ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಬಗ್ಗೆ ಡಚ್ ಕಳವಳಕ್ಕೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ: ತಿಳುವಳಿಕೆಯ ಕೊರತೆ ಎಂದು ವಾಗ್ದಾಳಿ
Narendra Modi Netherlands Visit: ಪ್ರಧಾನಿ ನರೇಂದ್ರ ಮೋದಿ ಅವರ ನೆದರ್‌ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸದಿರುವ ಕುರಿತು ಡಚ್ ಪತ್ರಕರ್ತರು ಪ್ರಶ್ನೆ ಎತ್ತಿದ್ದು, ಮಾಧ್ಯಮ ಸ್ವಾತಂತ್ರ್ಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ಮೋದಿ-ಡಚ್ ಪ್ರಧಾನಿ (ಸಂಗ್ರಹ ಚಿತ್ರ) -
ನವದೆಹಲಿ, ಮೇ 18: ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ನೆದರ್‌ಲ್ಯಾಂಡ್ಸ್ (Netherlands) ಪ್ರಧಾನಿ ರಾಬ್ ಜೆಟ್ಟನ್ (Dutch Prime Minister Rob Jetten) ಹೇಳಿಕೆ ನೀಡಿದ್ದಾರೆ ಎಂದು ಹೇಳಲಾದ ವರದಿಗಳಿಗೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಇಂತಹ ಅಭಿಪ್ರಾಯಗಳು ಭಾರತದ ಪ್ರಜಾಸತ್ತಾತ್ಮಕ ಮತ್ತು ನಾಗರಿಕತೆಯ ಸ್ವಭಾವದ ಕುರಿತು ತಿಳುವಳಿಕೆ ಕೊರತೆಯಿಂದ ಬಂದಿವೆ ಎಂದು ಭಾರತ ಸರ್ಕಾರ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೆದರ್‌ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಜಂಟಿ ಪತ್ರಿಕಾಗೋಷ್ಠಿ ನಡೆಸದಿರುವ ಕುರಿತು ಡಚ್ ಪತ್ರಕರ್ತರು ಪ್ರಶ್ನೆ ಎತ್ತಿದ್ದು, ಮಾಧ್ಯಮ ಸ್ವಾತಂತ್ರ್ಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಹೇಗ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್, ʼʼಭಾರತದ ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ರಚನೆಯ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕಾರಣ ಇಂತಹ ಟೀಕೆಗಳು ಹೆಚ್ಚಾಗಿ ಉದ್ಭವಿಸುತ್ತದೆʼʼ ಎಂದು ಹೇಳಿದರು. ʼʼಪ್ರಶ್ನೆ ಕೇಳುವ ವ್ಯಕ್ತಿಗೆ ಭಾರತದ ಬಗ್ಗೆ ಇರುವ ತಿಳುವಳಿಕೆಯ ಕೊರತೆಯಿಂದಾಗಿಯೇ ಇಂತಹ ಸಂದೇಹ ಎದುರಾಗುತ್ತದೆʼʼ ಎಂದು ಜಾರ್ಜ್ ಹೇಳಿದರು.
ನೆದರ್‌ಲ್ಯಾಂಡ್ಸ್ ಹೇಳಿಕೆಗೆ ಭಾರತದ ತಿರುಗೇಟು:
After the Dutch PM raised concerns over minorities in India, India gave a sharp and much-needed reality check.
— Ranjib Kr Sarmah. (@ranjibkumarsarm) May 17, 2026
This is the same civilisation where Jews never faced persecution, Christianity and Islam flourished for centuries, and persecuted communities from across the world… pic.twitter.com/eJA6V9k63Q
ಭಾರತದ ಧಾರ್ಮಿಕ ವೈವಿಧ್ಯತೆಯನ್ನು ಎತ್ತಿ ತೋರಿಸಿದ ಅವರು, ʼʼಭಾರತವು 5,000 ವರ್ಷಗಳಿಗಿಂತಲೂ ಹಳೆಯದಾದ ಭವ್ಯ ನಾಗರಿಕತೆಯನ್ನು ಹೊಂದಿದ್ದು, ಚೈತನ್ಯಶೀಲ ಮತ್ತು ಬಹುಸಾಂಸ್ಕೃತಿಕ ಸಮಾಜʼʼ ಎಂದು ವಿವರಿಸಿದರು. ʼʼಭಾಷೆ, ಸಂಸ್ಕೃತಿ, ಧರ್ಮ, ಆಹಾರ ಸೇರಿ ಎಲ್ಲ ವಿಚಾರದಲ್ಲೂ ವೈವಿಧ್ಯ ರಾಷ್ಟ್ರʼʼ ಎಂಬುದಾಗಿ ಅವರು ವಿವರಿಸಿದರು.
ʼʼಝಲ್ಮುರಿ ಇಲ್ಲಿಗೂ ತಲುಪಿದೆಯೇ?ʼʼ ನೆದರ್‌ಲ್ಯಾಂಡ್ಸ್‌ನಲ್ಲೂ ಪ್ರತಿಧ್ವನಿಸಿತು ಪ್ರಧಾನಿ ಮೋದಿ ಬಂಗಾಳ ಚುನಾವಣಾ ಹಾಸ್ಯ
ʼʼಭಾರತದಲ್ಲಿ ನಾಲ್ಕು ಧರ್ಮಗಳು ಹುಟ್ಟಿಕೊಂಡಿದೆ. ಭಾರತವು ಧರ್ಮಗಳ ಹೆತ್ತವ್ವʼʼ ಎಂದು ವಿವರಿಸಿದ ಜಾರ್ಜ್, ʼʼಹಿಂದೂ, ಜೈನ, ಬೌದ್ಧ ಹಾಗೂ ಸಿಖ್ ಧರ್ಮ ಹುಟ್ಟಿಕೊಂಡ ತವರೂರು ಇದು. ಜಗತ್ತಿನಲ್ಲಿ ಬೇರೆ ಯಾವುದೇ ದೇಶದಲ್ಲೂ ನಾಲ್ಕು ಧರ್ಮಗಳು ಹುಟ್ಟಿಕೊಂಡಂತಹ ಪರಂಪರೆ ಇಲ್ಲ. ಭಾರತದಲ್ಲಿ ಹುಟ್ಟಿಕೊಂಡ ಈ ಧರ್ಮಗಳು ನಶಿಸದೆ ಇಂದಿಗೂ ಜತೆಯಾಗಿ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿವೆʼʼ ಎಂದು ವಿವರಿಸಿದರು.
ಇತರ ಧರ್ಮಗಳ ಬಗ್ಗೆಯೂ ಉಲ್ಲೇಖಿಸಿದ ಜಾರ್ಜ್, ʼʼಯಹೂದಿ ಸಮುದಾಯವು 2,500 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಕಿರುಕುಳವಿಲ್ಲದೆ ದೇಶದಲ್ಲಿ ನಿರ್ಭೀತಿಯಿಂದ ವಾಸ ಮಾಡಿದೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಸಹ ಶತಮಾನಗಳಿಂದ ಪ್ರವರ್ಧಮಾನಕ್ಕೆ ಬಂದಿವೆʼʼ ಎಂದು ಹೇಳಿದರು. ʼʼಯೇಸು ಕ್ರಿಸ್ತನ ಪುನರುತ್ಥಾನದ ನಂತರ ಕ್ರಿಶ್ಚಿಯನ್ ಧರ್ಮ ಭಾರತಕ್ಕೆ ಬಂದಿತು. ಇಸ್ಲಾಂ ಧರ್ಮವು ಪ್ರವಾದಿ ಮೊಹಮ್ಮದ್ ಅವರ ಕಾಲದಲ್ಲಿ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂತುʼʼ ಎಂದು ಅವರು ತಿಳಿಸಿದರು.
ಭಾರತದಲ್ಲಿ ಅಲ್ಪಸಂಖ್ಯಾತರು ಮುಕ್ತವಾಗಿ ಬದುಕುತ್ತಿದ್ದಾರೆ ಎಂದು ವಿವರಿಸಿದ ಅವರು, ಇಲ್ಲಿ ಅವರು ಬಹಳ ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು. ʼʼದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಅಲ್ಪಸಂಖ್ಯಾತರ ಸಂಖ್ಯೆ ಇದ್ದಿದ್ದು ಕೇವಲ ಶೇ. 11. ಇದೀಗ ಅವರ ಸಂಖ್ಯೆ ಶೇ. 20ರಷ್ಟಿದೆ. ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿರುವ ಮತ್ತೊಂದು ದೇಶದ ಹೆಸರಿದ್ದರೆ ಹೇಳಿ? ಭಾರತ ಹೊರತುಪಡಿಸಿ ಅಂತಹ ದೇಶ ಯಾವುದು ಇಲ್ಲʼʼ ಎಂದು ಅವರು ಪ್ರತಿಪಾದಿಸಿದರು. ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಹರಣವಾಗುತ್ತಿದೆ ಎಂಬ ಆರೋಪಗಳಿಗೆ ಅವರು ಈ ರೀತಿ ತೀಕ್ಷ್ಣವಾಗಿ ಉತ್ತರ ನೀಡಿದರು.