ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಮುಂದಿನ ವಾರವೇ ನೊಬೆಲ್‌ ಪ್ರಶಸ್ತಿ ಘೋಷಣೆ; ಟ್ರಂಪ್‌ಗೆ ಸಿಗೋದು ಡೌಟ್! ನಿರ್ಧರಿಸುವವರು ಯಾರು?

Nobel Peace Prize: ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಘೋಷೆಣೆಗೆ ದಿನಗಣನೆ ಆರಂಭವಾಗಿದೆ. ನೊಬೆಲ್‌ ಶಾಂತಿ ಪುರಸ್ಕಾರವನ್ನು ಅಕ್ಟೋಬರ್‌ 10ರಂದು ಘೋಷಿಸಲಾಗುತ್ತದೆ. ಈ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಹಾಗಾದರೆ ಅವರಿಗೆ ಸಿಗುತ್ತಾ?

ಈ ಬಾರಿ ಟ್ರಂಪ್‌ಗೆ ನೊಬೆಲ್‌ ಪ್ರಶಸ್ತಿ ಸಿಗೋದು ಸಂಶಯ; ಕಾರಣವೇನು?

-

Ramesh B Ramesh B Oct 4, 2025 4:03 PM

-ಕೇಶವ ಪ್ರಸಾದ್‌ ಬಿ.

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) 2025ರ ನೊಬೆಲ್‌ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯಗತಾಯ ಅದನ್ನು ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ. ತಮ್ಮ ಮಿತ್ರ ರಾಷ್ಟ್ರಗಳ ಮೂಲಕ ಶಿಫಾರಸು ಮಾಡಿಸಿದ್ದಾರೆ. ನೊಬೆಲ್‌ ಅನ್ನು ತಮಗೆ ಕೊಡದಿದ್ದರೆ, ಪ್ರಶಸ್ತಿಗೇ ಅವಮಾನ ಎಂದೆಲ್ಲ ನಿಂದಿಸಿದ್ದಾರೆ. ಈ ನಡುವೆ ನೊಬೆಲ್‌ ಶಾಂತಿ ಪುರಸ್ಕಾರವನ್ನು ಅಕ್ಟೋಬರ್‌ 10ರಂದು ಶುಕ್ರವಾರ ಘೋಷಣೆ ಮಾಡಲಾಗುವುದು. ಹೀಗಾಗಿ ದಿನಗಣನೆ ಆರಂಭವಾಗಿದೆ. ಹಾಗಾದರೆ ಟ್ರಂಪ್‌ಗೆ ನೊಬೆಲ್‌ ಶಾಂತಿ ಬಹುಮಾನ ಸಿಗುತ್ತದೆಯೇ? ಇಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ.

ಮೊದಲೆನಯದಾಗಿ ನೊಬೆಲ್‌ ಬಹುಮಾನವನ್ನು ಯಾರಿಗೆ ಕೊಡಬೇಕು ಎಂಬುದನ್ನು ನಿರ್ಧರಿಸುವವರು ಯಾರು? ಎಂದು ತಿಳಿಯೋಣ. ನಾರ್ವೆಯ ಮೊಬೆಲ್‌ ಸಮಿತಿ ಇದನ್ನು ನಿರ್ಧರಿಸುತ್ತದೆ. ಇದರಲ್ಲಿ ಐವರು ಸದಸ್ಯರು ಇರುತ್ತಾರೆ. ನಿವೃತ್ತ ರಾಜಕಾರಣಿಗಳು, ಅಕಾಡೆಮಿಕ್‌ ತಜ್ಞರು, ಸಿವಿಲ್‌ ಸೊಸೈಟಿಯ ನುರಿತ ವ್ಯಕ್ತಿಗಳು ಇದರಲ್ಲಿರುತ್ತಾರೆ. ನಾರ್ವೆಯ ಸಂಸತ್ತು ಇವರನ್ನು ನೇಮಿಸುತ್ತದೆ. ಈಗ ಸಮಿತಿಯ ಅಧ್ಯಕ್ಷರಾಗಿ ಪಿಇಎನ್‌ ಇಂಟರ್‌ನ್ಯಾಶನಲ್‌ ಎಂಬ ಸೇವಾ ಸಂಸ್ಥೆಯ ನಾರ್ವೆ ಶಾಖೆಯ ಮುಖ್ಯಸ್ಥರು ಇದ್ದಾರೆ. ಈ ಸಂಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆ.

ಈ ಸುದ್ದಿಯನ್ನೂ ಓದಿ: Narendra Modi: ವ್ಯಾಪಾರ ಸಮರದ ನಡುವೆಯೇ ಟ್ರಂಪ್‌ಗೆ ಮೋದಿಯಿಂದ ಮೆಚ್ಚುಗೆ; ಏನಿದು ಪ್ರಧಾನಿಯ ಅಚ್ಚರಿಯ ನಡೆ?

ನೊಬೆಲೆ ಶಾಂತಿ ಪ್ರಶಸ್ತಿ ಯಾರಿಗೆ ಸಿಗಬೇಕು ಎಂಬುದನ್ನು ಅದರ ಸ್ಥಾಪಕ, ಇಂಡಸ್ಟ್ರಿಯಲಿಸ್ಟ್‌ ಅಲ್ಫ್ರೆಡ್‌ ನೊಬೆಲ್‌ ತಮ್ಮ 1895ರ ವಿಲ್‌ನಲ್ಲಿ ಬರೆದಿದ್ದರು. ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಪ್ರಸರಣವನ್ನು ನಿರ್ಮೂಲನೆ ಮಾಡುವವರು ಮತ್ತು ಕಡಿಮೆ ಮಾಡುವ ವ್ಯಕ್ತಿಗಳಿಗೆ, ಶಾಂತಿ ಸ್ಥಾಪನೆಗೆ ಯತ್ನಿಸುವವರಿಗೆ ನೀಡಬೇಕು ಎಂದಿದ್ದರು. ಇದು ಕೇವಲ ಚಾರಿತ್ರಿಕ ಸಾಧನೆಗೋಸ್ಕರ ನೀಡುವಂಥದ್ದಲ್ಲ, ಬದಲಿಗೆ ಜಾಗತಿಕ ಶಾಂತಿ ಸ್ಥಾಪನೆ ಮತ್ತು ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಕೊಡುವಂಥದ್ದು.

ಯಾರು ನಾಮಿನೇಟ್‌ ಮಾಡಬಹುದು?

ಸರಕಾರಗಳು, ಸಂಸತ್ತುಗಳು, ರಾಜ್ಯಗಳ ಮುಖ್ಯಸ್ಥರು, ಇತಿಹಾಸ, ಸಮಾಜ ವಿಜ್ಞಾನಿಗಳು, ಕಾನೂನು, ಫಿಲಾಸಫಿಯ ಪ್ರೊಫೆಸರ್‌ಗಳು ನಾಮನಿರ್ದೇಶನ ಸಲ್ಲಿಸಬಹುದು. 2025ರಲ್ಲಿ 338 ಅಧಿಕೃತ ನಾಮನಿರ್ದೇಶನಗಳು ಆಗಿವೆ.

ಆದರೆ ಯಾರನ್ನು ನಾಮ ನಿರ್ದೇಶನ ಮಾಡಲಾಗಿದೆ ಮತ್ತು ಯಾರು ನಾಮಿನೇಟರ್‌ ಎಂಬುದು ರಹಸ್ಯವಾಗಿರುತ್ತದೆ. ಅದನ್ನು ಸಮಿತಿ ಬಹಿರಂಗಪಡಿಸುವುದಿಲ್ಲ.

2024ರ ನೊಬೆಲ್‌ ಶಾಂತಿ ಬಹುಮಾನವು ಜಪಾನ್‌ನ ನಿಹೋನ್‌ ಹಿಡಾಂಕ್ಯೊ ಎಂಬ ಸಂಗಘಟನೆಗೆ ಸಿಕ್ಕಿತ್ತು. ಇದು ಹಿರೋಷಿಮಾ, ನಾಗಸಾಕಿ ಪರಮಾಣು ದಾಳಿಯಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದೆ. ಜಗತ್ತಿನಾದ್ಯಂತ ಅಣ್ವಸ್ತ್ರ ನಿರ್ಮೂಲನೆಗೆ ಲಾಬಿ ನಡೆಸುತ್ತದೆ.

ಜನವರಿ 31ರೊಳಗೆ ನಾಮಿನೇಟ್‌ ಮಾಡಬೇಕಾಗುತ್ತದೆ. ಕಾಂಬೋಡಿಯಾ, ಇಸ್ರೇಲ್‌ ಮತ್ತು ಪಾಕಿಸ್ತಾನವು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ನಾಮಿನೇಟ್‌ ಮಾಡಿವೆ ಎನ್ನಲಾಗುತ್ತಿದೆ. ನೊಬೆಲ್‌ ಶಾಂತಿ ಬಹುಮಾನವು 1.19 ದಶಲಕ್ಷ ಡಾಲರ್‌ ( ಸುಮಾರು 10 ಕೋಟಿ ರುಪಾಯಿ), ಪದಕ ಒಳಗೊಂಡಿದೆ.

ಇದೀಗ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನವನ್ನು ಮುಂದಿಟ್ಟು ಟ್ರಂಪ್‌ ನೊಬೆಲ್‌ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್‌ ನಡುವಣ ಸಂಘರ್ಷವನ್ನು ನಿಲ್ಲಿಸಲು 20 ಅಂಶಗಳ ಒಪ್ಪಂದವನ್ನು ಟ್ರಂಪ್‌ ರೂಪಿಸಿದ್ದರು. ಅದಕ್ಕೆ ಇಸ್ರೇಲ್‌ ಒಪ್ಪಿದೆ. ಹಮಾಸ್‌ ಭಾಗಶಃ ಸಮ್ಮತಿಸಿದೆ. ಹೀಗಾಗಿ ಇಸ್ರೇಲಿನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲೂ ಹಮಾಸ್‌ ಸಮ್ಮತಿಸಿದೆ. ಆದ್ದರಿಂದ ಇದರ ಕ್ರೆಡಿಟ್ಟನ್ನು ಟ್ರಂಪ್‌ ಸಂಪೂರ್ಣ ತೆಗೆದುಕೊಂಡಿದ್ದಾರೆ. ಗಾಜಾ ಮೇಲೆ ಬಾಂಬ್‌ ಹಾಕದಿರಿ ಎಂದು ಇಸ್ರೇಲಿಗೆ ಒತ್ತಾಯಿಸಿದ್ದಾರೆ. ಆದರೆ ಇಸ್ರೇಲ್‌ ಟ್ರಂಪ್‌ ಹೇಳಿದ ಮಾತ್ರಕ್ಕೆ ಶತ್ರುಗಳನ್ನು ಸುಮ್ಮನೆ ಬಿಡದು ಎಂಬುದು ಬೇರೆ ಮಾತು. ಆದರೆ ಹಮಾಸ್‌ ಹಿಡಿತದಿಂದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಇಸ್ರೇಲ್‌ ಸದ್ಯಕ್ಕೆ ಟ್ರಂಪ್‌ ಮಧ್ಯಸ್ಥಿಕೆಯ ಒಪ್ಪಂದವನ್ನು ಅನುಮೋದಿಸಿದೆ. ಆದ್ದರಿಂದ ನೊಬೆಲ್‌ ಪ್ರಶಸ್ತಿಗೆ ಟ್ರಂಪ್‌ ಪಟ್ಟು ಹೆಚ್ಚಿದೆ.

ಈ ಸುದ್ದಿಯನ್ನೂ ಓದಿ: Donald Trump: ಭಾರತ ಪಾಕ್‌ ಕದನ ನಿಲ್ಲಿಸಿದಂತೆ ಇರಾನ್‌ ಇಸ್ರೇಲ್‌ ಯುದ್ಧವನ್ನೂ ಕೊನೆಗಾಣಿಸುತ್ತೇನೆ; ಡೊನಾಲ್ಡ್‌ ಟ್ರಂಪ್‌

ಟ್ರಂಪ್‌ಗೆ ನೊಬೆಲ್‌ ಡೌಟ್ ಏಕೆ? ತಜ್ಞರ ಪ್ರಕಾರ ನಾರ್ವೆಯ ನೊಬೆಲ್‌ ಸಮಿತಿಯು, ಸಾಮಾನ್ಯವಾಗಿ ಶಾಂತಿ ಸ್ಥಾಪನೆಯ ಬಾಳಿಕೆಯನ್ನು ಗಮನಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆಗಳ ಮೂಲಕ ನಡೆದಿರುವ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಆದರೆ ಟ್ರಂಪ್‌ ಅವರು ಬಹುಪಕ್ಷೀಯ ಸಂಸ್ಥೆಗಳ ವಿರುದ್ಧ ನಡೆದುಕೊಂಡಿರುವುದು ಅವರಿಗೆ ನೊಬೆಲ್‌ ಪ್ರಶಸ್ತಿ ದೂರವಾಗಲೂ ಕಾರಣವಾದೀತು. ಜತೆಗೆ ಜಾಗತಿಕ ಹವಾಮಾನ ನಿಯಂತ್ರಣ ವಿಚಾರದಲ್ಲಿಯೂ ಟ್ರಂಪ್‌ ಭಿನ್ನಮತ ಹೊಂದಿರುವುದರಿಂದ ಅದು ಕೂಡ ನೊಬೆಲ್‌ ಗಳಿಸುವ ಹಾದಿಯಲ್ಲಿ ಮುಳ್ಳಾಗಬಹುದು.

ಏಳು ಯುದ್ಧಗಳನ್ನು ತಪ್ಪಿಸಿದ್ದೇನೆ ಎಂದು ಟ್ರಂಪ್‌ ಹೇಳುತ್ತಿದ್ದರೂ, ಅದು ಸಾಬೀತಾಗಿಲ್ಲ. ವೈಭವೀಕರಿಸಿರುವ ಹೇಳಿಕೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಭಾರತ-ಪಾಕಿಸ್ತಾನದ ನಡುವೆಯೂ ನಾನೇ ಕದನ ವಿರಾಮ ಮಾಡಿಸಿದ್ದೇನೆ ಎಂದು ಟ್ರಂಪ್‌ ಅಪ್ಪಟ ಸುಳ್ಳು ಹೇಳಿದ್ದರು.

ಅಮೆರಿಕದ ಎಷ್ಟು ಅಧ್ಯಕ್ಷರಿಗೆ ನೊಬೆಲ್‌ ಸಿಕ್ಕಿದೆ?!

ಈ ಹಿಂದೆ 2009ರಲ್ಲಿ ಡೆಮಾಕ್ರಾಟ್‌ ಪಕ್ಷದ ನಾಯಕ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾಗೆ ನೊಬೆಲ್‌ ಪ್ರಶಸ್ತಿ ಲಭಿಸಿತ್ತು. ಇದಾದ ಮೇಲೆ ಟ್ರಂಪ್‌ಗೆ ತಮಗೂ ಬೇಕೆಂಬ ಜಿದ್ದು ಹುಟ್ಟಿಕೊಂಡಿದೆ. ತಮಗೆ ನೊಬೆಲ್‌ ಸಿಗದಿದ್ದರೆ ಅಮೆರಿಕಕ್ಕೇ ಅವಮಾನ ಆದಂತೆ ಎಂದೆಲ್ಲ ಹೇಳಿಕೊಂಡಿದ್ದಾರೆ. " ನನಗೆ ನೊಬೆಲ್‌ ಬೇಕೆಂದಿಲ್ಲ, ಆದರೆ ಅಮೆರಿಕಕ್ಕೆ ಬೇಕು. ಆದರೆ ನನಗೆ ಸಿಗುತ್ತಾ? ಖಂಡಿತ ಸಿಗಲಾರದು. ಏನನ್ನೂ ಮಾಡದ ಯಾರಿಗೋ ಕೊಡಬಹುದುʼʼ ಎಂದು ಟ್ರಂಪ್‌ ಬೇಸರ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹುಶಃ ಅಮೆರಿಕದ ಇತಿಹಾಸದಲ್ಲಿಯೇ ಯಾವೊಬ್ಬ ಅಧ್ಯಕ್ಷರೂ ಟ್ರಂಪ್‌ ರೀತಿಯಲ್ಲಿ ನೊಬೆಲ್‌ಗೆ ಹಠ ಹಿಡಿದಿರಲಿಲ್ಲ ಅಂತ ಅನ್ನಿಸುತ್ತಿದೆ. ಅಮೆರಿಕದ ಇತಿಹಾಸದಲ್ಲಿ ನಾಲ್ಕು ಮಂದಿ ಅಧ್ಯಕ್ಷರಿಗೆ ನೊಬೆಲ್‌ ಸಿಕ್ಕಿದೆ. ಥಿಯೊಡೊರ್‌ ರೂಸ್‌ ವೆಲ್ಟ್‌ (1906), ವುಡ್ರೊ ವಿಲ್ಸನ್‌ (1919), ಜಿಮ್ಮಿ ಕಾರ್ಟರ್‌ (2002), ಬರಾಕ್‌ ಒಬಾಮಾ (2009).