ಕಾಬೂಲ್: ಅಫ್ಘಾನಿಸ್ತಾನ (Afghanistan) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಈಗ ಯುದ್ಧದ ಭೀತಿ ಆರಂಭವಾಗಿದೆ. ಕಾಬೂಲ್ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್(Taliban) ಈಗ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದೆ. ನೆರೆಯ ರಾಷ್ಟ್ರವು ಅಫ್ಘಾನ್ ಭೂಪ್ರದೇಶದ ಮೇಲೆ "ಪದೇ ಪದೇ ಉಲ್ಲಂಘಿಸುತ್ತಿರುವುದಕ್ಕೆ" ಮತ್ತು ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ಪಡೆಗಳು ಪಾಕಿಸ್ತಾನ ಸೈನಿಕರ ವಿರುದ್ಧ "ಯಶಸ್ವಿ ಪ್ರತೀಕಾರ" ದಾಳಿಗಳನ್ನು ನಡೆಸಿವೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಿಜ್ಮಿ ಶನಿವಾರ ತಡರಾತ್ರಿ ಹೇಳಿದ್ದಾರೆ.
ಅಫ್ಘಾನ್- ಪಾಕ್ ಗಡಿಯಾಗಿರುವ ಡುರಾಂಡ್ ಲೈನ್‌ನಲ್ಲಿ (Durand Line) ನಡೆದ ಘರ್ಷಣೆಯಲ್ಲಿ 18 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಡುರಾಂಡ್ ರೇಖೆಯಾದ್ಯಂತ ಪಾಕಿಸ್ತಾನಿ ಸೇನೆ ಹಲವಾರು ಹೊರಠಾಣೆಗಳನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಅಫ್ಘಾನ್ ದಾಳಿಯನ್ನು "ಅಪ್ರಚೋದಿತ" ಎಂದು ಕರೆದಿದ್ದು, ಪಾಕಿಸ್ತಾನಿ ಪಡೆಗಳು ತಕ್ಕ ಉತ್ತರ ನೀಡಲಿವೆ ಎಂದು ಹೇಳಿದ್ದಾರೆ.
ಅಫ್ಘಾನ್ ಪಡೆಗಳ ದಾಳಿ
ಅಕ್ಟೋಬರ್ 9 ರಂದು, ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನ ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ಪಡೆಗಳು ಡುರಾಂಡ್ ರೇಖೆಯ ಬಳಿಯ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿವೆ. ಎರಡೂ ಮುಸ್ಲಿಮ್ ರಾಷ್ಟ್ರಗಳು ಘರ್ಷಣೆಯಲ್ಲಿ ತೊಡಗಿದ ಬೆನ್ನಲ್ಲೇ ಸೌದಿ ಅರೇಬಿಯಾ, ಕತಾರ್ ದೇಶಗಳು ಘರ್ಷಣೆಯನ್ನು ನಿಲ್ಲಿಸುವಂತೆ ಎರಡೂ ದೇಶಗಳ ಜೊತೆ ಮನವಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Islamabad Voilence: ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ಯಾಲಸ್ತೀನ್ ಪರ ಪ್ರತಿಭಟನೆ; ಗುಂಡೇಟಿಗೆ 11 ಬಲಿ
ಕತಾರ್ ವಿದೇಶಾಂಗ ಸಚಿವಾಲಯವು "ಎರಡೂ ಕಡೆಯವರು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡಬೇಕು, ಸಂಯಮವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿಕೆ ನೀಡಿದೆ. ಸೌದಿ ಅರೇಬಿಯಾ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ದೇಶಗಳು ಮಾತುಕತೆ ನಡೆಸಬೇಕು ಎಂದು ಹೇಳಿದೆ.