ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ಯತ್ನ: ಇರಾನ್ ವಿರುದ್ಧ ಟ್ರಂಪ್ ಕಿಡಿ
ಹೊರ್ಮುಜ್ ಜಲಸಂಧಿಯಿಂದ ಹೊರಟಿದ್ದ ಭಾರತೀಯ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಈ ಆರೋಪವನ್ನು ಇರಾನ್ ತಳ್ಳಿಹಾಕಿದ್ದು, ಎರಡೂ ರಾಷ್ಟ್ರಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಇದೇ ವೇಳೆ ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಕುರಿತೂ ಪರಸ್ಪರ ವಿರುದ್ಧ ಹೇಳಿಕೆಗಳು ಹೊರಬಿದ್ದಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ -
ವಾಷಿಂಗ್ಟನ್: ಹೊರ್ಮುಜ್ ಜಲಸಂಧಿ (Hormuz Strait) ಯಿಂದ ಹೊರಟಿದ್ದ ಭಾರತೀಯ ಹಡಗುಗಳು ಮೇಲೆ ಇರಾನ್ (Iran) ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಆರೋಪಿಸಿದ್ದಾರೆ. ಈ ಘಟನೆ "ಸಂಪೂರ್ಣವಾಗಿ ಅಸ್ವೀಕಾರಾರ್ಹ" (Totally Unacceptable) ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ಕಳೆದ ರಾತ್ರಿ ಹೋರ್ಮುಜ್ ಜಲಸಂಧಿ ಯಿಂದ ಹೊರಟಿದ್ದ ಭಾರತೀಯ ಹಡಗುಗಳ ವಿರುದ್ಧ ಇರಾನ್ ನಡೆಸಲು ಯತ್ನಿಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಹೇಳಿದ್ದಾರೆ.
ಈ ಹೇಳಿಕೆ, ಓಮನ್ ಕರಾವಳಿ ಸಮೀಪ ಭಾರತೀಯ ಸಿಬ್ಬಂದಿ ಇದ್ದ ಮೂರು ಹಡಗುಗಳು ದಾಳಿಗೆ ಒಳಗಾದ ಘಟನೆಗಳ ಬೆನ್ನಲ್ಲೇ ಬಂದಿದೆ. ಪಲಾವ್ ಧ್ವಜದಡಿ ಸಂಚರಿಸುತ್ತಿದ್ದ ಎಂಟಿ ಸೆಟ್ಟೆಬೆಲ್ಲೊ ಟ್ಯಾಂಕರ್ ಮೇಲಿನ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
ಆದರೆ ಟ್ರಂಪ್ ಅವರ ಆರೋಪಗಳನ್ನು ಇರಾನ್ ತಳ್ಳಿಹಾಕಿದ್ದು, ಇವು ಆಧಾರರಹಿತ ಆರೋಪಗಳಾಗಿವೆ ಎಂದು ಪ್ರತಿಕ್ರಿಯಿಸಿದೆ. ಭಾರತೀಯ ಹಡಗುಗಳ ವಿರುದ್ಧ ನಡೆದ ಇತ್ತೀಚಿನ ಅಮೆರಿಕದ ಕ್ರಮಗಳಿಂದ ಗಮನ ಬೇರೆಡೆ ಸೆಳೆಯಲು ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಇರಾನ್ ಹೇಳಿದೆ.
ಭಾರತ ಸರ್ಕಾರ ಈ ದಾಳಿಗಳನ್ನು "ತೀವ್ರ ಕಳವಳಕಾರಿ" ಎಂದು ಬಣ್ಣಿಸಿದ್ದು, ವಿದೇಶಾಂಗ ಸಚಿವಾಲಯ ಇಂತಹ ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದೆ.
ಅಮೆರಿಕ-ಇರಾನ್ ಒಪ್ಪಂದದ ಬಗ್ಗೆ ಟ್ರಂಪ್ ಅಸಮಾಧಾನ
ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಪ್ರಸ್ತಾಪಿಸಲಾದ ಅಮೆರಿಕ-ಇರಾನ್ ಒಪ್ಪಂದದ ಬಗ್ಗೆ ಇರಾನ್ ಸೋರಿಕೆ ಮಾಡಿರುವ ಮಾಹಿತಿಯೂ ಸತ್ಯಕ್ಕೆ ದೂರವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
“ಇರಾನ್ ನೀಡಿರುವ ಒಪ್ಪಂದದ ವಿವರಗಳು ವಾಸ್ತವಾಂಶಗಳಿಗೆ ಹೊಂದಿಕೆಯಾಗುವುದಿಲ್ಲ. ಅವರೊಂದಿಗೆ ಸದುದ್ದೇಶದಿಂದ ವ್ಯವಹರಿಸುವುದು ಕಷ್ಟ” ಎಂದು ಟ್ರಂಪ್ ಟೀಕಿಸಿದ್ದಾರೆ.
ಭಯೋತ್ಪಾದನೆಗೆ ಪೋಷಣೆ ನೀಡುವವರಿಗೆ ಸಿಂಧೂ ನದಿ ನೀರು ಏಕೆ ಬೇಕು?: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
ಜೆಡಿ ವ್ಯಾನ್ಸ್ ಸ್ಪಷ್ಟನೆ
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಒಪ್ಪಂದದ ಬಗ್ಗೆ ಹರಿದಾಡುತ್ತಿರುವ ಮಾಹಿತಿಯನ್ನು "ಸುಳ್ಳು ಮಾಹಿತಿ" ಎಂದು ತಳ್ಳಿಹಾಕಿದ್ದಾರೆ. “ಈ ಒಪ್ಪಂದದ ಭಾಗವಾಗಿ ಇರಾನ್‌ಗೆ ಯಾವುದೇ ನಗದು ಹಣ ನೀಡಲಾಗುವುದಿಲ್ಲ. ಒಪ್ಪಂದದ ಷರತ್ತುಗಳನ್ನು ಪೂರೈಸಿದರೆ ಮಾತ್ರ ಆರ್ಥಿಕ ಲಾಭಗಳು ದೊರೆಯಲಿವೆ” ಎಂದು ಅವರು ತಿಳಿಸಿದ್ದಾರೆ.
ಒಪ್ಪಂದಕ್ಕೆ ಹತ್ತಿರವಾದ ಅಮೆರಿಕ-ಇರಾನ್
ಇನ್ನೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಯಶಸ್ಸಿನ ಹಂತ ತಲುಪಿವೆ ಎಂದು ಹೇಳಿದ್ದಾರೆ. “ಮಧ್ಯಪ್ರಾಚ್ಯದ ಯುದ್ಧ ಅಂತ್ಯಗೊಳಿಸುವ ಒಪ್ಪಂದಕ್ಕೆ ಎರಡೂ ದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಹತ್ತಿರವಾಗಿವೆ” ಎಂದು ಅವರು ಸಾಮಾಜಿಕ ಜಾಲತಾಣ X ನಲ್ಲಿ ತಿಳಿಸಿದ್ದಾರೆ.