ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಹಸ್ತಾಂತರಿಸುತ್ತ ಭಾರತ? ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶವು ಭಾರತಕ್ಕೆ ಮನವಿ ಮಾಡಿದೆ. ಕೇಂದ್ರ ಭಾರತೀಯ ಹೈಕಮಿಷನರ್ ದಿನೇಶ್ ತ್ರಿವೇದಿ ಅವರನ್ನು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರು ಸೋಮವಾರ ಭೇಟಿಯಾಗಿದ್ದರು. ಇದರ ಮರುದಿನವೇ ಢಾಕಾ ಮತ್ತೊಮ್ಮೆ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರವು ಭಾರತಕ್ಕೆ ಮನವಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಭಾರತ ಮಂಗಳವಾರ ಹೇಳಿದೆ. ಭಾರತೀಯ ಹೈಕಮಿಷನರ್ ದಿನೇಶ್ ತ್ರಿವೇದಿ (Indian High Commissioner Dinesh Trivedi) ಮತ್ತು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ (Prime Minister Tarique Rahman) ಅವರು ಸೋಮವಾರ ಭೇಟಿಯಾಗಿದ್ದು, ಇದರ ಮರುದಿನವೇ ಢಾಕಾ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಮತ್ತೊಮ್ಮೆ ಭಾರತವನ್ನು ಒತ್ತಾಯಿಸಿದೆ.
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ 2024ರ ಆಗಸ್ಟ್‌ನಲ್ಲಿ ದೇಶಾದ್ಯಂತ ಉಂಟಾದ ಬೃಹತ್ ಸರ್ಕಾರಿ ವಿರೋಧಿ ಆಂದೋಲನದ ಕಾರಣದಿಂದ ಶೇಖ್ ಹಸೀನಾ ಅವರು ಢಾಕಾದಿಂದ ಪಲಾಯನ ಮಾಡಿ ಬಂದು ಭಾರತದಲ್ಲಿ ವಾಸವಾಗಿದ್ದಾರೆ. ಬಾಂಗ್ಲಾದೇಶವು ಪದೇ ಪದೇ ಅವರನ್ನು ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸುತ್ತಲೇ ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಹಸೀನಾ ಅವರ ಹಸ್ತಾಂತರಕ್ಕೆ ಸಂಬಂಧಿಸಿ ಭಾರತವು ಪಾಲಿಸಬೇಕಾದ ಪ್ರಕ್ರಿಯೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನು ನಾವು ಬಾಂಗ್ಲಾದೇಶಕ್ಕೆ ಸ್ಪಷ್ಟಪಡಿಸಿದ್ದೇವೆ. ಈ ಕುರಿತು ನಡೆಯುವ ಬೆಳವಣಿಗೆ ಕುರಿತು ನಾವು ಮಾಹಿತಿಯನ್ನು ನೀಡುತ್ತೇವೆ ಎಂದು ಹೇಳಿದರು.
ಬಾಂಗ್ಲಾದೇಶದ ಪ್ರಧಾನಿ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಎರಡು ಪ್ರತ್ಯೇಕ ಆಹ್ವಾನಗಳನ್ನು ನೀಡಲಾಗಿದೆ. ಒಂದು ದ್ವಿಪಕ್ಷೀಯ ಪ್ರವಾಸಕ್ಕಾಗಿ ಮತ್ತು ಇನ್ನೊಂದು ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಯ ಔಟ್ರೀಚ್ ಅಧಿವೇಶನದಲ್ಲಿ ಭಾಗವಹಿಸಲು. ಭಾರತವು ಸೆಪ್ಟೆಂಬರ್ 12 ಮತ್ತು 13 ರಂದು ವಾರ್ಷಿಕ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ಈ ಸಂದರ್ಭದಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಆರ್ಥಿಕ ಪರಿಣಾಮಗಳು ಸೇರಿದಂತೆ ಹಲವಾರು ಜಾಗತಿಕ ಸವಾಲುಗಳ ಕುರಿತು ವ್ಯಾಪಕ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಬಾಂಗ್ಲಾದೇಶದ ರಾಜಕೀಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಶಂಕಿತರಲ್ಲಿ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಂಧಿಸಲ್ಪಟ್ಟಿದ್ದು ಅವರನ್ನು ಕೂಡ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಕೋರಿದೆ. ಇದು ಕಾನೂನು ವಿಷಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜೈಸ್ವಾಲ್ ತಿಳಿಸಿದರು.
ಪ್ಲಾಸ್ಟಿಕ್‌ನಲ್ಲಿ ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ ಮಾಡುವಂತಿಲ್ಲ: ಹೊಸ ಮಾರ್ಗಸೂಚಿ ಪ್ರಕಟಿಸಿದ FSSAI
2024ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಅವರು ಧಮನಕಾರಿ ನೀತಿಯನ್ನು ಅನುಸರಿಸಿದ್ದಾರೆ. ಇದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಆರೋಪಿಸಿರುವ ಬಾಂಗ್ಲಾದೇಶ ಇದರಲ್ಲಿ ಹಸೀನಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಅವರನ್ನು ಭಾರತದಿಂದ ಗಡೀಪಾರು ಮಾಡುವಂತೆ ಮುಹಮ್ಮದ್ ಯೂನಸ್ ನೇತೃತ್ವದ ಹಿಂದಿನ ಸರ್ಕಾರವು ಭಾರತಕ್ಕೆ ಮನವಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಕಳೆದ ವರ್ಷ ಮರಣದಂಡನೆ ವಿಧಿಸಿದೆ.