2026ರ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮೆದುಳಿನ ಚಟುವಟಿಕೆಯನ್ನು ನಿಯಂತ್ರಿಸುವ ಮಹತ್ವದ ಆವಿಷ್ಕಾರಕ್ಕಾಗಿ ಮೂವರು ವಿಜ್ಞಾನಿಗಳಿಗೆ (Nobel Medicine Prize 2026) ಜಂಟಿಯಾಗಿ ಘೋಷಿಸಲಾಗಿದೆ. 54 ವರ್ಷದ ಕಾರ್ಲ್ ಡೀಸೆರೋತ್, 71 ವರ್ಷದ ಪೀಟರ್ ಹೆಗೆಮನ್ ಮತ್ತು 73 ವರ್ಷದ ಜಾರ್ಜ್ ನಾಗೆಲ್, ಮೆದುಳಿನಲ್ಲಿರುವ ಪ್ರತ್ಯೇಕ ನರಕೋಶಗಳ ಚಟುವಟಿಕೆಯನ್ನು ಬೆಳಕಿನ ಸಹಾಯದಿಂದ ಆನ್ (On) ಅಥವಾ ಆಫ್ (Off) ಮಾಡುವ 'ಆಪ್ಟೋಜೆನೆಟಿಕ್ಸ್' (Optogenetics) ಮತ್ತು ಬೆಳಕಿನಿಂದ ನಿಯಂತ್ರಿಸಲ್ಪಡುವ ಅಯಾನ್ ಚಾನೆಲ್‌ಗಳ ಕುರಿತು ಜಂಟಿ ಸಂಶೋಧನೆಯನ್ನು ನಡೆಸಿದ್ದರು. ಅವರ ಈ ಸಾಧನೆಗಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಏನಿದು ಆಪ್ಟೋಜೆನೆಟಿಕ್ಸ್ ತಂತ್ರಜ್ಞಾನ?
ನಮ್ಮ ಮೆದುಳು ಶತಕೋಟಿ ನರಕೋಶಗಳ ಜಾಲದಿಂದ ಮಾಡಲ್ಪಟ್ಟಿದೆ. ಈ ಕೋಶಗಳು ವಿದ್ಯುತ್ ಸಂಕೇತಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ. ಈ ಸಂಕೇತಗಳು ನಮ್ಮ ನೆನಪುಗಳು, ಭಾವನೆಗಳು ಮತ್ತು ನಡವಳಿಕೆಗಳನ್ನು ರೂಪಿಸುತ್ತವೆ. ಪೀಟರ್ ಹೆಗೆಮನ್ ಮತ್ತು ಜಾರ್ಜ್ ನಾಗೆಲ್ ಅವರು ಏಕಕೋಶೀಯ ಪಾಚಿಗಳಲ್ಲಿ 'ಚಾನೆಲ್‌ಹೋಡಾಪ್ಸಿನ್' ಎಂಬ ವಿಶೇಷ ಪ್ರೋಟೀನ್ ಅನ್ನು ಕಂಡುಹಿಡಿದರು. ಈ ಪ್ರೋಟೀನ್ ಮೇಲೆ ನೀಲಿ ಬೆಳಕು ಬಿದ್ದಾಗ, ಅದು ಅಯಾನ್ ಚಾನೆಲ್‌ಗಳನ್ನು ತೆರೆದು ವಿದ್ಯುತ್ ಪ್ರಚೋದನೆಯನ್ನು ಸೃಷ್ಟಿಸುತ್ತದೆ.
ಕಾರ್ಲ್ ಡಿಸೀರೋತ್ ಅವರು ಈ ಪಾಚಿಯ ಜೀನ್ ಅನ್ನು ಪ್ರಾಣಿಗಳ (ಇಲಿಗಳ) ನರಕೋಶಗಳಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಇದರ ಮೂಲಕ ಬದುಕಿರುವ ಇಲಿಗಳ ಮೆದುಳಿನ ನಿರ್ದಿಷ್ಟ ನರಕೋಶಗಳ ಮೇಲೆ ನೀಲಿ ಬೆಳಕನ್ನು ಹಾಯಿಸಿ, ಆ ಕೋಶಗಳನ್ನು ಇಚ್ಛಾನುಸಾರ 'ಆನ್' ಅಥವಾ 'ಆಫ್' ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
Vishweshwar Bhat Column: ಪತ್ನಿಯ ಗೌರವಕ್ಕಾಗಿ ಹೊಡೆತ ತಿಂದ ನೊಬೆಲ್ ಪುರಸ್ಕೃತ ಸಾಹಿತಿ !
ಹಿಂದೆ ಮೆದುಳಿನ ಸಂಶೋಧನೆಗಾಗಿ ವಿದ್ಯುತ್ ಪ್ರಚೋದನೆ ನೀಡಿದಾಗ, ಸುತ್ತಮುತ್ತಲಿನ ಎಲ್ಲಾ ನರಕೋಶಗಳೂ ಸಕ್ರಿಯಗೊಳ್ಳುತ್ತಿದ್ದವು. ಇದರಿಂದ ನಿಖರವಾದ ಅಧ್ಯಯನ ಕಷ್ಟವಿತ್ತು. ಆದರೆ ಆಪ್ಟೋಜೆನೆಟಿಕ್ಸ್ ಮೂಲಕ ವಿಜ್ಞಾನಿಗಳು ಈಗ ಯಾವುದೇ ಗೊಂದಲವಿಲ್ಲದೆ ಕೇವಲ ಒಂದು ನಿರ್ದಿಷ್ಟ ನರಕೋಶವನ್ನು ಮಾತ್ರ ಗುರಿಯಾಗಿಸಿ ಅದರ ಕೆಲಸವನ್ನು ನೋಡಬಹುದು. ಖಿನ್ನತೆ ಪಾರ್ಕಿನ್ಸನ್ ಕಾಯಿಲೆ , ಆಲ್ಝೈಮರ್ಸ್ ಮತ್ತು ಅಪಸ್ಮಾರದಂತಹ ಗಂಭೀರ ಕಾಯಿಲೆಗಳ ಹಿಂದೆ ಮೆದುಳಿನ ಯಾವ ನರಗಳ ಜಾಲ ಕೆಲಸ ಮಾಡುತ್ತದೆ ಎಂಬುದನ್ನು ಪತ್ತೆಹಚ್ಚಲು ಇದು ಸಹಕಾರಿಯಾಗಿದೆ.