ಟೆಲ್ ಅವೀವ್, ಅ.4: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smith Machchhar) ಅವರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಇಸ್ರೇಲ್‌ಗೆ ಆಹ್ವಾನಿಸಿದ್ದಾರೆ. ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಜ್ಯೋತಿ ಬೆಳಗಿಸಲು ನೆತನ್ಯಾಹು ಆಹ್ವಾನಿಸಿದ್ದಾರೆ. ದುಬೈನಿಂದ ಟೆಲ್ ಅವೀವ್‌ಗೆ ಹಾರುತ್ತಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯ ಬಗ್ಗೆ ಗಾಯಗೊಂಡ ಪೈಲಟ್‌ನೊಂದಿಗೆ ಮಾತನಾಡಿದ ನಂತರ, ಇಸ್ರೇಲ್ ಪ್ರಧಾನಿ ಈ ಆಹ್ವಾನ ನೀಡಿದ್ದಾರೆ.
ಶನಿವಾರ (ಅ.3) ನಡೆದ ಭಾವನಾತ್ಮಕ ಮಾತುಕತೆ ವೇಳೆ, ನೆತನ್ಯಾಹು ಅವರು ಘಟನೆಯ ಸಮಯದಲ್ಲಿ ಮಚ್ಚಾರ್ ಅವರು ತೋರಿದ ಧೈರ್ಯಕ್ಕಾಗಿ ಶ್ಲಾಘಿಸಿದ್ದಾರೆ. ಮುಂದಿನ ವರ್ಷ ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಪೈಲಟ್ ಮತ್ತು ಮೋದಿ ಅವರು ಜ್ಯೋತಿ ಬೆಳಗಿಸಬೇಕೆಂದು ಅವರು ಬಯಸಿದ್ದಾಗಿ ಹೇಳಿದರು.
“ನೀವು ಇಸ್ರೇಲ್, ಭಾರತ ಮತ್ತು ಇಡೀ ಜಗತ್ತಿಗೆ ಹೀರೋ. ನಾನು ಕ್ಯಾಪ್ಟನ್ ಸ್ಮಿತ್ ಮತ್ತು ಪ್ರಧಾನಿ ಮೋದಿಯವರನ್ನು ಉತ್ತಮ ಸ್ನೇಹಿತರನ್ನಾಗಿ ಆಹ್ವಾನಿಸುತ್ತೇನೆ. ಅವರು ಸಂಭ್ರಮಾಚರಣೆಯ ಜ್ಯೋತಿಯನ್ನು ಹೊತ್ತೊಯ್ಯಬೇಕೆಂದು ನಾನು ಬಯಸುತ್ತೇನೆ. ಇದು ನಮ್ಮ ಸ್ವಾತಂತ್ರ್ಯ ದಿನದಂದು ನಾವು ನೀಡುವ ಅತ್ಯುನ್ನತ ಗೌರವ” ಎಂದು ಹೇಳಿದರು.
ಇಲ್ಲಿದೆ ಪೋಸ್ಟ್:
ನಂತರ ನೆತನ್ಯಾಹು, ಮಚ್ಚಾರ್ ಅವರ ಬಳಿ ಘಟನೆ ಹೇಗೆ ಪ್ರಾರಂಭವಾಯಿತು ಎಂದು ಕೇಳಿದರು. ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಬರುವ ಮೊದಲು ಕಾಕ್‌ಪಿಟ್ ಒಳಗೆ ಏನಾಯಿತು ಎಂದು ಕ್ಯಾಪ್ಟನ್ ವಿವರಿಸಿದರು. ಸಹ ಪೈಲಟ್ ಪ್ರಾರ್ಥನೆ ಮಾಡುತ್ತಿದ್ದಾಗ ಘಟನೆ ಪ್ರಾರಂಭವಾಯಿತು ಎಂದು ಮಚ್ಚಾರ್ ನೆತನ್ಯಾಹುಗೆ ತಿಳಿಸಿದರು.
ಪ್ರಾರ್ಥನೆ ಮಾಡಲು ಸಮಯ ನೀಡುವಂತೆ ಸಹ ಪೈಲಟ್ ಕೇಳಿಕೊಂಡಿದ್ದರು. ಪ್ರಾರ್ಥನೆ ಮಾಡುವುದು ಸಾಮಾನ್ಯ ಸಂಗತಿಯಾದ್ದರಿಂದ, ಸಹ ಪೈಲಟ್ ಸಮಯ ಕೇಳಿದ್ದರಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಅವರು ಭಾವಿಸಿದ್ದರು. ಪ್ರಾರ್ಥನೆಗೆ ಅವರು ಒಪ್ಪಿಕೊಂಡಿದ್ದಾಗಿ ಹೇಳಿದರು.
ಸಹ ಪೈಲಟ್‌ಗೆ ಗೌರವ ನೀಡುವ ಉದ್ದೇಶದಿಂದ ಮಚ್ಚಾರ್ ಅವರು ಹಿಂದಿದ್ದ ಸಹ ಪೈಲಟ್‌ನತ್ತ ನೋಡದೆ, ವಿಮಾನದ ಮುಂಭಾಗದ ಕಡೆಗೆ ನೋಡುತ್ತಿದ್ದರು ಎಂದು ಹೇಳಿದರು. ಆದರೆ ಕೆಲವೇ ನಿಮಿಷಗಳ ನಂತರ, ಅವರ ಮೇಲೆ ಏಕಾಏಕಿ ಹಲ್ಲೆ ನಡೆಯಿತು.
“ಬಹಳಷ್ಟು ಜನರು ಪ್ರಾರ್ಥಿಸುತ್ತಾರೆ, ಇದು ಅಸಾಮಾನ್ಯವೇನಲ್ಲ. ಅವರು ಗೌರವದಿಂದ ಪ್ರಾರ್ಥಿಸುತ್ತಿರುವಾಗ, ನಾನು ಮುಂಭಾಗವನ್ನು ನೋಡುತ್ತಿದ್ದೆ, ಹಿಂಭಾಗವನ್ನು ನೋಡುತ್ತಿರಲಿಲ್ಲ. ನಾಲ್ಕೈದು ನಿಮಿಷಗಳ ನಂತರ ಇದ್ದಕ್ಕಿದ್ದಂತೆ, ನನ್ನ ತಲೆಯ ಹಿಂಭಾಗಕ್ಕೆ ದೊಡ್ಡ ಹೊಡೆತ ಬಿದ್ದಿತು. ವಿಮಾನಕ್ಕೆ ಭೀಕರ ಹಾನಿಯಾಗಿದೆ. ಏನೋ ಸರಿಯಾಗಿಲ್ಲ ಎಂದು ನನಗೆ ಮೊದಲು ಅನಿಸಿತು. ಆದರೆ ಅದರ ನಂತರ ಒಂದರ ನಂತರ ಒಂದರಂತೆ ಹೊಡೆತಗಳು ಬರುತ್ತಲೇ ಇದ್ದವು. ಆಗ ನನಗೆ ಅರಿವಾಯಿತು ಅದು ವಿಮಾನವಲ್ಲ, ನನ್ನೊಂದಿಗೆ ಕಾಕ್‌ಪಿಟ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿ” ಎಂದು ಅಂತಾ ಅವರು ಹೇಳಿದರು.
ಕಾಕ್‌ಪಿಟ್‌ನಲ್ಲಿ ನಡೆದಿದ್ದು ಏನು? ಇಸ್ರೇಲ್ ಪ್ರಧಾನಿಗೆ ಸ್ಮಿತ್ ಮಚ್ಚಾರ್ ವಿವರಿಸಿದ ಆ ಭಯಾನಕ ಅನುಭವ ಹೇಗಿತ್ತು?
ಮಚ್ಚಾರ್ ಅವರು ತಮ್ಮ ಮೇಲೆ ದಾಳಿ ನಡೆಯುತ್ತಿದೆ ಎಂಬುದನ್ನು ಅರಿತುಕೊಂಡರು. ಕೂಡಲೇ ಕಾಕ್‌ಪಿಟ್‌ನ ಬಾಗಿಲು ತೆರೆಯಬೇಕೆಂದು ಅವರಿಗೆ ಅರ್ಥವಾಯಿತು. ಅವರು ಒಂದು ಬಾರಿ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಆದರೆ ದಾಳಿ ನಡೆಸುತ್ತಿದ್ದ ವ್ಯಕ್ತಿ ಮತ್ತೆ ಬಾಗಿಲು ಮುಚ್ಚಿದನು. ಗಾಯಗೊಂಡಿದ್ದರೂ ಮತ್ತೊಮ್ಮೆ ಪ್ರಯತ್ನಿಸಲೇಬೇಕು ಎಂದು ತಾವು ನಿರ್ಧರಿಸಿದ್ದಾಗಿ ಪೈಲಟ್ ಹೇಳಿದರು.
“ನನ್ನಲ್ಲಿ ಕೊನೆಯ ಬಾರಿಗೆ ಹೋರಾಡುವ ಶಕ್ತಿ ಮಾತ್ರ ಉಳಿದಿತ್ತು. ನಾನು ಮತ್ತೊಮ್ಮೆ ಪ್ರಯತ್ನಿಸದಿದ್ದರೆ ಸಾಯುತ್ತೇನೆ ಎಂಬುದು ನನಗೆ ಗೊತ್ತಿತ್ತು. ಆಗ ನನ್ನಲ್ಲಿದ್ದ ಎಲ್ಲಾ ಶಕ್ತಿಯನ್ನು ಬಳಸಿ ಬಾಗಿಲಿನ ಕಡೆಗೆ ಸಾಗಿದೆ. ಪೂರ್ಣ ಶಕ್ತಿಯಿಂದ ಬಾಗಿಲನ್ನು ತಳ್ಳಿ, ಅದನ್ನು ತೆರೆದೆ. ಆಮೇಲೆ ಏನಾಯಿತು ಎಂಬುದು ನಿಮಗೆ ತಿಳಿದೇ ಇದೆ” ಎಂದು ಮಚ್ಚಾರ್ ಹೇಳಿದರು.
ಕಾಕ್‌ಪಿಟ್‌ನ ಬಾಗಿಲು ತೆರೆದಿದ್ದರಿಂದ ಪ್ರಯಾಣಿಕರು ಒಳಗೆ ಪ್ರವೇಶಿಸಿ, ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ತಡೆಯಲು ಸಾಧ್ಯವಾಯಿತು. ಬಳಿಕ ವಿಮಾನವು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು.
“ನಿಮ್ಮ ಧೈರ್ಯ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಶಾಂತವಾಗಿ ನಿರ್ಧಾರ ತೆಗೆದುಕೊಂಡ ರೀತಿಯನ್ನು ಕಂಡು ನನಗೆ ಆಶ್ಚರ್ಯವಾಗಿದೆ. ನೀವು ಅಪಾರ ಧೈರ್ಯ ತೋರಿದ್ದೀರಿ. ಅನೇಕ ಜನರ ಜೀವಗಳನ್ನು ಉಳಿಸಿದ್ದೀರಿ. ನನ್ನ ಮತ್ತು ನನ್ನ ಪತ್ನಿಯ ಪರವಾಗಿ ನಿಮ್ಮ ಪತ್ನಿಗೂ ಶುಭಾಶಯಗಳನ್ನು ತಿಳಿಸಿ. ನಿಮಗೆ ಕುಟುಂಬವಿದೆ ಎಂಬುದು ನನಗೆ ಗೊತ್ತು. ಆದಷ್ಟು ಬೇಗ ಗುಣಮುಖರಾಗಿ. ನೀವು ಮಾಡಿದ ಎಲ್ಲ ಕಾರ್ಯಗಳಿಗೂ ಧನ್ಯವಾದಗಳು” ಎಂದು ನೆತನ್ಯಾಹು ಹೇಳಿದರು.