ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಅಧಿಕಾರಿಗಳು ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಅನ್ನು ನಿಷೇಧಿಸಿದ ನಂತರ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಜನರು ಗಾಯಗೊಂಡಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಅಧಿಕಾರಿಗಳು ಶುಕ್ರವಾರ ಜೆಎಎಸಿಯನ್ನು ನಿಷೇಧಿಸಿದ್ದಾರೆ. ಬಳಿಕ ಆ ಪ್ರದೇಶದಲ್ಲಿ ಗಲಭೆ ಪ್ರಾರಂಭಗೊಂಡವು.
ರಾವಲ್ಕೋಟ್‌ನ ಉನ್ನತ ನಾಗರಿಕ ಅಧಿಕಾರಿ ಆಯುಕ್ತ ಸರ್ದಾರ್ ವಹೀದ್ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕಾರಿಗಳೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಗುಂಡು ಹಾರಿಸಲ್ಪಟ್ಟ ಬಳಿಕ ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದರು. ನಂತರ ರಾವಲಕೋಟ್ ನಗರದಲ್ಲಿ ಘರ್ಷಣೆಗಳು ಭುಗಿಲೆದ್ದವು. ಜೆಎಸಿ ಪ್ರತಿಭಟನಾಕಾರರು ಭಾನುವಾರ ಆಸ್ಪತ್ರೆಯ ಶವಾಗಾರದ ಹೊರಗೆ ಜಮಾಯಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದಾಗ, ಗುಂಪಿನ ಕಾರ್ಯಕರ್ತರು ಅವರನ್ನು ಗುರಿಯಾಗಿಸಿಕೊಂಡು ಸ್ವಯಂಚಾಲಿತ ರೈಫಲ್‌ಗಳು, ಪೆಟ್ರೋಲ್ ಬಾಂಬ್‌ಗಳು ಮತ್ತು ಇತರ ಆಯುಧಗಳನ್ನು ಬಳಸಿದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಮತ್ತು ಕೈಗೆಟುಕುವ ದರದಲ್ಲಿ ವಿದ್ಯುತ್ ನೀಡಬೇಕು ಎಂಬುದು ಸೇರಿದಂತೆ 38 ಅಂಶಗಳ ಬೇಡಿಕೆಗಾಗಿ 'ಜಂಟಿ ಅವಾಮಿ ಆಕ್ಷನ್ ಕಮಿಟಿ' (JAAC) ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಪಿಒಕೆಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಜೂನ್ 9 ರಂದು ನಡೆಸಲು ಉದ್ದೇಶಿಸಿದ್ದ ಬೃಹತ್ ಜಾಥಾವನ್ನು ತಡೆಯಲು ಪಾಕ್ ಸೈನ್ಯ ಗುಂಡಿನ ದಾಳಿ ನಡೆಸಿದೆ. ಕೆಲವು ಮೂಲಗಳ ಪ್ರಕಾರ ಸಾವಿನ ಸಂಖ್ಯೆ 100 ದಾಟಿದೆ ಎಂದು ಪಿಒಕೆ ಕಾರ್ಯಕರ್ತರು ಆರೋಪಿಸಿದ್ದಾರೆ. ಅಧಿಕೃತವಾಗಿ 27 ಮಂದಿ ಎಂದು ವರದಿಯಾಗಿದೆ.
ಪಿಒಕೆಯಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
ರಾಯಭಾರ ಕಚೇರಿಗೆ ಮುತ್ತಿಗೆ
ಪಿಒಕೆಯಲ್ಲಿ ನಡೆಯುತ್ತಿರುವ ರಕ್ತಪಾತವನ್ನು ವಿರೋಧಿಸಿ ಬ್ರಿಟನ್‌ನಲ್ಲಿ ನೆಲೆಸಿರುವ ಕಾಶ್ಮೀರಿ ಮೂಲದ ಜನರು ಬ್ರಾಡ್‌ಫೋರ್ಡ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪಾಕಿಸ್ತಾನಿ ಅಧಿಕಾರಿಗಳು ನಾಗರಿಕರ ಮೇಲೆ ಅತಿಯಾದ ಬಲಪ್ರಯೋಗ ಮಾಡುತ್ತಿದ್ದಾರೆ ಮತ್ತು ಮಾನವ ಹಕ್ಕುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.