ಇಂಡೋನೇಷ್ಯಾ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ (Indonesian President Prabowo) ಅವರ ಭೇಟಿಗೂ ಮುನ್ನ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ (UNESCO World Heritage Site) ಸುಮಾರು 1,000 ವರ್ಷಗಳಷ್ಟು ಹಳೆಯದಾದ ಪ್ರಂಬನನ್ ದೇವಾಲಯದ (Prambanan Temple) ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಂಡರು. ಇದನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ. ಜಾವಾ ದ್ವೀಪದಲ್ಲಿರುವ ಪ್ರಂಬನನ್ ದೇವಾಲಯವು ಇಂಡೋನೇಷ್ಯಾದ ಅತಿ ದೊಡ್ಡ ಹಿಂದೂ ದೇವಾಲಯವಾಗಿದೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಭಾರತ ಬೆಂಬಲಿತ ಸಂರಕ್ಷಣಾ ಯೋಜನೆಯ ಕುರಿತು ಮಾತುಕತೆ ನಡೆಸುವ ಮೊದಲು ಪ್ರಧಾನಿ ಮೋದಿ ಇಂಡೋನೇಷ್ಯಾದ ಪ್ರಂಬನನ್ ದೇವಾಲಯದ ವೈಮಾನಿಕ ದೃಶ್ಯಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯುದ್ಧ ಮತ್ತೆ ಶುರು?: ತೈಲ ಮಾರಾಟ ಪರವಾನಿಗೆ ರದ್ದುಗೊಳಿಸಿ ಇರಾನ್ ಮೇಲೆ ದಾಳಿ ಆರಂಭಿಸಿದ ಅಮೆರಿಕ
ಮೆಜಸ್ಟಿಕ್ ಪ್ರಂಬನನ್ ದೇವಾಲಯ ಎನ್ನುವ ಶೀರ್ಷಿಕೆಯೊಂದಿಗೆ ತಮ್ಮ ಹೆಲಿಕಾಪ್ಟರ್‌ನಿಂದ ದೇವಾಲಯದ ಅದ್ಭುತ ವೈಮಾನಿಕ ನೋಟವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪ್ರಬೋವೊ ನಡುವೆ ವ್ಯಾಪಕ ದ್ವಿಪಕ್ಷೀಯ ಚರ್ಚೆಗಳನ್ನು ಮಂಗಳವಾರ ನಡೆಸಲಾಗಿದೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ, ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಬೆಳೆಸುವ ಬದ್ಧತೆಯ ಕುರಿತ ಯೋಜನೆಗಾಗಿ ಉದ್ದೇಶ ಪತ್ರವನ್ನು ವಿನಿಮಯ ಮಾಡಿಕೊಂಡರು.
ಇದಕ್ಕೂ ಮೊದಲು ಅವರು ಜಾವಾ ದ್ವೀಪದಲ್ಲಿರುವ ಪ್ರಂಬನನ್ ದೇವಾಲಯದ ಸಂಕೀರ್ಣವನ್ನು ಹೆಲಿಕಾಪ್ಟರ್ ನಲ್ಲಿ ಕುಳಿತು ವೀಕ್ಷಿಸಿದ್ದಾರೆ. ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಕಾಂಬೋಡಿಯಾದ ಅಂಕೋರ್ ವಾಟ್ ಅನಂತರ ಆಗ್ನೇಯ ಏಷ್ಯಾದ ಎರಡನೇ ಅತೀ ದೊಡ್ಡ ದೇವಾಲಯವಾಗಿರುವ ಇದು ಸುಮಾರು 40 ಹೆಕ್ಟೇರ್‌ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಸುಮಾರು 240 ದೇವಾಲಯಗಳನ್ನು ಒಳಗೊಂಡಿರುವ ಇದು ಇಂಡೋನೇಷ್ಯಾದ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತು.
9ನೇ ಶತಮಾನದಲ್ಲಿಈ ದೇವಾಲಯವನ್ನು ಹಿಂದೂ ಮಾತರಂ ಸಾಮ್ರಾಜ್ಯದ ರಾಜ ರಾಕೈ ಪಿಕಾಟನ್ ನಿರ್ಮಿಸಲು ಪ್ರಾರಂಭಿಸಿದ್ದನು. ಆತನ ಉತ್ತರಾಧಿಕಾರಿ ಲೋಕಪಾಲ ಇದನ್ನು ಪೂರ್ಣಗೊಳಿಸಿದನು. ಇದಕ್ಕೆ ಪ್ರತಿಸ್ಪರ್ಧಿಯಾಗಿ ಶೈಲೇಂದ್ರ ರಾಜವಂಶವು ಹತ್ತಿರದಲ್ಲೇ ಬೌದ್ಧ ಬೊರೊಬುದೂರ್ ದೇವಾಲಯವನ್ನು ನಿರ್ಮಿಸಿದೆ. ದೇವಾಲಯವು ತ್ರಿಮೂರ್ತಿಗಳಿಗೆ ಮೀಸಲಾಗಿದ್ದು, ಜ್ವಾಲಾಮುಖಿ ಕಲ್ಲಿನಿಂದ ಕೇಂದ್ರದಲ್ಲಿ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ.
ಹತ್ತಿರದ ಮೆರಾಪಿ ಶಿಖರದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟಗಳು, ತೀವ್ರವಾದ ಭೂಕಂಪನಗಳ ಕಾರಣದಿಂದ ದೇವಾಲಯದ ರಚನೆಗೆ ಸಾಕಷ್ಟು ಹಾನಿಯಾಗಿದೆ. 19ನೇ ಶತಮಾನದಲ್ಲಿ ಡಚ್ಚರು ಇದರ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು ಎನ್ನುತ್ತದೆ ಇತಿಹಾಸ. 1991ರಲ್ಲಿ ಯುನೆಸ್ಕೋ ಪ್ರಂಬನನ್ ಅನ್ನು ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ.
ಇಂಡೋನೇಷ್ಯಾದಲ್ಲಿ ಬಿಜು ಪಟ್ನಾಯಕ್ ಕೊಡುಗೆ ಸ್ಮರಿಸಿದ ನರೇಂದ್ರ ಮೋದಿ: ಎರಡು ರಾಷ್ಟ್ರಗಳನ್ನು ಬೆಸೆದ ಐತಿಹಾಸಿಕ ಕಥೆ
ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಹೊಸ ಸಂರಕ್ಷಣಾ ಒಪ್ಪಂದದಡಿಯಲ್ಲಿ ಏಷ್ಯಾದ ಅತ್ಯಂತ ಪ್ರಮುಖ ಹಿಂದೂ ಸ್ಮಾರಕಗಳಲ್ಲಿ ಒಂದನ್ನು ರಕ್ಷಿಸಲು ವಿಶೇಷ ಪರಿಣತಿ ತಜ್ಞರನ್ನು ನಿಯೋಜಿಸುವ ಉದ್ದೇಶವು ಇದೆ. ಇದು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಸಂಪರ್ಕಗಳಿಗೆ ಹೊಸ ಜೀವ ತುಂಬುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಆಧುನಿಕ ಕಾರ್ಯತಂತ್ರ, ಆರ್ಥಿಕ ಮತ್ತು ಜನರಿಂದ ಜನರಿಗೆ ಸಹಕಾರವನ್ನು ವಿಸ್ತರಿಸುತ್ತದೆ ಎಂಬುದಾಗಿ ನವದೆಹಲಿ ತಿಳಿಸಿದೆ.