ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಲ್ಲಿ ಮತ್ತೊಂದು ದುರಂತ; ಮಿಲಿಟರಿ ತರಬೇತಿ ವಿಮಾನ ಪತನ: ಇಬ್ಬರ ದುರ್ಮರಣ

Pakistan Aircraft Crashes: ಪಾಕಿಸ್ತಾನದ ಮಿಲಿಟರಿ ತರಬೇತಿ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಇಬ್ಬರೂ ಪೈಲಟ್‌ಗಳು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ವಾಯುವ್ಯದಲ್ಲಿರುವ ಮರ್ದಾನ್ ಬಳಿ ನಡೆದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಎಲ್ಲರೂ ದುರ್ಮರಣಕ್ಕೀಡಾದ ವಾರದೊಳಗೆ ಈ ಅಪಘಾತ ಸಂಭವಿಸಿದೆ.

ಪಾಕಿಸ್ತಾನದಲ್ಲಿ ಪತನಗೊಂಡ ಮಿಲಿಟರಿ ತರಬೇತಿ ವಿಮಾನ

ಇಸ್ಲಾಮಾಬಾದ್, ಜೂ. 15: ಪಾಕಿಸ್ತಾನದ ಮಿಲಿಟರಿ ತರಬೇತಿ ವಿಮಾನವೊಂದು ಪತನಗೊಂಡು (Aircraft Crashes) ಅದರಲ್ಲಿದ್ದ ಇಬ್ಬರೂ ಪೈಲಟ್‌ಗಳು ಮೃತಪಟ್ಟಿರುವ ಘಟನೆ ಪಾಕಿಸ್ತಾನದ (Pakistan) ವಾಯುವ್ಯದಲ್ಲಿರುವ ಮರ್ದಾನ್ ಬಳಿ ನಡೆದಿದೆ. ಅಪಘಾತದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವಿಮಾನವು ನೆಲಕ್ಕೆ ಅಪ್ಪಳಿಸಿ ಬೃಹತ್ ಬೆಂಕಿಯ ಉಂಡೆಯಾಗಿ ಸಿಡಿದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಎಲ್ಲರೂ ದುರ್ಮರಣಕ್ಕೀಡಾದ ಒಂದು ವಾರದೊಳಗೆ ಈ ಅಪಘಾತ ಸಂಭವಿಸಿದೆ. ವಿಮಾನವು ಏಕಾಏಕಿ ನೆಲಕ್ಕೆ ಪತನಗೊಂಡ ತಕ್ಷಣ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಎರಡು ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಈ ವೇಳೆ ಅವಶೇಷಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿಹೋಗಿರುವುದು ದೃಶ್ಯಗಳಲ್ಲಿ ವಿಡಿಯೊದಲ್ಲಿ ಕಂಡುಬಂದಿವೆ.

ಇನ್ನು ಈ ಘಟನೆಯನ್ನು ಪಾಕಿಸ್ತಾನ ಸೇನೆ ದೃಢಪಡಿಸಿದೆ. ವಿಮಾನವು ಪತನವಾದಾಗ ಅದು ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿತ್ತು ಎಂದು ಹೇಳಿದೆ. ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನವು ಮರ್ದಾನ್ ಬಳಿ ಪತನಗೊಂಡಿದೆ ಎಂದು ಮಿಲಿಟರಿ ಮಾಧ್ಯಮ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿದೆ ವಿಡಿಯೊ:



ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸಾವಿಗೀಡಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಮೃತರಲ್ಲಿ ಒಬ್ಬರು ಪಾಕಿಸ್ತಾನ ವಾಯುಪಡೆಗೆ ಸಂಬಂಧಪಟ್ಟವರು ಮತ್ತು ಇನ್ನೊಬ್ಬರು ಪಾಕಿಸ್ತಾನ ನೌಕಾಪಡೆಯ ಸಿಬ್ಬಂದಿ. ಆದರೆ ಅಪಘಾತವಾಗಿರುವುದು ಯಾವ ವಿಮಾನ ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಪಘಾತದ ಕಾರಣವನ್ನು ಪತ್ತೆಹಚ್ಚಲು ವಾಯುಪಡೆಯ ಪ್ರಧಾನ ಕಚೇರಿಯು ತನಿಖಾ ಮಂಡಳಿಯನ್ನು ರಚಿಸಿದೆ.

ಪಿಒಕೆಯಲ್ಲಿ ಪಾಕಿಸ್ತಾನ ಸೈನಿಕರು ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ಪತನ; 21 ಮಂದಿ ಸಾವಿನ ಶಂಕೆ

ಈ ಅಪಘಾತವು ವಾರದೊಳಗೆ ಪಾಕಿಸ್ತಾನದಲ್ಲಿ ನಡದ ಎರಡನೇ ಮಾರಕ ಮಿಲಿಟರಿ ವಾಯುಯಾನ ದುರಂತ ಎನಿಸಿಕೊಂಡಿದೆ. ಜೂ. 10ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ 21 ಮಂದಿ ಮೃತಪಟ್ಟಿದ್ದರು.

ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಪಾಕಿಸ್ತಾನದ ಉತ್ತರ ಭಾಗದ ಪರ್ವತ ಪ್ರದೇಶಗಳಲ್ಲಿ, ದುರ್ಗಮ ಭೂಪ್ರದೇಶಗಳಲ್ಲಿ ಇತ್ತೀಚೆಗೆ ವೈಮಾನಿಕ ಅಪಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ವಿಮಾನ ಕಾರ್ಯಾಚರಣೆಗಳನ್ನು ಸಂಕೀರ್ಣಗೊಳಿಸಿರುವುದರಿಂದ ಇಂತಹ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ.