ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತಕ್ಕೆ ಸುಂಕ ಬೆದರಿಕೆ ಹಾಕಿ ರಷ್ಯಾದಿಂದ ತೈಲ ಖರೀದಿಗೆ ಮುಂದಾದ ಅಮೆರಿಕ; ಡೊನಾಲ್ಡ್‌ ಟ್ರಂಪ್‌ ಇಬ್ಬಗೆಯ ನೀತಿಗೆ ವ್ಯಾಪಕ ಟೀಕೆ

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಭಾರತಕ್ಕೆ ಸುಂಕ ವಿಧಿಸುವ ಬೆದರಿಕೆಯನ್ನು ಕಳೆದ ಸುಮಾರು ಒಂದು ವರ್ಷದಿಂದ ಹಾಕುತ್ತಿದ್ದ ಅಮೆರಿಕ ಇದೀಗ ತಾನೇ ಖುದ್ದಾಗಿ ರಷ್ಯಾದ ತೈಲ ಖರೀದಿ ಮಾಡಲು ಮುಂದಾಗಿದೆ. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದ್ವಿಮುಖ ನೀತಿಯನ್ನು ಪ್ರದರ್ಶನ ಮಾಡಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ದ್ವಿಮುಖ ನೀತಿಯನ್ನು ಅಮೆರಿಕ (US deal with russia) ಈಗ ಮತ್ತೆ ಪ್ರದರ್ಶಿಸಿದೆ. ಉಕ್ರೇನ್ ವಿರುದ್ಧ ಹೋರಾಟಕ್ಕೆ ರಷ್ಯಾದ ತೈಲ (russian oil) ಖರೀದಿಯಿಂದ ಆದಾಯ ದೊರೆತಂತಾಗುತ್ತದೆ ಎನ್ನುವ ವಾದ ಮಂಡಿಸುತ್ತಿದ್ದ ಅಮೆರಿಕ ಈಗ ಸ್ವತಃ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ. ಭಾರತವು ರಷ್ಯಾದ ತೈಲ ಖರೀದಿ ಮಾಡುವುದಕ್ಕೆ ಕಳೆದ ಸುಮಾರು ಒಂದು ವರ್ಷದಿಂದ ಸುಂಕ ಬೆದರಿಕೆಯನ್ನು (tariff threat to india) ಹಾಕುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( US President Donald Trump) ಇದೀಗ ರಷ್ಯಾದ ಡೀಸೆಲ್ ಅನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Russian President Vladimir Putin) ಅವರೊಂದಿಗೆ ಒಪ್ಪಂದ ಮಾಡಿಕೊಂಡರು.

ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅತಿಯಾದ ಸುಂಕಗಳನ್ನು ಹೇರಿ ಇನ್ನಷ್ಟು ಹೆಚ್ಚಿಸುವ ಬೆದರಿಕೆ ಒಡ್ಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ಡೀಸೆಲ್ ಅನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಈಗ ಭಾರಿ ಟೀಕೆಗೆ ಗುರಿಯಾಗಿದೆ.

ಪಿಂಕ್ ಫೋರ್ಸ್ ನಿಯೋಜನೆ, ಬಾಡಿ ಕ್ಯಾಮೆರಾಗಳ ಬಳಕೆ: ಸಿಜೆಪಿ ಪ್ರತಿಭಟನೆ ನಡುವೆ ದೆಹಲಿಯಲ್ಲಿ ಹೇಗಿದೆ ಬಿಗಿ ಭದ್ರತೆ?

ಮಾಸ್ಕೋಗೆ ಹೋಗುವ ಹಣದ ಹರಿವನ್ನು ತಡೆಯುವ ಮೂಲಕ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಿ ತಾವೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಲು ಬಯಸಿದ್ದ ಟ್ರಂಪ್ ಅವರು ಈ ಒಪ್ಪಂದದ ಮೂಲಕ ಈಗ ತಮ್ಮ ದ್ವಿಮುಖ ನೀತಿಯನ್ನು ಎತ್ತಿ ತೋರಿಸಿದರು.

ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ಭಾರತ, ಚೀನಾ ಸೇರಿದಂತೆ ಇನ್ನು ಹಲವು ರಾಷ್ಟ್ರಗಳ ಮೇಲೆ ಅಮೆರಿಕ ಶೇ. 100 ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಡೊನಾಲ್ಡ್ ಟ್ರಂಪ್‌ ಅವರಿಗೆ ನೀಡುವ 'ಲಿಂಡ್ಸೆ ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್' ಗೆ ಸಹಿ ಹಾಕಿದ ಕೆಲವೇ ವಾರಗಳ ಬಳಿಕ ಈ ಒಪ್ಪಂದ ನಡೆದಿದೆ. ಇದು ಈಗ ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ರಷ್ಯಾದಿಂದ ತೈಲ ಖರೀದಿ ಏಕೆ ?

ಮಧ್ಯಂತರ ಚುನಾವಣೆಗಳ ಮೊದಲು ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ರಷ್ಯಾದಿಂದ ಇಂಧನವನ್ನು ಖರೀದಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಇದು ಈಗ ಇತರ ದೇಶಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಹೊರ್ಮುಜ್ ಜಲ ಮಾರ್ಗದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ಅಮೆರಿಕದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಇದು ದೇಶಾದ್ಯಂತ ಹಣದುಬ್ಬರಕ್ಕೂ ಕಾರಣವಾಗಿದೆ. ಅಮೆರಿಕ-ಇರಾನ್ ಸಂಘರ್ಷ ಆರಂಭವಾದಾಗಿನಿಂದ ದೇಶದಲ್ಲಿ ಡೀಸೆಲ್ ಬೆಲೆಗಳು ಶೇಕಡಾ 70 ರಷ್ಟು ಏರಿಕೆಯಾಗಿವೆ. ಇದು ಅಮೆರಿಕದ ರೈತರಿಗೆ ಭಾರೀ ಹೊರೆಯಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಮೆರಿಕ ಈಗ ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡಿದೆ

ಈ ಮಾಹಿತಿಯನ್ನು ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ರಷ್ಯಾ ತಕ್ಷಣ 3,00,000 ಟನ್ ಡೀಸೆಲ್ ಅನ್ನು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದರ ಬಳಿಕ ಮುಂದಿನ ನವೆಂಬರ್‌ನಲ್ಲಿ 5,00,000 ಟನ್ ಮತ್ತು ಅನಂತರ ಒಂದು ಮಿಲಿಯನ್ ಟನ್ ಡೀಸೆಲ್ ಪೂರೈಕೆಯಾಗಲಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಡೀಸೆಲ್ ಬೆಲೆಗಳು ದಾಖಲೆ ಮಟ್ಟದಲ್ಲಿ ಮತ್ತು ವೇಗವಾಗಿ ಇಳಿಕೆಯಾಗಲಿವೆ. ಇದರಿಂದ ಅಮೆರಿಕನ್ನರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ನಮ್ಮ ರೈತರು, ಪಶುಪಾಲಕರು ಮತ್ತು ಟ್ರಕ್ ಚಾಲಕರಿಗೆ ಕಡಿಮೆ ಬೆಲೆಗಳಲ್ಲಿ ಡೀಸೆಲ್ ಪೂರೈಕೆ ಮಾಡುವುದು ಆದ್ಯತೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಈ ಒಪ್ಪಂದದ ಹಿನ್ನೆಲೆಯಲ್ಲಿ ಅಮೆರಿಕವು ರಷ್ಯಾದ ಡೀಸೆಲ್ ರಫ್ತಿನ ಮೇಲಿನ ವಿಧಿಸಿರುವ ನಿರ್ಬಂಧಗಳನ್ನು 2027ರ ಏಪ್ರಿಲ್ ವರೆಗೆ ಅಮಾನತುಗೊಳಿಸುವ ಸಾಧ್ಯತೆಯಿದೆ. ಈ ಒಪ್ಪಂದದ ಪರಿಣಾಮ ಉಕ್ರೇನ್‌ನೊಂದಿಗೆ ಹೊಸ ಸಂಘರ್ಷಕ್ಕೆ ನಾಂದಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಈ ಕುರಿತು ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಉಡುಗೊರೆ ಇದು. ಇದು ಯುದ್ಧವನ್ನು ಮತ್ತಷ್ಟು ದೀರ್ಘಕಾಲದವರೆಗೆ ಎಳೆಯುವ ಹೂಡಿಕೆಗೆ ಸಮಾನವಾಗಿದೆ ಎಂದು ಟೀಕಿಸಿದ್ದಾರೆ.

"ನನಗೆ 8 ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕಿತ್ತು": ಪ್ರಶಸ್ತಿ ಸಮಿತಿ ವಿರುದ್ಧ ಟ್ರಂಪ್ ಆಕ್ರೋಶ

ಟ್ರಂಪ್ ಆಡಳಿತದ ಈ ದ್ವಂದ್ವ ನಿಲುವಿನ ಕುರಿತು ಅನೇಕ ತಜ್ಞರು ಮತ್ತು ಅಧಿಕಾರಿಗಳ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಭೂ-ರಾಜಕೀಯ ತಜ್ಞ, ಜಾರ್ಜ್ ಡಬ್ಲ್ಯೂ ಬುಷ್ ಅವರ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದ ಅಮೆರಿಕದ ಮಾಜಿ ಅಧಿಕಾರಿ ಇವಾನ್ ಎ. ಫೀಗೆನ್‌ಬಾಮ್, ಇದೊಂದು ವಿಶ್ವಕ್ಕೆ ಅತ್ಯಂತ ಕೆಟ್ಟ ಸಂದೇಶ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರಿಯುತ್ತಿರುವಾಗಲೇ ಅಮೆರಿಕವು ಪುಟಿನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಿಗೂ ಮುನ್ನ ಅಮೆರಿಕದಲ್ಲಿ ಇಂಧನ ಬೆಲೆಗಳನ್ನು ತಗ್ಗಿಸಿ ಸಾರ್ವಜನಿಕರ ಆಕ್ರೋಶವನ್ನು ಶಮನಗೊಳಿಸಲು ಇದು ಅವರ ಅಂತಿಮ ಪ್ರಯತ್ನ. ಭಾರತದ ಮೇಲೆ ಒತ್ತಡ ಹೇರುವ, ಬೆದರಿಕೆ ಹಾಕುವ ಮತ್ತು ದಂಡ ವಿಧಿಸುವ ಆಯ್ಕೆಯನ್ನು ಅಮೆರಿಕ ತನ್ನ ಬಳಿಯೇ ಉಳಿಸಿಕೊಂಡಿದೆ. ಆದರೆ ಇದೇ ಸಮಯದಲ್ಲಿ ಅಮೆರಿಕವೇ ರಷ್ಯಾವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇರುವುದು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸುವಂತಿದೆ ಎಂದು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author