PM Narendra Modi : 7ವರ್ಷಗಳ ನಂತರ ಜಪಾನ್‌ಗೆ ಪ್ರಧಾನಿ ಮೋದಿ ಭೇಟಿ- ಕಾರ್ಯಕ್ರಮಗಳ ವಿವರ ಹೀಗಿದೆ
PM Modi in Japan: ಅಮೆರಿಕದೊಂದಿಗೆ ಸುಂಕ ಸಮರ ಇರುವ ಮಧ್ಯೆಯೇ ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜಪಾನ್ ಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರು ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ವೇಳೆ ರಾಜಕೀಯ, ಭೌಗೋಳಿಕ ಹಾಗೂ ಆರ್ಥಿಕ ವಿಚಾರಗಳ ಕುರಿತು ಎರಡು ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.


ಟೋಕಿಯೋ: ಎರಡು ದಿನಗಳ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಶುಕ್ರವಾರ ಟೋಕಿಯೊಗೆ (Tokyo) ಆಗಮಿಸಿದ್ದಾರೆ. ಸುಮಾರು ಏಳು ವರ್ಷಗಳಲ್ಲಿ ಇದು ಅವರ ಮೊದಲ ಸ್ವತಂತ್ರ ಪ್ರವಾಸವಾಗಿದೆ. ಎರಡು ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಅಮೆರಿಕದೊಂದಿಗಿನ (America) ಸುಂಕ ಸಮರದ ಮಧ್ಯೆ ಇದು ಹೆಚ್ಚಿನ ಮಹತ್ವ ಪಡೆದಿದೆ. ಈ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ಮಧ್ಯೆ ಭೌಗೋಳಿಕ, ರಾಜಕೀಯ, ಆರ್ಥಿಕ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರಿ ಸಿಬಿ ಜಾರ್ಜ್ (Sibi George) ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಈ ಭೇಟಿಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸುವುದು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಸಿಬಿ ಜಾರ್ಜ್, ಎರಡೂ ದೇಶಗಳ ನಡುವಿನ ಚರ್ಚೆಗಳು ಕೇವಲ ದ್ವಿಪಕ್ಷೀಯ ಸಮಸ್ಯೆಗಳ ಕುರಿತಾಗಿ ಅಲ್ಲ. ಶಾಂತಿಯುತ ಮತ್ತು ಸ್ಥಿರವಾದ ಇಂಡೋ- ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಲು ಪ್ರಮುಖ ಪಾತ್ರ ವಹಿಸುವ ಕ್ವಾಡ್‌ನ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದರು.
ಈ ವೇಳೆ ಎರಡು ರಾಷ್ಟ್ರಗಳು ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ವ್ಯಾಪಾರ ಯುದ್ಧದ ಮಧ್ಯೆ ಹೆಚ್ಚು ಮಹತ್ವ ಪಡೆಯಲಿದೆ. ರಾಜಕೀಯ, ಭೌಗೋಳಿಕ ಮತ್ತು ಆರ್ಥಿಕ ವಿಚಾರಗಳು ಈ ವೇಳೆ ಚರ್ಚೆಯಾಗಲಿದೆ ಎಂದು ಅವರು ಹೇಳಿದರು. ಇಂಡೋ- ಪೆಸಿಫಿಕ್‌ನ ಇಬ್ಬರು ಪ್ರಮುಖ ನಾಯಕರು ಭಾರತ ಮತ್ತು ಜಪಾನ್. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಕ್ವಾಡ್ ಚರ್ಚೆಗಳು ಮುಖ್ಯ ವಿಚಾರವಾಗಿದೆ ಎಂದರು.
#WATCH | Prime Minister Narendra Modi arrives in Tokyo, Japan. He is on a two-day visit to Japan at the invitation of Japanese PM Shigeru Ishiba to participate in the 15th India-Japan Annual Summit.
— ANI (@ANI) August 29, 2025
(Source: DD News) pic.twitter.com/GF1JvX9mJf
ಅಮೆರಿಕದೊಂದಿಗೆ ವ್ಯಾಪಾರ ಚಟುವಟಿಕೆ ವಿಸ್ತರಣೆ ಭಾರತಕ್ಕೆ ಸದ್ಯ ದುಬಾರಿಯಾಗುತ್ತಿರುವುದರಿಂದ ನವದೆಹಲಿಯು ಟೋಕಿಯೊದೊಂದಿಗೆ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಈ ಭೇಟಿಯು ಎರಡು ರಾಷ್ಟ್ರಗಳ ನಡುವಿನ ಸಂಬಂಧ, ಪ್ರಾದೇಶಿಕ ಭದ್ರತೆ, ಜಾಗತಿಕ ಆಡಳಿತವನ್ನು ಒಳಗೊಂಡ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ಜಪಾನ್ ಗೆ ಎಂಟನೇ ಬಾರಿ ಭೇಟಿ
ಪ್ರಧಾನಿ ಮೋದಿ ಅವರ ಮೊದಲ ಸ್ವತಂತ್ರ ಪ್ರವಾಸ ಇದಾಗಿದೆ. ಈ ಬಾರಿ ಅವರು ಜಪಾನ್ ನ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಭೇಟಿಯಾಗಲಿದ್ದಾರೆ. ಈ ಹಿಂದೆ 2018ರಲ್ಲಿ ಕೊನೆಯ ಬಾರಿಗೆ ಭಾರತ- ಜಪಾನ್ ಭೇಟಿಯಾಗಿತ್ತು. ಅದು ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. 2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಇದು ಅವರ ಎಂಟನೇ ಜಪಾನ್ ಭೇಟಿಯಾಗಿದೆ.
ವಿವಿಧ ಕಾರ್ಯಕ್ರಮ
ಮೋದಿ ಅವರು ಬೆಳಗ್ಗೆ ಜಪಾನ್ ಮತ್ತು ಭಾರತೀಯ ಕೈಗಾರಿಕೆಗಳ ನಾಯಕರೊಂದಿಗೆ ವ್ಯಾಪಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಬಲಪಡಿಸಲಿದೆ. ಈ ವೇಳೆ ಭಾರತದಲ್ಲಿ ಮುಂದಿನ ಪೀಳಿಗೆಯ ಇ10 ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ತಯಾರಿಸಲು ಪಾಲುದಾರಿಕೆಗಳನ್ನು ಘೋಷಿಸುವ ಸಾಧ್ಯತೆ ಇದೆ.
ಬಳಿಕ ಮೋದಿ ಅವರು ಜಪಾನಿನ ಗಣ್ಯರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನದ ಅನಂತರ ನಡೆಯುವ ಭಾರತ ಮತ್ತು ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುವ ಮೊದಲು ಝೆನ್ ಬೌದ್ಧ ದೇವಾಲಯ ಶೋರಿಂಜಾನ್-ದರುಮಾ-ಜಿಗೆ ಮೋದಿ ಭೇಟಿ ನೀಡಲಿದ್ದಾರೆ.
ಭೇಟಿ ಬಗ್ಗೆ ಮೋದಿ ಹೇಳಿದ್ದೇನು?
ಜಪಾನ್ ಪ್ರವಾಸಕ್ಕೆ ತೆರಳುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ನಮ್ಮ ಸಹಯೋಗಕ್ಕೆ ಹೊಸ ರೆಕ್ಕೆಗಳನ್ನು ನೀಡಲು, ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸಲು, ಎಐ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ವ್ಯಾಪಾರ ಸಂಬಂಧ
ಕಳೆದ ಹಲವು ದಶಕಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿರುವ ಭಾರತ ಮತ್ತು ಜಪಾನ್ ನಡುವಿನ ವ್ಯಾಪಾರ ಚಟುವಟಿಕೆಗಳು ಸ್ಥಿರವಾಗಿದೆ. 2024-25ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ದ್ವಿಪಕ್ಷೀಯ ವ್ಯಾಪಾರವು 21 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ತಲುಪಿದೆ. ಜಪಾನ್ ಭಾರತದ ಐದನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಮೂಲವಾಗಿದೆ.
ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ಸ್ವಲ್ಪ ಕುಸಿತ
ಆಗಸ್ಟ್ 31ರಿಂದ ಚೀನಾ ಭೇಟಿ
ಪ್ರಧಾನಿ ಮೋದಿ ಅವರು ಜಪಾನ್ ನಿಂದ ನೇರವಾಗಿ ಚೀನಾಕ್ಕೆ ಪ್ರವಾಸ ಮಾಡಲಿದ್ದು, ಇಲ್ಲಿ ನಡೆಯುವ ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆ ನಡೆಯಲಿದೆ. ಈ ನಡುವೆ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.