ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಏರ್ ಸ್ಟ್ರೈಕ್: 11 ಮಕ್ಕಳು ಸೇರಿದಂತೆ 13 ಜನರ ಸಾವು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಾಟೆಯ ನಡುವೆಯೆ ಪಾಕಿಸ್ತಾನ ಮತ್ತೆ ಅಪ್ಘಾನಿಸ್ತಾನದ ವಿರುದ್ಧ ದಾಳಿ ನಡೆಸಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಪಡೆಗಳು ಮಂಗಳವಾರ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಾಟೆಯ ನಡುವೆಯೆ ಪಾಕಿಸ್ತಾನ ಮತ್ತೆ ಅಪ್ಘಾನಿಸ್ತಾನದ ವಿರುದ್ಧ ದಾಳಿ ನಡೆಸಿದೆ. ಪೂರ್ವ (Pakistan Air Strike on Afghanistan) ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಪಡೆಗಳು ಮಂಗಳವಾರ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಾದ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಸ್ಪೆರಾ ಜಿಲ್ಲೆಯ ಮನಾಯ್ ಗ್ರಾಮವನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ.
ಮಂಗಳವಾರ ಮತ್ತು ಬುಧವಾರದ ನಡುವೆ ದಾಳಿ ನಡೆದಿದೆ. ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿನ ವಸತಿ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 14 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ದಾಳಿಗಳನ್ನು ಖಂಡಿಸಿದ್ದು, ಪಾಕಿಸ್ತಾನದ ವಿಮಾನಗಳು ಅಫ್ಘಾನ್ ವಾಯುಪ್ರದೇಶವನ್ನು ಪ್ರವೇಶಿಸಿ ನಾಗರಿಕರ ಮನೆಗಳ ಮೇಲೆ ದಾಳಿ ಮಾಡಿವೆ ಎಂದು ತಿಳಿಸಿದ್ದಾರೆ.
2021 ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ನೇತೃತ್ವದ ಸರ್ಕಾರದ ನಡುವಿನ ಸಂಬಂಧಗಳು ಉದ್ವಿಗ್ನವಾಗಿವೆ. ಇಸ್ಲಾಮಾಬಾದ್ ಪ್ರಮುಖ ಭದ್ರತಾ ಬೆದರಿಕೆ ಎಂದು ಪರಿಗಣಿಸುವ ಉಗ್ರಗಾಮಿ ಗುಂಪು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಅಫ್ಘಾನಿಸ್ತಾನವನ್ನು ಪದೇ ಪದೇ ಒತ್ತಾಯಿಸುತ್ತಿದೆ. ಆದಾಗ್ಯೂ, ಅಫ್ಘಾನ್ ಸಾರ್ವಭೌಮತ್ವದ ವಿರುದ್ಧದ ಕ್ರಮಗಳಲ್ಲಿ ಭಾಗಿಯಾಗಿರುವ ಪ್ರತಿಕೂಲ ಗುಂಪುಗಳಿಗೆ ಪಾಕಿಸ್ತಾನವೇ ಬೆಂಬಲ ನೀಡಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಆರೋಪಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಭಾರತ ಖಂಡನೆ ; ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಅಕ್ಟೋಬರ್ 2025 ರಲ್ಲಿ ಕಾಬೂಲ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಹೋರಾಟಗಾರರಲ್ಲದವರನ್ನು ಗುರಿಯಾಗಿಸಿಕೊಂಡಿದೆ ಎಂದು ತಾಲಿಬಾನ್ ಆಡಳಿತ ಹೇಳಿದೆ. ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ದಾಳಿಗಳು ನಡೆದಿವೆ ಎಂದು ಅಫಘಾನ್ ಅಧಿಕಾರಿಗಳು ಹೇಳಿದ್ದಾರೆ.