ಜೂನ್ 17ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ; ಜಗತ್ತಿನ ಕುತೂಹಲ ಕೆರಳಿಸಿದೆ ಇಬ್ಬರು ನಾಯಕರ ಮೀಟಿಂಗ್
G7 Summit: ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಹತ್ವದ ಮಾತಿಕತೆ ನಡೆಸಲಿದ್ದಾರೆ. ಜೂನ್ 17ರಂದು ಈ ನಾಯಕರು ಪರಸ್ಪರ ಭೇಟಿಯಾಗಲಿದ್ದು, ಜಗತ್ತೇ ಕುತೂಹಲದಿಂದ ಈ ಬೆಳವಣಿಗೆಯನ್ನು ಎದುರು ನೋಡುತ್ತಿದೆ.
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಪ್ಯಾರಿಸ್, ಜೂ. 13: ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆ (G7 Summit) ಜಗತ್ತಿನ ಮಹಾನ್ ನಾಯಕರ ಮುಖ್ಯ ಮಾತುಕತೆಗೆ ವೇದಿಕೆಯಾಗಲಿದೆ. ಹೌದು, ಜೂನ್ 17ರಂದು ಫ್ರಾನ್ಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮುಖಾಮುಖಿ ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಲಿದ್ದು, ಸದ್ಯ ಇವರ ಭೇಟಿಯ ಬಗ್ಗೆ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷ, ಅದರ ಬೆನ್ನಲ್ಲೇ ಸ್ಥಗಿತಗೊಂಡ ಹೊರ್ಮುಜ್ ಜಲಸಂಧಿ ಮತ್ತು ಇಂಧನ ಕೊರತೆಯ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಮೋದಿ ಮತ್ತು ಟ್ರಂಪ್ ಸಮಾಲೋಚನೆಯನ್ನು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಜತೆಗೆ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಈ ಸಮಾಲೋಚನೆ ಆಯೋಜಿಸಿರುವುದು ಮಹತ್ವ ಪಡೆದುಕೊಂಡಿದೆ. ಇಬ್ಬರು ನಾಯಕರು ವ್ಯಾಪಾರ, ಇಂಧನ ಸಹಕಾರ, H-1B ವೀಸಾ ನೀತಿ, ಪ್ರಾದೇಶಿಕ ಭದ್ರತೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯನ್ನು ಚರ್ಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 17ರಂದು ಮೋದಿ ಜತೆ ಟ್ರಂಪ್ ಮಾತುಕತೆ:
🚨President Trump to have a bilateral meeting with PM Modi on Wednesday, June 17th on the sidelines of the G-7 Summit in France. pic.twitter.com/G8gzEtP04I
— Rohit Sharma 🇺🇸🇮🇳 (@DcWalaDesi) June 13, 2026
ಒಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರನ್ನು ಸಾಗಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನಡೆಸಿದ ಸರಣಿ ದಾಳಿಗಳನ್ನು ಭಾರತ ಬಲವಾಗಿ ಖಂಡಿಸಿದ ಕೆಲವೇ ದಿನಗಳಲ್ಲಿ ಈ ಮಾತುಕತೆ ನಡೆಯಲಿದೆ. ಇರಾನ್‌ನ ಹೊರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಹೊರಟ ಹಡಗುಗಳ ಮೇಲೆ ಅಮೆರಿಕ ನಡೆಸಿರುವ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ದಾಳಿಯನ್ನು ಅಮೆರಿಕ ಸಮರ್ಥಿಸಿಕೊಂಡರೆ, ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜೂನ್ 13ರಿಂದ 18ರವರೆಗೆ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ - ಸ್ಲೋವಾಕಿಯಾ ಪ್ರವಾಸ
ಒಂದೇ ವಾರದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ಅಮೆರಿಕ 3ನೇ ಬಾರಿ ದಾಳಿ ನಡೆಸಿರುವುದರಿಂದ ಕೆರಳಿದ ಭಾರತ 2 ದಿನಗಳಲ್ಲಿ 2 ಬಾರಿ ದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ ಜೃಸನ್ ಮೀಕ್ಸ್ ಅವರಿಗೆ ಸಮನ್ಸ್ ನೀಡಿದೆ.
ಪ್ರಮುಖ ಅಜೆಂಡಾ
ಮೋದಿ ಮತ್ತು ಟ್ರಂಪ್ ಮಾತುಕತೆಯ ಪ್ರಮುಖ ಅಜೆಂಡಾ ಎರಡು ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಆಗಿರಲಿದೆ ಎನ್ನಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಎರಡೂ ದೇಶಗಳು ಈಗಾಗಲೇ ಮಾತುಕತೆ ನಡೆಸುತ್ತಿವೆ. ಅಲ್ಲದೆ H-1B ವೀಸಾಗಳ ಬಗ್ಗೆಯೂ ಮೂಡಿರುವ ಕಳವಳವನ್ನು ಭಾರತ ಅಮೆರಿಕದ ಮುಂದಿರಿಸುವ ಸಾಧ್ಯತೆ ಇದೆ. ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಗಳು ಅಸ್ಥಿರವಾಗಿರುವುದರಿಂದ ಇಂಧನ ಸಹಕಾರವು ಮತ್ತೊಂದು ಪ್ರಮುಖ ಚರ್ಚಾಸ್ಪದ ವಿಷಯವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ಯತ್ನ: ಇರಾನ್ ವಿರುದ್ಧ ಟ್ರಂಪ್ ಕಿಡಿ
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಏವಿಯನ್-ಲೆಸ್-ಬೈನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ. ಇದು ಮೋದಿ ಪಾಲ್ಗೊಳ್ಳುತ್ತಿರುವ ಸತತ 7ನೇ ಶೃಂಗಸಭೆ ಎನ್ನುವುದು ವಿಶೇಷ. ಇನ್ನು 2025ರ ಫೆಬ್ರವರಿ ಬಳಿಕ ಮೊದಲ ಬಾರಿ ಮೋದಿ ಮತ್ತು ಟ್ರಂಪ್ ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.