ವಾಷಿಂಗ್ಟನ್: ಭಾರತಕ್ಕೆ ಅಮೆರಿಕವು ಶೇ. 25ರಷ್ಟು ಸುಂಕ (US tariffs to India) ಕಡಿತಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತ ಸಹಾಯಕ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (US Treasury Secretary Scott Besant) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಭಾರತದ ತೈಲ ಸಂಸ್ಕರಣಾಗಾರಗಳು ರಷ್ಯಾದಿಂದ ತೈಲ ಖರೀದಿ (Russian oil purchases) ಮಾಡುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿವೆ ಎಂದು ಹೇಳಿರುವ ಅವರು, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿದಿದೆ ಎಂದು ತಿಳಿಸಿದರು.
ರಷ್ಯಾದಿಂದ ತೈಲ ಖರೀದಿ ಪ್ರಮಾಣವು ಬಹುತೇಕ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಶೇ. 50ರಷ್ಟು ಸುಂಕವನ್ನು ಅರ್ಧದಷ್ಟು ಕಡಿಮೆ ಮಾಡಲು ಟ್ರಂಪ್ ಆಡಳಿತ ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.
ಸ್ವನಿಧಿ ಕಾರ್ಡ್‌ನಿಂದ ಸಿಗುತ್ತೆ ತಕ್ಷಣ ಹಣ; ಬೀದಿ ವ್ಯಾಪಾರಿಗಳಿಗೆ ನೆರವಾಗುವ ಈ ಯೋಜನೆಯ ವಿಶೇಷತೆ ಏನು?
ಭಾರತ ರಷ್ಯಾದ ತೈಲ ಖರೀದಿ ಮಾಡುತ್ತಿರುವುದರಿಂದಲೇ ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದ ಮೇಲೆ ಅಮೆರಿಕ ಸುಂಕವನ್ನು ದ್ವಿಗುಣಗೊಳಿಸಿತ್ತು. ಅವರು ರಷ್ಯಾದ ತೈಲ ಖರೀದಿ ಮುಂದುವರಿಸಿರುವುದರಿದ ಹೆಚ್ಚುವರಿಯಾಗಿ ಅವರಿಗೆ ಶೇ. 25 ರಷ್ಟು ಸುಂಕಗಳನ್ನು ವಿಧಿಸಿದ್ದೇವೆ. ಆದರೆ ಈಗ ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸುವುದನ್ನು ಕಡಿಮೆಗೊಳಿಸಿದೆ ಎಂದು ಬೆಸೆಂಟ್ ಹೇಳಿದರು.
ಬೆಸೆಂಟ್ ಅವರ ಈ ಹೇಳಿಕೆ ಭಾರತ-ಯುಎಸ್ ವ್ಯಾಪಾರ ಮಾತುಕತೆಗಳು ಸ್ವಲ್ಪ ಪ್ರಗತಿ ಸಾಧಿಸಿರುವುದನ್ನು ಸೂಚಿಸುತ್ತದೆ. ಈ ಹಿಂದೆ ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡದ ಕಾರಣ ಎರಡೂ ದೇಶಗಳ ನಡುವಿನ ಸಂಭಾವ್ಯ ಒಪ್ಪಂದವು ವಿಫಲವಾಗಿದೆ ಎಂದು ಹೇಳಿದ್ದರು. ಆದರೆ ಅವರ ಈ ಹೇಳಿಕೆಗಳನ್ನು ಭಾರತ ತಿರಸ್ಕರಿಸಿತು. ಆ ಬಳಿಕ ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ಎರಡು ದೇಶಗಳ ನಡುವೆ ವ್ಯಾಪಾರ ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ದೃಢಪಡಿಸಿದ್ದರು.
ಬೆಸೆಂಟ್ ಹೇಳಿಕೆಯ ಬಳಿಕ ಭಾರತ ಮತ್ತು ರಷ್ಯಾ ಇಂಧನ ವ್ಯಾಪಾರ ನಿಲ್ಲುತ್ತದೆಯೇ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿವೆ.ಆದರೆ ಈ ಬಗ್ಗೆ ಭಾರತ ಅಥವಾ ರಷ್ಯಾವಾಗಲಿ ದೃಢಪಡಿಸಿಲ್ಲ. ಕಳೆದ ಅಕ್ಟೋಬರ್ ಭಾರತವು ರಷ್ಯಾದೊಂದಿಗಿನ ತೈಲ ವ್ಯಾಪಾರವನ್ನು ನಿಲ್ಲಿಸುತ್ತದೆ ಎಂದು ಪ್ರಧಾನಿ ಮೋದಿ ತಮಗೆ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಆದರೆ ನವದೆಹಲಿ ಅಂತಹ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಹೇಳಿ ಅದನ್ನು ತಿರಸ್ಕರಿಸಿತ್ತು.