Vishweshwar Bhat Column: ಪತ್ನಿಯ ಗೌರವಕ್ಕಾಗಿ ಹೊಡೆತ ತಿಂದ ನೊಬೆಲ್ ಪುರಸ್ಕೃತ ಸಾಹಿತಿ !
‘ರಾಜಕೀಯದಲ್ಲಿ ರಾಜಕಾರಣಿಗಳು ರಾಜಕೀಯವನ್ನು ಮಾತ್ರ ಮಾಡುತ್ತಾರೆ. ಆದರೆ ಹೊಡೆದಾಟ ಕ್ಕಿಳಿಯುವುದಿಲ್ಲ. ಪರಸ್ಪರ ಭೇಟಿಯಾದಾಗ ಚೆನ್ನಾಗಿ ಮಾತಾಡುತ್ತಾರೆ. ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಾರೆ. ತಮ್ಮ ಮಧ್ಯೆ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಈ ನಡತೆ ಯನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ’
-
ನೂರೆಂಟು ವಿಶ್ವ
ಮೊನ್ನೆ ನಾವು ನಾಲ್ಕಾರು ಸ್ನೇಹಿತರು ಸೇರಿದಾಗ ನಮ್ಮ ಮಾತುಕತೆಯಲ್ಲಿ ಅತಿ ಹೆಚ್ಚು ರಾಜಕಾರಣ ಇರುವ ಕ್ಷೇತ್ರ ಯಾವುದು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಒಬ್ಬರು ‘ರಾಜಕೀಯ ಕ್ಷೇತ್ರ’ ಅಂದರು. ಮತ್ತೊಬ್ಬರು, ‘ಕಾರ್ಪೊರೇಟ್ ಕಂಪನಿಗಳು’ ಎಂದರು. ಇನ್ನೊಬ್ಬರು, ‘ಸರಕಾರಿ ಕಚೇರಿಗಳು’ ಎಂದರು. ಅಲ್ಲಿದ್ದ ಮತ್ತೊಬ್ಬರು, ‘ಪತ್ರಿಕೋದ್ಯಮ ಕ್ಷೇತ್ರ’ ಎಂದರು.
‘ಸಂಗೀತ ಕ್ಷೇತ್ರದಲ್ಲಿ ಕಮ್ಮಿ ರಾಜಕೀಯವಿದೆಯಾ?’ ಎಂದು ಮತ್ತೊಬ್ಬರು ರಾಗ ಎಳೆದರು. ಅದಕ್ಕೆ ನಾನು, ‘ರಾಜಕೀಯ ಇಲ್ಲದ ಕ್ಷೇತ್ರ ಯಾವುದು ಎಂಬುದನ್ನು ಮೊದಲು ಪತ್ತೆ ಮಾಡೋಣ. ಸಾಹಿತ್ಯ ಕ್ಷೇತ್ರದಲ್ಲಿ ಇರುವಷ್ಟು ರಾಜಕೀಯ, ರಾಜಕೀಯ ಕ್ಷೇತ್ರದಲ್ಲೂ ಇಲ್ಲ’ ಎಂದು ಹೇಳಿದೆ.
‘ರಾಜಕೀಯದಲ್ಲಿ ರಾಜಕಾರಣಿಗಳು ರಾಜಕೀಯವನ್ನು ಮಾತ್ರ ಮಾಡುತ್ತಾರೆ. ಆದರೆ ಹೊಡೆದಾಟ ಕ್ಕಿಳಿಯುವುದಿಲ್ಲ. ಪರಸ್ಪರ ಭೇಟಿಯಾದಾಗ ಚೆನ್ನಾಗಿ ಮಾತಾಡುತ್ತಾರೆ. ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಾರೆ. ತಮ್ಮ ಮಧ್ಯೆ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಈ ನಡತೆ ಯನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂಬ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ರಾಜಕಾರಣಿಗಳು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುವುದು ಕಮ್ಮಿ. ಅನಿರೀಕ್ಷಿತವಾಗಿ ಎದುರುಬದುರಾದರೆ ಚೆನ್ನಾಗಿ ಮಾತಾಡುತ್ತಾರೆ. ಈ ಹೃದಯ ವೈಶಾಲ್ಯ ಗುಣ ಬೇರೆಯವರಲ್ಲಿ ಕಾಣುವುದು ಅಪರೂಪ. ಈ ಚರ್ಚೆ ಆ ದಿನವಿಡೀ ನನ್ನ ಮನಸ್ಸಿನಲ್ಲಿ ಗಿರಗಿಟ್ಲೆ ಹೊಡೆಯುತ್ತಿತ್ತು. ಅಮೆರಿಕದ ಖ್ಯಾತ ಸಾಹಿತಿ ಸಿನ್ಕ್ಲೇರ್ ಲೂಯಿಸ್ ಮತ್ತು ಮತ್ತೊಬ್ಬ ಅಮೆರಿಕನ್ ಪ್ರಸಿದ್ಧ ಸಾಹಿತಿ ಥಿಯೋಡರ್ ಡ್ರೈಸರ್ ಅವರ ನಡುವಿನ ಆ ಐತಿಹಾಸಿಕ ಮುಖಾಮುಖಿ ಮತ್ತು ಹೊಡೆದಾಟ ಮತ್ತೆ ಮತ್ತೆ ನೆನಪಾಯಿತು.
ಇದನ್ನೂ ಓದಿ: Vishweshwar Bhat Column: ಶ್ಯಾಡೋಬ್ಯಾನಿಂಗ್ ಎಂದರೇನು ?
ಲೂಯಿಸ್ ಮತ್ತು ಡ್ರೈಸರ್ ಇಬ್ಬರೂ ದೈತ್ಯರೇ. ಇಬ್ಬರೂ ಅಪಾರ ಓದುಗ ವರ್ಗವನ್ನು ಹೊಂದಿ ದವರು. ಅದರಲ್ಲೂ ಲೂಯಿಸ್, ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಪ್ರಪ್ರಥಮ ಸಾಹಿತಿ ಎಂದು ಕರೆಯಿಸಿಕೊಂಡವರು. ಥಿಯೋಡರ್ ಡ್ರೈಸರ್ ಕೆಲ ಕಾಲ ಪತ್ರಕರ್ತ ರಾಗಿಯೂ ಹೆಸರು ಮಾಡಿದವರು.
ಇವರಿಬ್ಬರ ರಾದ್ಧಾಂತ ಸಾಹಿತ್ಯ ಲೋಕದ ಅತ್ಯಂತ ವಿವಾದಾತ್ಮಕ ಮತ್ತು ಚರ್ಚಿತ ಘಟನೆಗಳಲ್ಲಿ ಒಂದು ಎಂದು ಈಗಲೂ ಪರಿಗಣಿಸುವುದುಂಟು. ಅಮೆರಿಕದ ಇಬ್ಬರು ದಿಗ್ಗಜ ಬರಹಗಾರರ ನಡು ವಿನ ಈ ಸಂಘರ್ಷವು ಕೇವಲ ವೈಯಕ್ತಿಕ ದ್ವೇಷವಾಗಿರದೇ, ಕೃತಿಚೌರ್ಯದ ಆರೋಪ ಮತ್ತು ಸಾಹಿತ್ಯಿಕ ಅಹಂನ ಸಂಕೇತವಾಗಿತ್ತು. ತಮ್ಮ ಜಗಳವನ್ನು ಅಕ್ಷರಗಳ ಮೂಲಕ ಮಾಡಲು ಸಾಹಿತಿ ಗಳಿಗೆ ಬರುವುದಿಲ್ಲ ಎಂಬುದನ್ನೂ ಆ ಘಟನೆ ಬಹಿರಂಗಪಡಿಸಿತ್ತು.
1927ರಲ್ಲಿ ರಷ್ಯಾದ ಅಕ್ಟೋಬರ್ ಕ್ರಾಂತಿಯ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜಗತ್ತಿನೆಡೆಗಳಿಂದ ಅನೇಕ ಬುದ್ಧಿಜೀವಿಗಳನ್ನು ಸೋವಿಯತ್ ಒಕ್ಕೂಟಕ್ಕೆ ಆಹ್ವಾನಿಸಲಾಗಿತ್ತು. ಇವರಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಹಾಗೂ ಸಿನ್ಕ್ಲೇರ್ ಲೂಯಿಸ್ ಅವರ ಪತ್ನಿ ಡೊರೊತಿ ಥಾಂಪ್ಸನ್ ಮತ್ತು ಕಾದಂಬರಿಕಾರ ಥಿಯೋಡರ್ ಡ್ರೈಸರ್ ಕೂಡ ಇದ್ದರು. ಡೊರೊತಿ ಅವರು ಆಗಲೇ ಒಬ್ಬ ಪ್ರಭಾವಿ ವಿದೇಶಿ ವರದಿಗಾರ್ತಿಯಾಗಿ ಗುರುತಿಸಿಕೊಂಡಿದ್ದರು.
ಸಿನ್ಕ್ಲೇರ್ ಲೂಯಿಸ್ ಅವರ ಪತ್ನಿ ಎಂಬ ಕಾರಣಕ್ಕೆ ಅವರು ಎಡೆ ವಿಶೇಷ ಮರ್ಯಾದೆಗೆ ಪಾತ್ರ ರಾಗುತ್ತಿದ್ದರು. ಈ ಪ್ರವಾಸದ ಉದ್ದೇಶ ಸೋವಿಯತ್ ಆಡಳಿತದ ಅಡಿಯಲ್ಲಿ ಬದಲಾಗುತ್ತಿರುವ ರಷ್ಯಾವನ್ನು ಅಭ್ಯಸಿಸುವುದಾಗಿತ್ತು. ಡೊರೊತಿ ಅವರು ಅತ್ಯಂತ ಶ್ರದ್ಧೆಯಿಂದ ಅಲ್ಲಿನ ಪ್ರತಿಯೊಂದು ಘಟನೆಗಳನ್ನು ಗಮನಿಸಿ, ಮಾಹಿತಿ ಸಂಗ್ರಹಿಸಿ ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು.
1928ರಲ್ಲಿ ಡೊರೊತಿ ತಮ್ಮ ರಷ್ಯಾ ಪ್ರವಾಸ ಮತ್ತು ಅಧ್ಯಯನವನ್ನು ಆಧರಿಸಿ, ಸಂಶೋಧನಾ ಕೃತಿ ‘ದ ನ್ಯೂ ರಷ್ಯಾ’ (The New Russia) ಎಂಬ ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ರಷ್ಯಾದ ಆರ್ಥಿಕತೆ, ಸಂಸ್ಕೃತಿ ಮತ್ತು ರಾಜಕೀಯದ ಬಗ್ಗೆ ಕೂಲಂಕಷವಾಗಿ ವಿವರಿಸಿದ್ದರು. ಇದರ ಬೆನ್ನ ಡ್ರೈಸರ್ ಕೂಡ ‘ಡ್ರೈಸರ್ ಲುಕ್ಸ್ ಅಟ್ ರಷ್ಯಾ’ (Dreiser Looks at Russia) ಎಂಬ ಪುಸ್ತಕವನ್ನು ಹೊರ ತಂದರು.
ಡ್ರೈಸರ್ ಕೃತಿ ಹೊರಬಂದಾಗ, ಲೂಯಿಸ್ ಮತ್ತು ಡೊರೊತಿ ತುಂಬಾ ಆಸಕ್ತಿಯಿಂದ ಓದಿದರು. ತಮ್ಮ ಕೃತಿಗಿಂತ ಈ ಕೃತಿ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿಯುವುದು ಅವರ ಉದ್ದೇಶ ವಾಗಿತ್ತು. ಡೊರೊತಿ ಮತ್ತು ಲೂಯಿಸ್ ಇಬ್ಬರೂ ಡ್ರೈಸರ್ ಅವರ ಪುಸ್ತಕವನ್ನು ಓದಿದಾಗ ದಂಗಾ ದರು. ಡೊರೊತಿ ಅವರು ಶ್ರಮಪಟ್ಟು ಸಿದ್ಧಪಡಿಸಿದ್ದ ವರದಿಗಳು, ವಿಶಿಷ್ಟ ಪದಪ್ರಯೋಗಗಳು ಮತ್ತು ಸಂಶೋಧನಾ ಮಾಹಿತಿಗಳು, ಅಂಕಿ-ಅಂಶಗಳು ಡ್ರೈಸರ್ ಅವರ ಪುಸ್ತಕದಲ್ಲಿ ಯಥಾವತ್ತಾಗಿ ಬಳಕೆಯಾಗಿದ್ದವು.
ಡ್ರೈಸರ್ ತಮ್ಮ ಪುಸ್ತಕದಲ್ಲಿ ಡೊರೊತಿ ಬರೆದಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪದಗಳನ್ನು ಮಕ್ಕಿಕಾಮಕ್ಕಿ ಎಗರಿಸಿದ್ದು ಗಮನಕ್ಕೆ ಬಂದಿತು. ಲೂಯಿಸ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಡ್ರೈಸರ್ ಅವರ ಮೇಲೆ ಕೃತಿಚೌರ್ಯದ (Plagiarism) ಗಂಭೀರ ಆರೋಪ ಮಾಡಿದರು. ಡ್ರೈಸರ್ ಈ ಆರೋಪಗಳನ್ನು ಸುಲಭವಾಗಿ ಒಪ್ಪಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ಅವರು ಕೃತಿಚೌರ್ಯದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಲ್ಲದೇ, ಒಂದು ವಿಚಿತ್ರ ವಾದ ಮಂಡಿಸಿದರು.
‘ರಷ್ಯಾದಲ್ಲಿ ನಾವಿಬ್ಬರೂ ಜತೆಯ ಇದ್ದೆವು, ಅಲ್ಲಿ ನಾನು ಮಾಡಿದ ಟಿಪ್ಪಣಿಗಳನ್ನೇ ಡೊರೊತಿ ತನ್ನ ಪುಸ್ತಕದಲ್ಲಿ ಬಳಸಿಕೊಂಡಿದ್ದಾಳೆ’ ಎಂದು ಪ್ರತ್ಯಾರೋಪ ಮಾಡಿದರು. ಅಂದರೆ, ಆರೋಪಿಯನ್ನು ಹಿಡಿಯಲು ಹೋದ ಲೂಯಿಸ್ ಮತ್ತು ಡೊರೊತಿಗೆ, ‘ನೀವೇ ಕಳ್ಳರು’ ಎಂಬ ಹಣೆಪಟ್ಟಿಯನ್ನು ಡ್ರೈಸರ್ ಹಚ್ಚಲು ಪ್ರಯತ್ನಿಸಿದರು.
ಈ ದ್ವೇಷವು ಒಳಗೊಳಗೇ ಕುದಿಯುತ್ತಿತ್ತು. ಇಬ್ಬರೂ ತಮ್ಮ ಸ್ನೇಹಿತರ ಮುಂದೆ ಮತ್ತು ಸಾಹಿತ್ಯ ವಲಯಗಳಲ್ಲಿ ಪರಸ್ಪರ ಕೆಟ್ಟದಾಗಿ ಮಾತಾಡುತ್ತಿದ್ದರು. ಅದಾಗಿ ಮೂರು ವರ್ಷಗಳ ನಂತರ ಅಂದರೆ 1931ರ ಮಾರ್ಚ್ ತಿಂಗಳಲ್ಲಿ ನ್ಯೂಯಾರ್ಕ್‌ನ ಪ್ರತಿಷ್ಠಿತ ‘ಮೆಟ್ರೋಪಾಲಿಟನ್ ಕ್ಲಬ್’ನಲ್ಲಿ ರಷ್ಯಾದ ಪ್ರಸಿದ್ಧ ಲೇಖಕ ಬೋರಿಸ್ ಪಿಲ್ನ್ಯಾಕ್ ಅವರ ಗೌರವಾರ್ಥ ಒಂದು ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಸಾಹಿತ್ಯ ಲೋಕದ ದಿಗ್ಗಜರೆಲ್ಲರೂ ಅಲ್ಲಿ ನೆರೆದಿದ್ದರು. ಸಿನ್ಕ್ಲೇರ್ ಲೂಯಿಸ್‌ಗೆ ಹಿಂದಿನ ವರ್ಷ ವಷ್ಟೇ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಬಂದಿತ್ತಲ್ಲ, ಆ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಎಂಬ ಕಾರಣದಿಂದ ಅವರು ಆ ಔತಣಕೂಟದ ಆಕರ್ಷಣೆಗಳಲ್ಲಿ ಒಬ್ಬರಾಗಿದ್ದರು. ಸಭಾಂಗಣದಲ್ಲಿ ತಮ್ಮ ಪರಮ ವೈರಿ ಡ್ರೈಸರ್ ಇರುವುದನ್ನು ಕಂಡ ಲೂಯಿಸ್ ಅವರ ಮನಸ್ಸಿನಲ್ಲಿ ಹಳೆಯ ದ್ವೇಷದ ಕಿಡಿ ಮತ್ತೆ ಹೊತ್ತಿಕೊಂಡಿತು.
ತಮ್ಮ ಪತ್ನಿ ಡೊರೊತಿ ಕೃತಿಯಲ್ಲಿನ ಕೆಲವು ಅಂಶಗಳನ್ನು ಕದ್ದಿದ್ದಲ್ಲದೇ, ಉಲ್ಟಾ ತಮ್ಮ ಪತ್ನಿಯ ವಿರುದ್ಧವೇ ಕೃತಿಚೌರ್ಯದ ಆರೋಪ ಹೊರಿಸಿದ ಡ್ರೈಸರ್ ನಡೆಯಿಂದ ತೀವ್ರ ಆಕ್ರೋಶ ಅವರಲ್ಲಿ ಮಡುಗಟ್ಟಿತ್ತು. ಕಾರ್ಯಕ್ರಮದ ಆಯೋಜಕರು ಲೂಯಿಸ್ ಅವರನ್ನು ವೇದಿಕೆಗೆ ಕರೆದು, ಅತಿಥಿಗಳನ್ನು ಸ್ವಾಗತಿಸಿ ಮಾತನಾಡಲು ವಿನಂತಿಸಿದರು.
ಅಂದು ಲೂಯಿಸ್ ಸ್ವಲ್ಪ ಮಟ್ಟಿಗೆ ಮದ್ಯಪಾನ ಮಾಡಿದ್ದರು. ಇದು ಅವರಲ್ಲಿ ಮತ್ತಷ್ಟು ಆವೇಶ ವನ್ನು ಹೆಚ್ಚಿಸಿತ್ತು. ಮೈಕ್ ಮುಂದೆ ನಿಂತ ಲೂಯಿಸ್, ಔಪಚಾರಿಕ ಭಾಷಣ ಮಾಡುವ ಬದಲಿಗೆ ನೇರವಾಗಿ ಡ್ರೈಸರ್ ಅವರನ್ನು ಗುರಿಯಾಗಿಸಿ ದಾಳಿ ಆರಂಭಿಸಿದರು.
ಏರಿದ ಧಾಟಿಯಲ್ಲಿ, ‘ನನ್ನ ಹೆಂಡತಿಯ ಪುಸ್ತಕದಿಂದ ಮೂರು ಸಾವಿರ ಪದಗಳನ್ನು ಕದ್ದ ಆ ಸೂಳೆಮಗನ ( Son of a bitch) ಸಮ್ಮುಖದಲ್ಲಿ ನಾನು ಏನನ್ನೂ ಮಾತನಾಡಲು ಇಷ್ಟಪಡುವು ದಿಲ್ಲ ಮತ್ತು ಅವನನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸುವುದಿಲ್ಲ’ ಎಂದು ಬಿಟ್ಟರು. ಹಾಗೆ ಹೇಳುವಾಗ ಅವರ ಮುಖ ಕೋಪದಲ್ಲಿ ಕುದಿಯುತ್ತಿತ್ತು. ಅವರನ್ನು ನಿಯಂತ್ರಿಸುವುದು ಕಷ್ಟ ವಾಗಿತ್ತು. ಅಲ್ಲಿದ್ದವರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಲೂಯಿಸ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಈ ಮಾತುಗಳು ಸಭಾಂಗಣದಲ್ಲಿ ಸಿಡಿಲು ಬಡಿದಂಥ ವಾತಾವರಣ ನಿರ್ಮಿಸಿದವು. ಅಲ್ಲಿ ನೆರೆದಿದ್ದ ಗಣ್ಯರು ದಿಗ್ಭ್ರಮೆಗೊಂಡರು. ಲೂಯಿಸ್ ಅಷ್ಟಕ್ಕೇ ನಿಲ್ಲದೇ ಭಾಷಣ ಮುಂದುವರಿಸಲು ನಿರಾಕರಿಸಿ ಕೆಳಗಿಳಿದು ಬಿಟ್ಟರು. ಇದು ಕೇವಲ ವೈಯಕ್ತಿಕ ನಿಂದನೆಯಾಗಿರದೇ, ಒಬ್ಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಾರ್ವಜನಿಕವಾಗಿ ವರ್ತಿಸಿದ ಅತ್ಯಂತ ಅಸಭ್ಯ ನಡೆಯಾಗಿತ್ತು.
ಡ್ರೈಸರ್ ಆ ಸಮಯದಲ್ಲಿ ಮೌನವಾಗಿಯೇ ಕುಳಿತಿದ್ದರು. ಆದರೆ ಅವರ ಒಳಗಿನ ಕ್ರೋಧ ಕಟ್ಟೆಯೊಡೆದಿತ್ತು. ಔತಣಕೂಟ ಮುಗಿಯಿತು. ಇಡೀ ಸಮಾರಂಭದಲ್ಲಿ ಬಿಗಿ ವಾತಾವರಣವಿತ್ತು. ಮೆಟ್ರೋಪಾಲಿಟನ್ ಕ್ಲಬ್‌ನ ಆ ಸಭಾಂಗಣದಲ್ಲಿ ಲೂಯಿಸ್ ನೀಡಿದ ಆಘಾತಕಾರಿ ಭಾಷಣದ ನಂತರ, ಉದ್ವಿಗ್ನತೆ ಮಿತಿ ಮೀರಿತ್ತು. ಆದರೆ ‘ಅಸಲಿ ನಾಟಕ’ ಇನ್ನೂ ಬಾಕಿ ಇತ್ತು.
ಸಭೆಯಲ್ಲಿ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿದ್ದ ಡ್ರೈಸರ್, ಸೇಡು ತೀರಿಸಿಕೊಳ್ಳುವ ಉದ್ದೇಶ ದಿಂದಲೇ ಲೂಯಿಸ್ ಅವರನ್ನೇ ಹಿಂಬಾಲಿಸಿದರು. ಲೂಯಿಸ್ ತಮ್ಮ ಕೋಟ್ ಧರಿಸಲು ಕ್ಲೋಕ್‌ರೂಮ್‌ಗೆ ಬಂದಾಗ, ಡ್ರೈಸರ್ ಅಲ್ಲಿಗೆ ಧಾವಿಸಿ, ಅವರನ್ನು ತಡೆದರು. ಡ್ರೈಸರ್ ಅವರ ದೃಢ ವಾದ ನಿಲುವು ಮತ್ತು ಕೆಂಪುಗಣ್ಣುಗಳು ಅಲ್ಲಿ ಮತ್ತೊಂದು ದೊಡ್ಡ ಗದ್ದಲ ನಡೆಯುವ ಸೂಚನೆ ನೀಡುತ್ತಿದ್ದವು.
ಡ್ರೈಸರ್ ಗುಡುಗುತ್ತಾ, ‘ವೇದಿಕೆಯ ಮೇಲೆ ಹೇಳಿದ ಮಾತನ್ನು ಧೈರ್ಯವಿದ್ದರೆ ಈಗ ನನ್ನ ಮುಖಕ್ಕೆ ನೇರವಾಗಿ ನೋಡಿ ಹೇಳು’ ಎಂದು ಸವಾಲು ಹಾಕಿದರು. ಲೂಯಿಸ್ ಶಾರೀರಿಕವಾಗಿ ಬಲಶಾಲಿ ಯಾಗಿರಲಿಲ್ಲ. ಮದ್ಯದ ಅಮಲಿನಲ್ಲಿದ್ದ ಲೂಯಿಸ್ ಎಳ್ಳಷ್ಟೂ ಭಯಪಡಲಿಲ್ಲ. ತನ್ನ ಪತ್ನಿಯ ಕೃತಿಯನ್ನು ಕದ್ದಿzನೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು.
ಅವರು ಡ್ರೈಸರ್ ಅವರ ಕಣ್ಣುಗಳನ್ನೇ ನೇರವಾಗಿ ನೋಡುತ್ತಾ, ಸಭೆಯಲ್ಲಿ ಹೇಳಿದ್ದನ್ನೇ ಅತ್ಯಂತ ಸ್ಪಷ್ಟವಾಗಿ, ಮತ್ತಷ್ಟು ಗಟ್ಟಿಯಾಗಿ ಪುನರುಚ್ಚರಿಸಿದರು- ‘ಹೌದು, ನೀನು ನನ್ನ ಹೆಂಡತಿಯ ಪುಸ್ತಕದಿಂದ ಮೂರು ಸಾವಿರ ಪದಗಳನ್ನು ಕದ್ದ ಕಳ್ಳ. ನೀನೊಬ್ಬ ನೀತಿಗೆಟ್ಟ ಬರಹಗಾರ.’ ಈ ಮಾತನ್ನು ಕೇಳುತ್ತಿದ್ದಂತೆಯೇ ಡ್ರೈಸರ್ ಅವರ ತಾಳ್ಮೆ ಕಟ್ಟೆಯೊಡೆಯಿತು. ಅವರು ತಮ್ಮ ಬಲಾಢ್ಯ ಕೈಯಿಂದ ಲೂಯಿಸ್ ಅವರ ಕೆನ್ನೆಗೆ ‘ಫಟೀರ್’ ಎಂದು ಜೋರಾಗಿ ಹೊಡೆದರು. ಆ ಹೊಡೆತದ ಶಬ್ದ ಇಡೀ ಕೊಠಡಿಯಲ್ಲಿ ಪ್ರತಿಧ್ವನಿಸಿತು. ಆದರೆ ವಿಚಿತ್ರವೆಂದರೆ, ಲೂಯಿಸ್ ಅಳಲಿಲ್ಲ ಅಥವಾ ತಿರುಗಿ ಹೊಡೆಯಲು ಹೋಗಲಿಲ್ಲ.
ಬದಲಿಗೆ ಅವರು ಮತ್ತಷ್ಟು ಹಠಕ್ಕೆ ಬಿದ್ದವರಂತೆ ಕಂಡರು. ಡ್ರೈಸರ್ ಮತ್ತಷ್ಟು ಕೆರಳಿದವರಂತೆ, ‘ಧೈರ್ಯವಿದ್ದರೆ ಇನ್ನೊಮ್ಮೆ ಹೇಳು ನೋಡೋಣ’ ಎಂದು ಕೆಣಕಿದರು. ಲೂಯಿಸ್ ಮತ್ತೆ ಅಷ್ಟೇ ದೃಢವಾಗಿ ಕೃತಿಚೌರ್ಯದ ಆರೋಪವನ್ನು ಮಾಡಿದರು. ತಕ್ಷಣವೇ ಎರಡನೇ ಸಲ ಡ್ರೈಸರ್ ಬಲವಾಗಿ ಲೂಯಿಸ್ ಕೆನ್ನೆಗೆ ಬಾರಿಸಿದರು. ಆದರೂ ಲೂಯಿಸ್ ಶರಣಾಗಲಿಲ್ಲ, ಅವರು ಮೂರನೇ ಬಾರಿಗೆ ಆರೋಪ ಮಾಡಲು ಮುಂದಾದರು.
ಅಲ್ಲಿ ನೆರೆದಿದ್ದ ಇತರ ಅತಿಥಿಗಳು ಮತ್ತು ಕ್ಲಬ್‌ನ ಸಿಬ್ಬಂದಿ ಕೂಡಲೇ ಓಡಿಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಡ್ರೈಸರ್ ಅವರನ್ನು ಲೂಯಿಸ್ ಅವರಿಂದ ದೂರಕ್ಕೆ ಎಳೆದು ಕೊಂಡು ಹೋದರು. ಸಭಾಂಗಣದಿಂದ ಹೊರ ಬೀಳುವಾಗಲೂ ಡ್ರೈಸರ್ ಆಕ್ರೋಶದಿಂದ ಕಿರುಚು ತ್ತಿದ್ದರು. ಕಪಾಳಮೋಕ್ಷಕ್ಕೊಳಗಾದ ಲೂಯಿಸ್ ಕೂಡ ಜೋರಾಗಿ ಕಿರುಚುತ್ತಿದ್ದರು. ಅದಕ್ಕೆ ಡ್ರೈಸರ್ ನೀಡಿದ ಅಂತಿಮ ಎಚ್ಚರಿಕೆ ಹೀಗಿತ್ತು - ‘ನಾನು ನಿನ್ನನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಭೇಟಿಯಾಗಲು ಸಿದ್ಧ. ಈ ವಿಷಯ ಇಲ್ಲಿಗೆ ಮುಗಿದಿಲ್ಲ, ನೆನಪಿರಲಿ!’ ಮರುದಿನ ನ್ಯೂಯಾರ್ಕ್‌ನ ಪತ್ರಿಕೆಗಳು ಈ ಸುದ್ದಿಯನ್ನು ಆಪೋಶನ ತೆಗೆದುಕೊಂಡವು.
‘ನೊಬೆಲ್ ವಿಜೇತನಿಗೆ ಕಪಾಳಮೋಕ್ಷ’, ‘ಸಾಹಿತ್ಯಿಕ ದೈತ್ಯರ ಮುಷ್ಟಿಯುದ್ಧ’ ಎಂಬ ರೋಚಕ ತಲೆಬರಹಗಳು ಮುಖಪುಟದಲ್ಲಿ ರಾರಾಜಿಸಿದವು. ಅಮೆರಿಕಕ್ಕೆ ಮೊದಲ ನೊಬೆಲ್ ತಂದುಕೊಟ್ಟ ವ್ಯಕ್ತಿಯ ಮೇಲೆ ಈ ರೀತಿ ಹ ನಡೆದಿದ್ದು ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು. ಮಾಧ್ಯಮಗಳು ಇದನ್ನು ‘ಜಗತ್ತಿನಾದ್ಯಂತ ಕೇಳಿಸಿದ ಕಪಾಳಮೋಕ್ಷ’ (The Slap Heard Round the World) ಎಂದು ಬಣ್ಣಿಸಿದವು.
ಈ ವಿವಾದದಲ್ಲಿ ಸಾರ್ವಜನಿಕ ಸಹಾನುಭೂತಿ ಹೆಚ್ಚಾಗಿ ಲೂಯಿಸ್ ಪರವಾಗಿಯೇ ಇತ್ತು. ಲೂಯಿಸ್ ಅವರು ಶಾರೀರಿಕವಾಗಿ ಬಲಿಷ್ಠರಾಗಿರಲಿಲ್ಲ. ಅಂಥ ಸೂಕ್ಷ್ಮ ಮತ್ತು ದೈಹಿಕವಾಗಿ ದುರ್ಬಲವಾಗಿದ್ದ ವ್ಯಕ್ತಿಯ ಮೇಲೆ, ಬಲಾಢ್ಯನಾಗಿದ್ದ ಡ್ರೈಸರ್ ಕೈ ಮಾಡಿದ್ದು ಜನರಿಗೆ ಅಸಹ್ಯ ಹುಟ್ಟಿಸಿತು.
ಒಬ್ಬ ಲೇಖಕ ತನ್ನ ಮಾತಿನ ಮೂಲಕ ಪ್ರತಿಭಟಿಸಬೇಕೇ ಹೊರತು, ಮುಷ್ಟಿಯಿಂದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇಷ್ಟೆಲ್ಲ ಅವಮಾನ ಮತ್ತು ಹಲ್ಲೆಗೊಳಗಾದರೂ ಲೂಯಿಸ್ ಎದೆಗುಂದಲಿಲ್ಲ. ಅವರು ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಲಿಲ್ಲ ಅಥವಾ ಘಟನೆಯನ್ನು ಮರೆ ಮಾಚಲು ಪ್ರಯತ್ನಿಸಲಿಲ್ಲ. ಅವರ ಪ್ರಕಾರ, ಡ್ರೈಸರ್ ಅವರ ಕೃತಿಚೌರ್ಯವು ಕಪಾಳಮೋಕ್ಷ ಕ್ಕಿಂತ ದೊಡ್ಡ ಅಪರಾಧವಾಗಿತ್ತು.
ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಲೂಯಿಸ್ ಪದೇ ಪದೆ ಹೇಳಿದ್ದು ಒಂದೇ ಮಾತು - ‘ಡ್ರೈಸರ್ ಒಬ್ಬ ಸಾಹಿತ್ಯಿಕ ಕಳ್ಳ.’ ತನ್ನ ಪತ್ನಿ ಡೊರೊತಿ ಅವರ ಪರಿಶ್ರಮವನ್ನು ಕದ್ದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವುದು ತಮ್ಮ ನೈತಿಕ ಕರ್ತವ್ಯ ಎಂದು ಅವರು ಪ್ರತಿಪಾದಿಸಿ ದರು.
ಈ ಘಟನೆಯು ಸಾಹಿತ್ಯ ಲೋಕದಲ್ಲಿ ಒಂದು ದೊಡ್ಡ ವಿರೋಧಾಭಾಸವನ್ನು ಸೃಷ್ಟಿಸಿತು. ಲೂಯಿಸ್ ಅವರ ನೊಬೆಲ್ ಗೌರವದ ಬಗ್ಗೆ ಹೆಮ್ಮೆ ಪಡಬೇಕೋ ಅಥವಾ ಅವರ ಇಂಥ ವರ್ತನೆ ಯ ಬಗ್ಗೆ ಬೇಸರ ಪಡಬೇಕೋ ಎಂಬ ಗೊಂದಲ ಅನೇಕರಲ್ಲಿತ್ತು. ಆದರೆ, ಲೂಯಿಸ್ ಅವರು ತಿಂದ ಆ ಕಪಾಳಮೋಕ್ಷಗಳು ಅವರಿಗೆ ಸಮಾಜದಲ್ಲಿ ಒಬ್ಬ ‘ಪ್ರಾಮಾಣಿಕ ಹೋರಾಟಗಾರ’ನ ಸ್ಥಾನವನ್ನು ತಂದುಕೊಟ್ಟವು.
ಮಾಧ್ಯಮಗಳು ಈ ಘಟನೆಯನ್ನು ಕೇವಲ ಗದ್ದಲದಂತೆ ನೋಡಿದರೆ, ಲೂಯಿಸ್ ಅದನ್ನು ತಮ್ಮ ಸತ್ಯದ ಹಾದಿಯಲ್ಲಿ ಎದುರಾದ ಒಂದು ಸಣ್ಣ ಅಡ್ಡಿಯಂತೆ ಪರಿಗಣಿಸಿದರು. ಈ ಪ್ರಸಂಗ ಸಾಹಿತ್ಯ ಲೋಕದಲ್ಲಿ ಕೃತಿಚೌರ್ಯದ ವಿರುದ್ಧದ ಧ್ವನಿಯನ್ನು ಬಲಪಡಿಸಿತು ಮತ್ತು ಬರಹಗಾರರ ನಡುವಿನ ವೃತ್ತಿಪರ ಮತ್ಸರವು ಎಂಥ ಹಂತಕ್ಕೆ ತಲುಪಬಹುದು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಿತು.
ಈ ಕಪಾಳಮೋಕ್ಷ ಘಟನೆ ಅಮೆರಿಕ ಸಾಹಿತ್ಯದ ಇತಿಹಾಸದಲ್ಲಿ ಇಂದಿಗೂ ಒಂದು ಕಪ್ಪು ಚುಕ್ಕೆಯಾಗಿ ಅಥವಾ ಒಂದು ರೋಚಕ ಅಧ್ಯಾಯವಾಗಿ ಉಳಿದುಬಿಟ್ಟಿತು.