೊಳಿಸಿರುವುದು ದಲಿತರ ಭಾವನೆ ಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿ ರಾಜಕಾಂತ್ ಮಾತನಾಡಿ, 1972-73ರಲ್ಲಿಯೇ ಕಂದಾಯ ಇಲಾಖೆ ಸಾಗುವಳಿ ಚೀಟಿ, ಪಹಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ ದಲಿತ ಕುಟುಂಬಗಳಿಗೆ ಭೂಮಿಯನ್ನು ಹಂಚಿಕೆ ಮಾಡಿತ್ತು. ಅಂದಿನಿಂದಲೂ ರೈತರು ಕೃಷಿ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಈ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಹೇಳಿ ರೈತರನ್ನು ಒಕ್ಕಲಿಬ್ಬಿಸಲು ಮುಂದಾಗಿದೆ ಎಂದು ದೂರಿದರು.
"ಪ್ರತಿಭಟನೆಗೆ ಸಂಬಂಧಿಸಿದಂತೆ ಎಲ್ಲ ಅನುಮತಿಗಳನ್ನೂ ಪಡೆದುಕೊಂಡಿದ್ದೆವು. ಅಧಿಕಾರಿಗಳೇ ಸೂಚಿಸಿದ ಸ್ಥಳದಲ್ಲಿ ಟೆಂಟ್ ಹಾಕಲಾಗಿತ್ತು. ಆದರೆ ನಾವು ಪ್ರತಿಭಟನೆ ಸ್ಥಳಕ್ಕೆ ತಲುಪುವಷ್ಟರಲ್ಲಿ ಟೆಂಟ್ ಕಿತ್ತೆಸೆಯಲಾಗಿದೆ. ಇದು ದಲಿತರ ಮೇಲಿನ ದೌರ್ಜನ್ಯ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸಿದರು.
ಅಗತ್ಯ ದಾಖಲಾತಿಗಳನ್ನುಳ್ಳ ದಲಿತ ರೈತರ ಪರವಾಗಿ ನಿಲ್ಲಬೇಕಾದ ಕಂದಾಯ ಇಲಾಖೆ ಮತ್ತು ಜನಪ್ರತಿನಿಧಿಗಳು ಮೌನ ವಹಿಸಿರುವುದು ನೋವಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನ್ಯಾಯ ದೊರೆಯುವವರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲಾಗುವುದು ಎಂದು ಘೋಷಿಸಿದರು.
ಇದೇ ವೇಳೆ, ಸಂತ್ರಸ್ತ ರೈತರು, ತಮ್ಮ ಬಳಿ ಸರ್ಕಾರ ನೀಡಿರುವ ಎಲ್ಲಾ ದಾಖಲೆಗಳಿದ್ದರೂ ಭೂಮಿಯಿಂದ ಹೊರಹಾಕಲು ಯತ್ನಿಸಲಾಗುತ್ತಿದೆ. ಈ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕೊಡ ಬೇಕಾದ ಎಂ.ಎಲ್.ಎ , ಎಂ.ಪಿಗೇಕೆ ಕಣ್ಣು ಕಾಣುತ್ತಿಲ್ಲವೆ ಎಂದು ಕಣ್ಣೀರಿಟ್ಟರು.
ಅರಣ್ಯ ಇಲಾಖೆಯ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಅರಣ್ಯಾಧಿಕಾರಿ ಗಿರೀಶ್, ಸಿಂಗಾಟಕದಿರೇನಹಳ್ಳಿ ಪ್ರದೇಶದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಕಾನೂನು ಪ್ರಕಾರವೇ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು. 1991ರ ನಂತರ ಅರಣ್ಯ ಭೂಮಿಗೆ ಪಡೆದ ದಾಖಲೆಗಳು ಮಾನ್ಯವಾಗುವುದಿಲ್ಲ. ಯಾರಿ ಗಾದರೂ ಹಕ್ಕು ಇದ್ದರೆ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಬಹುದು ಎಂದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ, ಸಂಘಟನಾ ಸಂಚಾಲಕ ಬಿ.ವಿ. ವೆಂಕಟರಮಣ, ಎನ್.ಎ. ವೆಂಕಟೇಶ್, ಶ್ರೀರಂಗಪ್ಪ, ಇಸ್ಕೂಲಪ್ಪ, ಜಿ.ವಿ. ಗಂಗಪ್ಪ, ಎನ್. ಪರಮೇಶ್, ಗಡಿನಾಡು ರೈತ ಸಂಘದ ರಾಜಶೇಖರ್, ಮುನಿರಾಜು, ರಾಮಕೃಷ್ಣಪ್ಪ ಸೇರಿದಂತೆ ನೂರಾರು ರೈತರು ಮತ್ತು ಹೋರಾಟಗಾರರು ಭಾಗವಹಿಸಿದ್ದರು.
ಒಟ್ಟಾರೆ ನ್ಯಾಯಕ್ಕಾಗಿ ದಲಿತ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ಕಂಡು ಬಂದಿದ್ದು, ಸಿಂಗಾಟಕದಿರೇನಹಳ್ಳಿ ಭೂ ವಿವಾದ ಜಿಲ್ಲೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಇದು ಎಲ್ಲಿ ಹೋಗಿ ಮುಟ್ಟುತ್ತದೆಯೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.