ಇಸ್ಲಮಾಬಾದ್: ಒಂದುಕಡೆ ಪಾಕಿಸ್ತಾನ (Pakistan) ಭಾರತದ (India) ಮೇಲೆ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಅದರ ರಕ್ಷಣಾ ಸಚಿವ (Defense Minister) ಖವಾಜಾ ಆಸಿಫ್ (Khawaja Asif) ಅವರ ವಿಚಿತ್ರ ಹೇಳಿಕೆಗಳಿಗೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ. ‘ಸಾಮಾಜಿಕ ಜಾಲತಾಣದಿಂದ ತಿಳಿದುಕೊಂಡೆ’ ಎಂಬ ತಮ್ಮ ಹಿಂದಿನ ಹೇಳಿಕೆಗೆ ತೀವ್ರ ಟೀಕೆ ಎದುರಿಸಿದ ಬಳಿಕ, ಶುಕ್ರವಾರ ಆಸಿಫ್ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ. ಭಾರತದ ಡ್ರೋನ್ ದಾಳಿಯ ಉದ್ದೇಶ “ಪಾಕಿಸ್ತಾನದ ವಾಯು ರಕ್ಷಣಾ ಘಟಕಗಳ ಸ್ಥಳಗಳನ್ನು ಪತ್ತೆಹಚ್ಚುವುದು” ಎಂದು ಹೇಳಿದ ಅವರು, ಪಾಕಿಸ್ತಾನದ ಸೇನೆಯು “ತನ್ನ ಸ್ಥಳಗಳು ಬಹಿರಂಗಗೊಳ್ಳಬಾರದು ಎಂದು ಡ್ರೋನ್‌ಗಳನ್ನು ತಡೆಯಲಿಲ್ಲ” ಎಂದು ಹೇಳಿದ್ದಾರೆ.
“ಡ್ರೋನ್ ದಾಳಿಯು ನಮ್ಮ ಸ್ಥಳಗಳನ್ನು ಪತ್ತೆಹಚ್ಚಲು ನಡೆಸಲಾಯಿತು. ಇದು ತಾಂತ್ರಿಕ ವಿಷಯವಾಗಿದೆ, ನಾನು ವಿವರಿಸಲಾರೆ. ನಮ್ಮ ವಾಯು ರಕ್ಷಣಾ ಘಟಕಗಳ ಸ್ಥಳ ಬಹಿರಂಗಗೊಳ್ಳದಂತೆ ನಾವು ಡ್ರೋನ್‌ಗಳನ್ನು ತಡೆಯಲಿಲ್ಲ” ಎಂದು ಆಸಿಫ್ ಪಾಕಿಸ್ತಾನದ ರಾಷ್ಟ್ರೀಯ ಸಭೆಯಲ್ಲಿ ತಿಳಿಸಿದರು.
ಈ ಹೇಳಿಕೆಯನ್ನು ಅನೇಕರು ಅಸಂಬದ್ಧ ಎಂದು ಕರೆದಿದ್ದಾರೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು ಸ್ಥಳಗಳಲ್ಲಿ ಕೇವಲ ಭಯೋತ್ಪಾದಕರ ಮೂಲಸೌಕರ್ಯವನ್ನು ಗುರಿಯಾಗಿರಿಸಿ ವೈಮಾನಿಕ ದಾಳಿ ನಡೆಸಿತು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಪಾಕಿಸ್ತಾನದ ಭಯೋತ್ಪಾದಕರು 26 ನಾಗರಿಕರನ್ನು ಗುಂಡಿಟ್ಟು ಕೊಂದ ಘಟನೆಗೆ ಪ್ರತಿಕ್ರಿಯೆಯಾಗಿತ್ತು.
ಆಸಿಫ್ ಅವರ ಹೇಳಿಕೆಗಳು ಅಷ್ಟೆಲ್ಲೆ ಸೀಮಿತವಾಗಿಲ್ಲ, “ಮದರಸದ ವಿದ್ಯಾರ್ಥಿಗಳು ನಮ್ಮ ಎರಡನೇ ರಕ್ಷಣಾ ರೇಖೆ” ಎಂದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. “ಭಾರತ ದೀರ್ಘಕಾಲದಿಂದ ಎಚ್ಚರಿಸುತ್ತಿದೆ. ಪಾಕಿಸ್ತಾನದ ಮದರಸಗಳು ಕೇವಲ ಶಾಲೆಗಳಲ್ಲ, ಅವು ಭಯೋತ್ಪಾದನೆಯ ತಾಣಗಳಾಗಿವೆ. ಈ ಸತ್ಯವನ್ನು ಈಗ ಅವರ ಸ್ವಂತ ಸದಸ್ಯರು ಹೇಳಿದ್ದಾರೆ” ಎಂದು ಒಬ್ಬ ಎಕ್ಸ್ ಬಳಕೆದಾರ ಬರೆದಿದ್ದಾರೆ.
ಈ ಸುದ್ದಿಯನ್ನು ಓದಿ: Operation Sindoor LIVE Updates: ಕದನ ವಿರಾಮ ಉಲ್ಲಂಘಿಸಿದ ಪಾಕ್; ಗಡಿ ರಾಜ್ಯಗಳ ಮೇಲೆ ಮತ್ತೆ ದಾಳಿ
ಖವಾಜಾ ಆಸಿಫ್ ಅವರ ವಿವಾದಾತ್ಮಕ ಹೇಳಿಕೆಗಳು
ಕೇವಲ ಎರಡು ದಿನಗಳ ಹಿಂದೆ ಆಸಿಫ್ ಪಾಕಿಸ್ತಾನವು ಐದು ಭಾರತೀಯ ಯುದ್ಧ ವಿಮಾನಗಳನ್ನು ಶೂಟ್ ಡೌನ್ ಮಾಡಿದ ಬಗ್ಗೆ “ಸಾಮಾಜಿಕ ಜಾಲತಾಣದಿಂದ ತಿಳಿದುಕೊಂಡೆ” ಎಂದು ಹೇಳಿದ್ದರು. ಈ ಹೇಳಿಕೆಯಿಂದ ಪಾಕಿಸ್ತಾನದ ರಾಷ್ಟ್ರೀಯ ಸಭೆ ಸೇರಿ ವಿವಿಧ ಕೆರಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಭಯೋತ್ಪಾದಕರನ್ನು ಸಂರಕ್ಷಿಸುತ್ತಿದೆ ಎಂದು ಆಸಿಫ್ ಒಪ್ಪಿಕೊಂಡಿದ್ದರು. “ಕಳೆದ ಮೂರು ದಶಕಗಳಿಂದ ನಾವು ಅಮೆರಿಕ ಮತ್ತು ಬ್ರಿಟನ್‌ನ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ” ಎಂದು ಅವರು ಒಬ್ಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ್ದರು.
ಖವಾಜಾ ಆಸಿಫ್ ಅವರ ಇತ್ತೀಚಿನ ಬೇಜವಾಬ್ದಾರಿ ಸಂದರ್ಶನಗಳು ಮತ್ತು ಅಪಕ್ವ ಟ್ವೀಟ್‌ಗಳಿಂದ ಪಾಕಿಸ್ತಾನ ಮತ್ತು ಅದರ ಜನರಿಗೆ ಮುಜುಗರವಾಗಿದೆ. ರಕ್ಷಣಾ ಸಚಿವ ಸ್ಥಾನದಿಂದ ಅವರನ್ನು ತಕ್ಷಣ ಕಿತ್ತುಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಪ್ರಮುಖ ಸಚಿವಾಲಯಕ್ಕೆ ದೇಶವನ್ನು ಗೌರವ ಮತ್ತು ಜವಾಬ್ದಾರಿಯಿಂದ ಪ್ರತಿನಿಧಿಸುವ ಸಮರ್ಥ ಮತ್ತು ಪ್ರಬುದ್ಧ ವ್ಯಕ್ತಿಯ ಅಗತ್ಯವಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.