ಲಾಹೋರ್, ಡಿ.13: ಪಾಕಿಸ್ತಾನದ ಲಾಹೋರ್ ನಿರ್ವಹಣಾ ವಿಜ್ಞಾನ ವಿವಿಯು (ಎಲ್‌ಯುಎಂಎಸ್) ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕೋರ್ಸ್ ಅನ್ನು ಆರಂಭಿಸಿದ್ದು, ಡಿಸೆಂಬರ್‌ನಿಂದಲೇ ತರಗತಿಗಳು ಆರಂಭವಾಗಿವೆ. ಆರಂಭದಲ್ಲಿ, ವಾರಾಂತ್ಯದಲ್ಲಿ ಮಾತ್ರ ಸಂಸ್ಕೃತ ತರಗತಿಗಳನ್ನು ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು, ಸಂಶೋಧಕರು, ವಕೀಲರು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಇದು ಮುಕ್ತವಿತ್ತು. ಈ ತರಗತಿಗಳಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾದ ಕಾರಣ ಇದನ್ನೇ ಕೋರ್ಸ್ ರೀತಿಪರಿಚಯಿಸಲಾಗಿದೆ.
1947ರಲ್ಲಿ ದೇಶವಿಭಜನೆಯಾದ ಬಳಿಕ ಪಾಕಿಸ್ತಾನದ ಶಿಕ್ಷಣ ಸಂಸ್ಥೆಯೊಂದು ಸಂಸ್ಕೃತ ಕಲಿಕೆಯನ್ನು ಅಧಿಕೃತವಾಗಿ ಆರಂಭಿಸಿರುವುದು ಇದೇ ಮೊದಲು ಎಂಬುದು ವಿಶೇಷ.
‘1947ರ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಔಪಚಾರಿಕವಾಗಿ ಸಂಸ್ಕೃತವನ್ನು ಕಲಿಸಲಾಗುತ್ತಿರುವುದು ಅಪರೂಪ. ದಶಕಗಳ ನಂತರ ವಿವಿಯ ತರಗತಿಗಳಲ್ಲಿ ಸಂಸ್ಕೃತ ಕಲಿಕೆ ಆರಂಭವಾಗಿರುವುದು, ದಕ್ಷಿಣ ಏಷ್ಯಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ತೊಡಗಿಸಿಕೊಳ್ಳುವ ನವೀಕೃತ ಬದ್ಧತೆಯನ್ನು ಸೂಚಿಸುತ್ತದೆ’ ಎಂದು ವಿವಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್
ಈ ಕುರಿತು ವಿವಿಯ ಭಾಷೆ ಮತ್ತು ಸಾಹಿತ್ಯ ವಿಭಾಗದ ನಿರ್ದೇಶಕ ಅಲಿ ಉಸ್ಮಾನ್ ಖಾಸ್ಮಿ ಮಾತನಾಡಿ, ‘ಜನರ ಪ್ರತಿಕ್ರಿಯೆ ನೋಡಿದ ಬಳಿಕ ಸಂಸ್ಕೃತವನ್ನು ವಿವಿಯ ಅಧಿಕೃತ ಕೋರ್ಸ್ ಆಗಿಸಲು ನಿರ್ಧರಿಸಿದೆವು. ಸದ್ಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಅಧಿಕವಾಗುವ ವಿಶ್ವಾಸವಿದೆ. 2027ರ ವೇಳೆಗೆ, ನಾವು ಸಂಸ್ಕೃತವನ್ನು ವರ್ಷಪೂರ್ತಿ ಕೋರ್ಸ್ ಆಗಿ ಕಲಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.
"ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪಾಕಿಸ್ತಾನವು ಅತ್ಯಂತ ಶ್ರೀಮಂತ ಆದರೆ ನಿರ್ಲಕ್ಷ್ಯಕ್ಕೊಳಗಾದ ಸಂಸ್ಕೃತ ದಾಖಲೆಗಳನ್ನು ಹೊಂದಿದೆ" ಎಂದು ಅಲಿ ಉಸ್ಮಾನ್ ಖಾಸ್ಮಿ ತಿಳಿಸಿದರು. "ಸಂಸ್ಕೃತ ತಾಳೆಗರಿ ಹಸ್ತಪ್ರತಿಗಳ ಗಮನಾರ್ಹ ಸಂಗ್ರಹವನ್ನು 1930 ರ ದಶಕದಲ್ಲಿ ವಿದ್ವಾಂಸ ಜೆಸಿಆರ್ ವೂಲ್ನರ್ ಪಟ್ಟಿ ಮಾಡಿದ್ದಾರೆ, ಆದರೆ 1947 ರಿಂದ ಯಾವುದೇ ಪಾಕಿಸ್ತಾನಿ ಶಿಕ್ಷಣ ತಜ್ಞರು ಈ ಸಂಗ್ರಹದಲ್ಲಿ ತೊಡಗಿಸಿಕೊಂಡಿಲ್ಲ. ವಿದೇಶಿ ಸಂಶೋಧಕರು ಮಾತ್ರ ಇದನ್ನು ಬಳಸುತ್ತಾರೆ. ಸ್ಥಳೀಯವಾಗಿ ವಿದ್ವಾಂಸರಿಗೆ ತರಬೇತಿ ನೀಡುವುದರಿಂದ ಅದು ಬದಲಾಗುತ್ತದೆ" ಎಂದು ಅವರು ಹೇಳಿದರು.
ಭಾರತದಲ್ಲಿ ಹೆಚ್ಚಿನ ಹಿಂದೂಗಳು ಮತ್ತು ಸಿಖ್ಖರು ಅರೇಬಿಕ್ ಕಲಿಯಲು ಪ್ರಾರಂಭಿಸಿದರೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಮುಸ್ಲಿಮರು ಸಂಸ್ಕೃತವನ್ನು ಅಳವಡಿಸಿಕೊಂಡರೆ, ಅದು ದಕ್ಷಿಣ ಏಷ್ಯಾಕ್ಕೆ ಹೊಸ, ಆಶಾದಾಯಕ ಆರಂಭವಾಗಬಹುದು, ಅಲ್ಲಿ ಭಾಷೆಗಳು ಅಡೆತಡೆಗಳ ಬದಲು ಸೇತುವೆಗಳಾಗುತ್ತವೆ" ಎಂದರು.
ಭಗವದ್ಗೀತೆ, ಮಹಾಭಾರತ ಕೋರ್ಸ್
ವಿಶ್ವವಿದ್ಯಾನಿಲಯವು ಮಹಾಭಾರತ ಮತ್ತು ಭಗವದ್ಗೀತೆಯ ಕುರಿತು ಮುಂಬರುವ ಕೋರ್ಸ್‌ಗಳೊಂದಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. "10-15 ವರ್ಷಗಳಲ್ಲಿ, ಪಾಕಿಸ್ತಾನ ಮೂಲದ ಗೀತೆ ಮತ್ತು ಮಹಾಭಾರತದ ವಿದ್ವಾಂಸರನ್ನು ನಾವು ನೋಡಬಹುದು" ಎಂದು ಡಾ. ಖಾಸ್ಮಿ ಹೇಳಿದರು.