ಓಸ್ಲೋ, ಮೇ 18: ತಮ್ಮ ಐದು ರಾಷ್ಟ್ರಗಳ ಅಧಿಕೃತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಸೋಮವಾರ (ಮೇ 18) ನಾರ್ವೆಯ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್ ಕ್ರಾಸ್ (Grand Cross) ಅನ್ನು ನೀಡಿ ಗೌರವಿಸಲಾಗಿದೆ. ಎರಡು ದಿನಗಳ ಭೇಟಿಗಾಗಿ ನಾರ್ವೆಯ ರಾಜಧಾನಿ ಓಸ್ಲೋಗೆ (Oslo) ಆಗಮಿಸಿರುವ ಮೋದಿ ಅವರಿಗೆ, ನಾರ್ವೆಯ ರಾಜ ಹೆರಾಲ್ಡ್-5 ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದು ಮೋದಿ ಅವರಿಗೆ ಸಂದ 32ನೇ ಜಾಗತಿಕ ಗೌರವವಾಗಿದೆ.
ಗ್ರ್ಯಾಂಡ್ ಕ್ರಾಸ್ ಎಂಬುದು ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್‌ನ ಅತ್ಯುನ್ನತ ದರ್ಜೆ. ನಾರ್ವೆಯ ಹಿತಾಸಕ್ತಿಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಮುನ್ನಡೆಸುವಲ್ಲಿ ಗಮನಾರ್ಹ ಕಪಡುಗೆ ನೀಡಿದವಿಗೆ ಇದನ್ನು ಪ್ರದಾನ ಮಾಡಲಾಗುತ್ತದೆ. ಇದು ಮೋದಿ ಅವರ ಮೊದಲ ನಾರ್ವೆ ಭೇಟಿಯಾಗಿದೆ. ಅಲ್ಲದೆ 43 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡಿದ ಮೊದಲ ಭೇಟಿ ಎನಿಸಿಕೊಂಡಿದೆ.
ನಾರ್ವೆಯ ಅತ್ಯುನ್ನತ ನಾಗರಿಕ ಗೌರವ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದ ಮೋದಿ:
ಪ್ರಧಾನಿ ನರೇಂದ್ರ ಮೋದಿಗೆ ಸ್ವೀಡನ್‌ನ ಅತ್ಯುನ್ನತ ಗೌರವ
ಇದಕ್ಕೂ ಮೊದಲು ಮೋದಿ ಸ್ವೀಡನ್‌ನ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದರು. ಇದನ್ನು ವಿದೇಶಿ ಗಣ್ಯರು ಮತ್ತು ಸರ್ಕಾರಿ ಮುಖ್ಯಸ್ಥರಿಗೆ ನೀಡುವ ಸ್ವೀಡನ್‌ನ ಅತ್ಯುನ್ನತ ಮನ್ನಣೆ ಎಂದು ಪರಿಗಣಿಸಲಾಗಿದೆ. ಈ ಅತ್ಯುನ್ನತ ಪ್ರಶಸ್ತಿಯು ಭಾರತ ಮತ್ತು ಸ್ವೀಡನ್ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಪ್ರಧಾನಿ ಮೋದಿ ನಡೆಸಿರುವ ನಿರಂತರ ಪ್ರಯತ್ನಗಳಿಗೆ ಸಂದ ಗೌರವ.
ʼʼದ್ವಿಪಕ್ಷೀಯ ಸಂಬಂಧ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವೀಡನ್‌ನ ಅತ್ಯುನ್ನತ ಪ್ರಶಸ್ತಿ 'ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್' ಪ್ರಧಾನ ಮಾಡಲಾಗಿದೆʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ʼʼಇದು ಸ್ನೇಹದ ಪುನರ್ ದೃಢೀಕರಣ. ಭಾರತ ಮತ್ತು ಸ್ವೀಡನ್ ಸಂಬಂಧ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಮತ್ತು ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಸ್ವೀಡನ್‌ನ ರಾಜಮನೆತನದ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಈ ಪ್ರಶಸ್ತಿ ಪ್ರದಾನ ಮಾಡಿದರುʼʼ ಎಂದು ಬರೆದುಕೊಂಡಿದ್ದಾರೆ.