ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ ಭಾರತ ವಿರೋಧಿ ಮನಸ್ಥಿತಿ; ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕಳವಳ

Sheikh Hasina: ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಮನಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪದಚ್ಯುತ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ತೀವ್ರ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರವೃತ್ತಿ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶದಿಂದ ಪಲಾಯನ ಮಾಡಿರುವ ಅವರು ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ.

ಶೇಖ್ ಹಸೀನಾ (ಸಂಗ್ರಹ ಚಿತ್ರ)

ದೆಹಲಿ, ಡಿ. 22: ಬಾಂಗ್ಲಾದೇಶದ ರಾಜಕಾರಣಿಯೊಬ್ಬರು ಇತ್ತೀಚೆಗೆ ಈಶಾನ್ಯ ಭಾರತದ ಬಗ್ಗೆ ನೀಡಿರುವ ಹೇಳಿಕೆಗಳು ಅಪಾಯಕಾರಿ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಹೇಳಿದ್ದಾರೆ. ಇದು ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಪ್ರಸ್ತುತ ಆಡಳಿತದಲ್ಲಿ ಬಲಶಾಲಿಯಾಗಿ ಬೆಳೆಯುತ್ತಿರುವ ಆಕ್ರಮಕಾರಿ ಅಂಶಗಳಿಗೆ ಅವರು ಕಳವಳ ವ್ಯಕ್ತಪಡಿಸಿದರು. ಇದರಿಂದ ಭಾರತ–ಬಾಂಗ್ಲಾದೇಶ (India-Bangladesh) ಸಂಬಂಧಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ, ಇತ್ತೀಚೆಗೆ ಮಾಡಿರುವ ಪ್ರಚೋದನಕಾರಿ ಭಾಷಣದಲ್ಲಿ, ಬಾಂಗ್ಲಾದೇಶವು ಭಾರತದ ಪ್ರತ್ಯೇಕತಾವಾದಿಗಳಿಗೆ ಆಶ್ರಯ ನೀಡಬಹುದು ಮತ್ತು ಏಳು ಈಶಾನ್ಯ ರಾಜ್ಯಗಳನ್ನು ದೇಶದ ಉಳಿದ ಭಾಗಗಳಿಂದ ಬೇರ್ಪಡಿಸಬಹುದು ಎಂದು ಹೇಳಿದರು.

ಹಾದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕನ ತಲೆಗೆ ಗುಂಡು

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಕಾರಿಡಾರ್ ಅನ್ನು ಚಿಕನ್ ನೆಕ್ ಎಂದು ಕರೆಯಲಾಗುತ್ತದೆ. ಇದು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ತಂತ್ರಾತ್ಮಕವಾಗಿ ಪ್ರಮುಖ ಸಣ್ಣ ದಾರಿಗಳಲ್ಲಿ ಒಂದಾಗಿದೆ. ಇಂತಹ ಹೇಳಿಕೆಗಳು ಅಪಾಯಕಾರಿ ಮತ್ತು ಬೇಜವಾಬ್ದಾರಿಯಿಂದ ಕೂಡಿದ್ದು, ಯೂನಸ್ ಆಡಳಿತದ ಅಡಿಯಲ್ಲಿ ಪ್ರಭಾವ ಹೊಂದಿರುವ ಆಕ್ರಮಣಕಾರಿ ಅಂಶಗಳನ್ನು ಪ್ರತಿಬಿಂಬಿಸುತ್ತವೆ. ವ್ಯಾಪಾರ, ಸಾರಿಗೆ ಮತ್ತು ಪ್ರಾದೇಶಿಕ ಸ್ಥಿರತೆಗಾಗಿ ನೆರೆಹೊರೆಯ ದೇಶಗಳನ್ನು ಅವಲಂಬಿಸಿರುವ ಬಾಂಗ್ಲಾದೇಶದ ಯಾವ ನಾಯಕನೂ ಬೆದರಿಕೆ ಹಾಕಬಾರದು ಎಂದು ಶೇಖ್ ಹಸೀನಾ ಹೇಳಿದರು.

ತೀವ್ರಗಾಮಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಅವಾಮಿ ಲೀಗ್ ಮುಖ್ಯಸ್ಥೆ ಹಸೀನಾ ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇಂತಹ ಹೇಳಿಕೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಜತೆಗೆ ಈ ಧ್ವನಿಗಳು ಬಾಂಗ್ಲಾದೇಶದ ಜನರನ್ನು ಪ್ರತಿನಿಧಿಸುವುದಿಲ್ಲ ಎಂದೂ ಹೇಳಿದರು. ನಮ್ಮ ಸಮೃದ್ಧಿ ಮತ್ತು ಭದ್ರತೆಯು ಭಾರತದೊಂದಿಗಿನ ಬಲವಾದ ಸಂಬಂಧಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವುದಾಗಿ ಹಸೀನಾ ಹೇಳಿದರು. ಪ್ರಜಾಪ್ರಭುತ್ವ ಪುನಃಸ್ಥಾಪನೆಯಾಗಿ ಜವಾಬ್ದಾರಿಯುತ ಆಡಳಿತ ಮರಳಿದ ನಂತರ, ಅಂತಹ ನಿರ್ಲಕ್ಷ್ಯದ ಮಾತುಗಳು ಕೊನೆಗೊಳ್ಳುತ್ತವೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕೊಲೆ ಪ್ರಕರಣ: ಹತ್ಯೆಯಾದ ದೀಪು ಚಂದ್ರದಾಸ್ ಯಾರು?

ಭಾರತ–ಬಾಂಗ್ಲಾದೇಶ ಸಂಬಂಧಗಳಲ್ಲಿ ಕಂಡುಬರುವ ಇಂದಿನ ಒತ್ತಡವು ಸಂಪೂರ್ಣವಾಗಿ ಯುನಸ್ ಅವರಿಂದಲೇ ಉಂಟಾಗಿದೆ ಎಂದು ಅವರು ಹೇಳಿದರು. ಯುನಸ್ ಸರ್ಕಾರವು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲವಾಗುತ್ತಿದೆ. ಅತಿವಾದಿಗಳಿಗೆ ವಿದೇಶಾಂಗ ನೀತಿಯನ್ನು ನಿರ್ಧರಿಸಲು ಅವಕಾಶ ನೀಡುತ್ತಿದೆ ಎಂದು ಹಸಿನಾ ಆರೋಪಿಸಿದ್ದಾರೆ.

ಭಾರತವು ದಶಕಗಳಿಂದಲೂ ಬಾಂಗ್ಲಾದೇಶದ ಅತ್ಯಂತ ದೃಢವಾದ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರ ಎಂದು ಅವರು ಹೇಳಿದರು. ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಆಳವಾದ ಮತ್ತು ಮೂಲಭೂತವೆಂದು ಅವರು ವರ್ಣಿಸಿದರು. ಈ ಸಂಬಂಧಗಳು ಯಾವುದೇ ತಾತ್ಕಾಲಿಕ ಸರ್ಕಾರವನ್ನು ಮೀರಿಸುತ್ತದೆ ಎಂದು ಹಸೀನಾ ಹೇಳಿದರು. ಕಾನೂನುಬದ್ಧ ಆಡಳಿತವನ್ನು ಪುನಃಸ್ಥಾಪಿಸಿದ ನಂತರ, ಕಳೆದ 15 ವರ್ಷಗಳಲ್ಲಿ ಬೆಳೆಸಿಕೊಂಡ ಬುದ್ಧಿವಂತ ಹಾಗೂ ಸಮತೋಲನದ ಸಹಭಾಗಿತ್ವದತ್ತ ಬಾಂಗ್ಲಾದೇಶ ಮರಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.