Asim Munir: ಟ್ರಂಪ್- ಅಸೀಮ್ ಮುನೀರ್ ಭಾಯಿ-ಭಾಯಿ; ತಿಂಗಳಿಗೊಮ್ಮೆ ಅಮೆರಿಕಕ್ಕೆ ತೆರಳುವ ಪಾಕ್ ಸೇನಾ ಮುಖ್ಯಸ್ಥ!
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಈ ತಿಂಗಳು ಮತ್ತೆ ಅಮೆರಿಕಕ್ಕೆ ಪ್ರಯಾಣಿಸಲಿದ್ದಾರೆ. ಟ್ರಂಪ್ ಹಾಗೂ ಮುನೀರ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.


ವಾಷಿಂಗ್ಟನ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಈ ತಿಂಗಳು ಮತ್ತೆ ಅಮೆರಿಕಕ್ಕೆ (Donald Trump) ಪ್ರಯಾಣಿಸಲಿದ್ದಾರೆ. ಎರಡು ತಿಂಗಳಲ್ಲಿ ಅವರ ಎರಡನೇ ವಾಷಿಂಗ್ಟನ್ ಭೇಟಿ ಇದಾಗಿದ್ದು, ಇದು ದ್ವಿಪಕ್ಷೀಯ ಸಂಬಂಧಗಳನ್ನು ವೃದ್ದಿಸುವ ಪ್ರಯತ್ನ ಇದಾಗಿದೆ. ಪಾಕಿಸ್ತಾನವನ್ನು ಭಯೋತ್ಪಾದನೆ ನಿಗ್ರಹದಲ್ಲಿ "ಅದ್ಭುತ ಪಾಲುದಾರ" ಎಂದು ಈ ಹಿಂದೆ ಕರೆದಿದ್ದ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಕಮಾಂಡರ್ (CENTCOM) ಜನರಲ್ ಮೈಕೆಲ್ ಕುರಿಲ್ಲಾ ಅವರ ಬೀಳ್ಕೊಡುಗೆಯಲ್ಲಿ ಮುನೀರ್ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದ್ದ ಸೇನಾ ಜನರಲ್ ಕುರಿಲ್ಲಾ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. ಕೆಲವು ತಿಂಗಳ ಹಿಂದೆ, ಅಮೆರಿಕ ಒದಗಿಸಿದ ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಐದು ಐಸಿಸ್-ಖೋರಾಸನ್ (ಐಸಿಸ್-ಕೆ) ಭಯೋತ್ಪಾದಕರನ್ನು ಸೆರೆಹಿಡಿದಿದ್ದಕ್ಕಾಗಿ ಕುರಿಲ್ಲಾ ಪಾಕಿಸ್ತಾನವನ್ನು ಶ್ಲಾಘಿಸಿದ್ದರು. ಜಗತ್ತಿನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಪಾತ್ರ ಬಹುದೊಡ್ಡದು ಎಂದು ಹೇಳಿದ್ದರು.
ಮುನಿರ್-ಟ್ರಂಪ್ ಸಭೆ
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಆಪರೇಷನ್ ಸಿಂದೂರದ ಬಳಿಕ ಅಮೆರಿಕದ 250ನೇ ಸೇನಾ ದಿನಾಚರಣೆ ಭಾಗವಹಿಸಲು ಮುನೀರ್ ಅಮೆರಿಕ್ಕಕೆ ತೆರಳಿದ್ದರು. ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಮುನೀರ್ ಅವರ ಪಾತ್ರವನ್ನು ಟ್ರಂಪ್ ಸಾರ್ವಜನಿಕವಾಗಿ ಶ್ಲಾಘಿಸಿದ್ದರು. ನಾನು ಅವರಿಗೆ ಆಹ್ವಾನವಿತ್ತ ಕಾರಣ, ಅವರು ಶಾಂತಿಯನ್ನು ಕಾಪಾಡಲು ಬಯಸಿ ಯುದ್ಧವನ್ನು ನಿಲ್ಲಿಸಿದ್ದರು ಎಂದು ಟ್ರಂಪ್ ಹೇಳಿದ್ದರು. ಪ್ರತಿಯಾಗಿ, ಪಾಕಿಸ್ತಾನಿ ಸೇನಾ ಮುಖ್ಯಸ್ಥ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಬೆಂಬಲ ನೀಡಿದರು. ಕೆಲವು ದಿನಗಳ ನಂತರ, ಪಾಕಿಸ್ತಾನ ಸರ್ಕಾರವು ಟ್ರಂಪ್ ಅವರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಿತು. ಇದೀಗ ಮತ್ತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.
ಇನ್ನು ಟ್ರಂಪ್ ಕೂಡ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಟ್ರಂಪ್ ಪಾಕ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಶಕಗಳ ಹಿಂದೆ ಅಂದರೆ 2006 ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆ ನಂತರ ಅಮೆರಿಕದ ಅಧ್ಯಕ್ಷರೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ. ಆದರೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು, ಟ್ರಂಪ್ ಅವರ ಈ ನಿರೀಕ್ಷಿತ ಭೇಟಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.