ಢಾಕಾ, ಆ.16: 2024ರ ದಂಗೆಯ ಸಮಯದಲ್ಲಿ ಪಲಾಯನ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರನ್ನು ಹಸ್ತಾಂತರಿಸುವವರೆಗೆ ಪ್ರಧಾನಿ ತಾರಿಕ್ ರೆಹಮಾನ್ (Tarique Rahman) ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಬಾಂಗ್ಲಾದೇಶ (Bangladesh) ತಿಳಿಸಿದೆ. ಬಾಂಗ್ಲಾದೇಶದಲ್ಲಿ 2024ರಲ್ಲಿ ನಡೆದ ಭೀಕರ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಶೇಖ್ ಹಸೀನಾ ಸರ್ಕಾರವನ್ನು ಪತನಗೊಳಿಸಿತು. ಬಳಿಕ ಅವರು ಭಾರತಕ್ಕೆ ಪಲಾಯನಗೈದರು. ಆ ಬಳಿಕ ಉಭಯ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿದೆ. ಅವರು ಪ್ರಸ್ತುತ ಭಾರತದಲ್ಲೇ ಆಶ್ರಯ ಪಡೆದಿದ್ದಾರೆ.
ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ತಮ್ಮ ದೇಶಕ್ಕೆ ಹಸ್ತಾಂತರಿಸುವಂತೆ ಢಾಕಾ ಸರ್ಕಾರವು ಭಾರತಕ್ಕೆ ಪದೇ ಪದೆ ವಿನಂತಿಸುತ್ತಿದೆ. ಮುಂದಿನ ವಾರ ರೆಹಮಾನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಮಾಧ್ಯಮಗಳ ಊಹಾಪೋಹಗಳನ್ನು ವಿದೇಶಾಂಗ ಸಚಿವಾಲಯದ ಅಧಿಕಾರಿ ಎ.ಕೆ.ಎಂ. ಶಾಹಿದುಲ್ ಕರೀಂ ತಳ್ಳಿಹಾಕಿದ್ದಾರೆ.
ʼʼಭೇಟಿಗೆ ಅನುಕೂಲಕವಾದ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ. ಈ ನಿಟ್ಟಿನಲ್ಲಿ, ಶೇಖ್ ಹಸೀನಾ ಮತ್ತು ಇತರ ಪಲಾಯನಗೈದ ಅಪರಾಧಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ನಾವು ಭಾರತೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆʼʼ ಎಂದು ಕರೀಂ ತಿಳಿಸಿದ್ದಾರೆ. ಬಾಂಗ್ಲಾದೇಶದ ಈ ಹಸ್ತಾಂತರದ ವಿನಂತಿಯು ಪ್ರಸ್ತುತ ಪರಿಶೀಲನೆಯಲ್ಲಿದೆ ಎಂದು ಭಾರತ ಹೇಳಿದೆ.
ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಹಸ್ತಾಂತರಿಸುತ್ತ ಭಾರತ? ವಿದೇಶಾಂಗ ಸಚಿವಾಲಯ ಹೇಳಿದ್ದೇನು?
2026ರ ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡ ರೆಹಮಾನ್ ಮಲೇಷ್ಯಾ ಮತ್ತು ಚೀನಾಕ್ಕೆ ಭೇಟಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಕಳೆದ ವಾರ ಪ್ರಧಾನಿ ತಾರಿಕ್ ರೆಹಮಾನ್ ಅವರನ್ನು ಭೇಟಿ ಮಾಡಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸಂಭವನೀಯ ಪ್ರಗತಿಯಾಗಬಹುದು ಎಂಬ ಊಹಾಪೋಹ ಎದ್ದಿದೆ. ರೆಹಮಾನ್ ಭೇಟಿಯ ಸಾಧ್ಯತೆಯ ಬಗ್ಗೆ ಬಾಂಗ್ಲಾದೇಶ ಮತ್ತು ಭಾರತದ ಅಧಿಕಾರಿಗಳು ಇತ್ತೀಚಿನ ವಾರಗಳಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕರೀಂ ಹೇಳಿದರು.
ಶೇಖ್ ಹಸೀನಾ ತಮ್ಮ 15 ವರ್ಷಗಳ ಆಡಳಿತಾವಧಿಯಲ್ಲಿ ನಿರಂಕುಶಾಧಿಕಾರಿಯಾಗಿದ್ದರು ಎನ್ನುವುದು ವಿರೋಧಿಗಳ ಟೀಕೆ. ಒಂದು ವೇಳೆ ಜೈಲು ಶಿಕ್ಷೆಯಾಗುವುದಾದರೂ ಸರಿ ತಾವಂತೂ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಈಗಾಗಲೇ ಶೇಖ್ ಹಸೀನಾ ದೃಢ ಪ್ರತಿಜ್ಞೆ ಮಾಡಿದ್ದಾರೆ.