ಪಿಒಕೆಯಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್‌ನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಪರಿಚಿತ ಬಂಧೂಕುಧಾರಿಗಳು ಹಮ್ಜಾ ಬುರ್ಹಾನ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. 2019 ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯ ಸಂಚುಕೋರರಲ್ಲಿ ಈತ ಪ್ರಮುಖನಾಗಿದ್ದ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಪುಲ್ವಾಮಾ (Pulwama Attack) ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್‌ನ್ನು (Hamza Burhan) ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಪರಿಚಿತ ಬಂಧೂಕುಧಾರಿಗಳು ಹಮ್ಜಾ ಬುರ್ಹಾನ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. 2019 ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯ ಸಂಚುಕೋರರಲ್ಲಿ ಈತ ಪ್ರಮುಖನಾಗಿದ್ದ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಮುಜಫರಾಬಾದ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಕೋರರ ಗುರುತು ಅಥವಾ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಗುಪ್ತಚರ ಸಂಸ್ಥೆಗಳ ಪ್ರಕಾರ, ಬುರ್ಹಾನ್ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಭಾಗಿಯಾಗಿದ್ದ. ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಉಗ್ರಗಾಮಿತ್ವಕ್ಕೆ ಸೇರಲು ಪ್ರಚೋದನೆ ನೀಡುತ್ತಿದ್ದ ಎಂದು ವರದಿಯಾಗಿದೆ. ಪುಲ್ವಾಮಾದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್, ಉನ್ನತ ಶಿಕ್ಷಣ ಪಡೆಯುವ ನೆಪದಲ್ಲಿ 2017 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದ್ರ್ ಸೇರಿಕೊಂಡು ಶೀಘ್ರದಲ್ಲೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆಗೆ ಏರಿದ.
ನಂತರ ಅವನು ಕಾಶ್ಮೀರಕ್ಕೆ ಹಿಂತಿರುಗಿ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಮತ್ತು ಅವರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ದಕ್ಷಿಣ ಕಾಶ್ಮೀರದಲ್ಲಿ, ಬುರ್ಹಾನ್ ತನ್ನ ಜಾಲವನ್ನು ಪುಲ್ವಾಮಾದಿಂದ ಶೋಪಿಯಾನ್‌ವರೆಗೆ ವಿಸ್ತರಿಸಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 2022 ರಲ್ಲಿ, ಸರ್ಕಾರ ಅವನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು.
ಪುಲ್ವಾಮಾ ಘಟನೆ
ಫೆಬ್ರವರಿ 14, 2019 ರಂದು, ಜೆಇಎಂ ಭಯೋತ್ಪಾದಕನೊಬ್ಬ ಲೆಥ್‌ಪೋರಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳಿಂದ ತುಂಬಿದ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ 40 ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದರು. ಅದರ ಹೊಣೆಗಾರಿಕೆಯನ್ನು ಜೈಶ್ ಹೊತ್ತುಕೊಂಡಿತ್ತು. ಬಳಿಕ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.