ಕಾಕ್‌ಪಿಟ್‌ನಲ್ಲಿ ನಡೆದಿದ್ದು ಏನು? ಇಸ್ರೇಲ್ ಪ್ರಧಾನಿಗೆ ಸ್ಮಿತ್ ಮಚ್ಚಾರ್ ವಿವರಿಸಿದ ಆ ಭಯಾನಕ ಅನುಭವ ಹೇಗಿತ್ತು?
ಆತ ಪ್ರಾರ್ಥನೆ ಮಾಡುತ್ತಿದ್ದ. ನಾನು ವಿಮಾನದ ಮುಂಭಾವಗವನ್ನು ನೋಡುತ್ತಿದ್ದೆ. ಕೆಲವು ನಿಮಿಷಗಳ ಬಳಿಕ ತಲೆಗೆ ಬಲವಾದ ಏಟು ಬಿತ್ತು. ವಿಮಾನಕ್ಕೆ ಏನೋ ಆಯಿತು ಎಂದು ಭಾವಿಸಿದೆ. ಆದರೆ ಮತ್ತೆ ಮತ್ತೆ ನನ್ನ ಮೇಲೆ ದಾಳಿಯಾದಾಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಕೆಲವು ಸಮಯಗಳೇ ಬೇಕಾಯಿತು... ಹೀಗೆ ಫ್ಲೈದುಬೈ ಕಾಕ್‌ಪಿಟ್ ಒಳಗೆ ನಡೆದ ಭಯಾನಕ ಘಟನೆಯ ಸಂಪೂರ್ಣ ಮಾಹಿತಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪೈಲೆಟ್ ಸ್ಮಿತ್ ಮಚ್ಚಾರ್ ವಿವರಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ವಿಮಾನದ ಪ್ರಯಾಣ (flydubai aircraft) ಆರಂಭವಾಗಿತ್ತು. ಸಹ ಪೈಲೆಟ್ ಪ್ರಾರ್ಥನೆಯಲ್ಲಿ ನಿರತನಾಗಿದ್ದನು. ನಾನು ಕಾಕ್‌ಪಿಟ್‌ನ (cockpit) ಮುಂಭಾಗವನ್ನು ನೋಡುತ್ತಿದ್ದೆ. ಎಲ್ಲವೂ ಸರಿಯಾಗಿದೆ ಎಂದುಕೊಂಡಿದ್ದ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು.. ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Prime Minister Benjamin Netanyahu) ಅವರಿಗೆ ದುಬೈನಿಂದ (dubai) ಇಸ್ರೇಲ್‌ಗೆ (Israel) ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಾಹಸಿ ಪೈಲೆಟ್ ಸ್ಮಿತ್ ಮಚ್ಚಾರ್ (Smit Machchhar) ಅವರು ಕಾಕ್‌ಪಿಟ್ ಒಳಗೆ ನಡೆದ ಭಯಾನಕ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಫ್ಲೈದುಬೈ ವಿಮಾನದ ನಿಯಂತ್ರಣವನ್ನು ಪಡೆಯಲು ಕೋ ಪೈಲೆಟ್ ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಅದು ಸಾಮಾನ್ಯ ವಿಮಾನಯಾನವಾಗಿತ್ತು. ಸಹ ಪೈಲಟ್ ಪ್ರಾರ್ಥನೆ ಮಾಡಲು ಬಯಸಿದ್ದನು. ಅಲ್ಲಿ ಅನೇಕ ಸ್ಥಳೀಯರು ಹೀಗೆ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಇದು ಅಸಾಮಾನ್ಯವೆಂದು ಅನಿಸಲಿಲ್ಲ. ಆತ ಪ್ರಾರ್ಥಿಸುತ್ತಿದ್ದಾಗ ಗೌರವದ ದೃಷ್ಟಿಯಿಂದ ನಾನು ಹಿಂಭಾಗಕ್ಕೆ ನೋಡದೆ ಮುಂಭಾಗವನ್ನೇ ನೋಡುತ್ತಿದ್ದೆ. ಸುಮಾರು ನಾಲ್ಕೈದು ನಿಮಿಷಗಳ ಬಳಿಕ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿತ್ತು. ಆಗ ಮೊದಲು ಬಂದ ಆಲೋಚನೆಯೆಂದರೆ ವಿಮಾನಕ್ಕೇ ಏನೋ ಭಾರಿ ಹಾನಿಯಾಗಿದೆ ಎಂಬುದಾಗಿತ್ತು ಎಂದರು.
ಲಖನೌಗೆ ಬಂದಿಳಿದ ದುಬೈಯಿಂದ ಥಾಯ್ಲೆಂಡ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ; ಕಾರಣವೇನು?
ಬಳಿಕ ಒಂದರ ಮೇಲೊಂದು ಹೊಡೆತಗಳು ಬಿದ್ದಾಗಲೇ ನನಗೆ ಅರಿವಾಗಿದ್ದು ಇದು ವಿಮಾನದ ಸಮಸ್ಯೆಯಲ್ಲ, ನನ್ನೊಂದಿಗೆ ಕಾಕ್‌ಪಿಟ್‌ನಲ್ಲಿದ್ದ ವ್ಯಕ್ತಿಯೇ ಹೀಗೆ ಮಾಡುತ್ತಿದ್ದಾನೆ ಎಂದು. ಅವನನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಆತ ಮಾಡಿದ ಆರಂಭಿಕ ಹೊಡೆತಗಳಿಂದಾಗಿ ನನ್ನ ದೃಷ್ಟಿ ಮಂಜಾಗಿ, ಏನೂ ಕಾಣದಂತಾಗಿತ್ತು. ಆಗ ವಿಮಾನ ವೇಗವಾಗಿ ಕೆಳಗೆ ಇಳಿಯುತ್ತಿರುವುದನ್ನು ಗಮನಿಸಿ ತಕ್ಷಣ ಕಾಕ್ ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದೆ. ಆದರೆ ಆತ ಅದನ್ನು ಮುಚ್ಚಿದ. ಆಗ ನಾನು ಕಾಕ್‌ಪಿಟ್‌ನ ನೆಲದ ಮೇಲೆ ಬಿದ್ದಿದ್ದೆ. ವಿಮಾನದ ಚಲನೆ, ಗಾಳಿಯ ರಭಸದ ಶಬ್ದ ಮತ್ತು ಜನರ ಕಿರುಚಾಟ ಕೇಳುತ್ತಿತ್ತು. ವಿಮಾನ ಪತನಗೊಳ್ಳುವುದನ್ನು ತಡೆಯಲು ಕೊನೆಯ ಅವಕಾಶ ಎಂದು ಅರಿತು ಸಂಪೂರ್ಣ ಶಕ್ತಿಯನ್ನು ಒಗ್ಗೂಡಿಸಿ, ಬಾಗಿಲಿನತ್ತ ನುಗ್ಗಿ ಅದನ್ನು ತೆರೆದೆ ಎಂದು ಹೇಳಿದರು.
ಆ ಕ್ಷಣದಲ್ಲಿ ನನ್ನಲ್ಲಿ ಹೋರಾಡುವ ಛಲವೊಂದು ಹುಟ್ಟಿಕೊಂಡಿತ್ತು. ಅದು ನನ್ನ ಕೊನೆಯ ಕಣವೆಂದು ಅನಿಸಿತು. ಅದನ್ನು ವೈಯಕ್ತಿಕ ಅಥವಾ ಜನರಿಗಾಗಿ ಮಾಡಿದ ಪ್ರಯತ್ನವೆನ್ನಿ. ಆದರೆ ನಾನು ಅದನ್ನು ಮಾಡಿದೆ. ಆಗ ನಾನು ಅದನ್ನು ಮಾಡದೇ ಇರುತ್ತಿದ್ದರೆ ಸಾಯುತ್ತಿದ್ದೆ. ಅದೃಷ್ಟವಶಾತ್ ಜನರು ತಕ್ಷಣವೇ ಪ್ರತಿಕ್ರಿಯಿಸಿದರು. ಪರಿಸ್ಥಿತಿಯ ನಿಯಂತ್ರಣವನ್ನು ಅವರು ತಮ್ಮ ಕೈಗೆ ತೆಗೆದುಕೊಂಡರು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸ್ಮಿತ್ ಮಚ್ಚಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ನೆತನ್ಯಾಹು ಅವರೊಂದಿಗಿನ ಸಂವಾದ ನಡೆಸಿದರು.
ಇಸ್ರೇಲ್ ನ ಟೆಲ್ ಅವಿವ್ ಗೆ ದುಬೈನಿಂದ ಬುಧವಾರ ಹೊರಟಿದ್ದ ಫ್ಲೈದುಬೈ ವಿಮಾನ ಎಫ್ ಝೆಡ್ 1073 ತುರ್ತು ಸಂಕೇತಗಳನ್ನು ರವಾನಿಸಿ 17,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಿಂದ ತೀವ್ರವಾಗಿ ಕೆಳಗೆ ಇಳಿಯಿತು. ಇದು ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಇದರಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದರು. ಬಳಿಕ ಈ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದೆಲ್ ಅಜೀಜ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
30ರ ಹರೆಯದ ಸ್ಮಿತ್ ಮಚ್ಚಾರ್ ಅವರು ತಮ್ಮ ಮೇಲೆ ಭಯೋತ್ಪಾದಕ ದಾಳಿ ನಡೆಸಿದರೂ ವಿಮಾನದಲ್ಲಿದ್ದ ಎಲ್ಲಾ 174 ಜನರ ಪ್ರಾಣ ಉಳಿಸಿದರು. ಅವರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ಫ್ಲೈದುಬೈ ವಿಮಾನ ಚಾಲನೆ ಮಾಡುತ್ತಿದ್ದಾರೆ. 9,500ಕ್ಕೂ ಹೆಚ್ಚು ಹಾರಾಟದ ಗಂಟೆಗಳೊಂದಿಗೆ 13 ವರ್ಷಗಳಿಗೂ ಹೆಚ್ಚು ಕಾಲ ವಾಣಿಜ್ಯ ವಿಮಾನಯಾನದಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2022ರ ಜೂನ್ ನಲ್ಲಿ ಫ್ಲೈದುಬೈಗೆ ಸೇರಿ ದುಬೈಗೆ ತೆರಳುವ ಮೊದಲು ಅವರು ಭಾರತದಲ್ಲಿದ್ದರು. ಸ್ಪೈಸ್‌ಜೆಟ್ ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದು, ಅದರಲ್ಲಿ ಅವರು 'ಲೈನ್ ಟ್ರೈನಿಂಗ್ ಕ್ಯಾಪ್ಟನ್' ಆಗಿದ್ದರು. ಸ್ಮಿತ್ ಮಚ್ಚಾರ್ ಅವರು ಮೂಲತಃ ಮುಂಬೈನ ಘಾಟ್‌ಕೋಪರ್‌ನವರು. ಅವನ ಸಹೋದರ ಕೂಡ ಫ್ಲೈದುಬೈನಲ್ಲಿ ಪೈಲಟ್ ಆಗಿದ್ದಾರೆ.
ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಕೋ ಪೈಲೆಟ್ ಅನ್ನು ಒಮಾನಿ ಪ್ರಜೆ ಹಮಾಮ್ ಅಲ್-ಹಮಾಮಿ ಎಂದು ಗುರುತಿಸಲಾಗಿದೆ. ಆತ ಮಚ್ಚಾರ್ ಮೇಲೆ ಸಾಮಾನ್ಯವಾಗಿ ಕಾಕ್‌ಪಿಟ್‌ನಲ್ಲಿ ಇರಿಸಲಾಗುವ ತುರ್ತು ಸಾಧನವಾದ ಕ್ರ್ಯಾಶ್ ಕೊಡಲಿಯಿಂದ ದಾಳಿ ನಡೆಸಿದ್ದನು. ದಾಳಿಯ ಹಿಂದಿನ ಉದ್ದೇಶ ಇನ್ನು ಸ್ಪಷ್ಟವಾಗಿಲ್ಲ.ಇದೊಂದು ಭಯೋತ್ಪಾದನಾ ಕೃತ್ಯ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಅನುಮತಿ ನಿರಾಕರಿಸಿದರೂ ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ: ಸಿಜೆಪಿ ನಾಯಕರ ವಿರುದ್ಧ ಪ್ರಕರಣ
ಆತನ ತಂದೆ ಓಮನ್ ಹಾಗೂ ತಾಯಿ ಸಿರಿಯನ್ ಎಂದು ಗುರುತಿಸಲಾಗಿದೆ. ಆತ ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ವಾಯುಯಾನ ನಿರ್ವಹಣೆಯಲ್ಲಿ ಮೂರು ವರ್ಷಗಳ ದೂರ ಶಿಕ್ಷಣ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, 2023 ರಲ್ಲಿ ಪದವಿ ಪಡೆದಿದ್ದಾನೆ. ಆದರೆ ಆತ ಅಲ್ಲಿ ಪೈಲಟ್ ತರಬೇತಿ ಪಡೆದಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ.