ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಿಂಕ್ ಫೋರ್ಸ್ ನಿಯೋಜನೆ, ಬಾಡಿ ಕ್ಯಾಮೆರಾಗಳ ಬಳಕೆ: ಸಿಜೆಪಿ ಪ್ರತಿಭಟನೆ ನಡುವೆ ದೆಹಲಿಯಲ್ಲಿ ಹೇಗಿದೆ ಬಿಗಿ ಭದ್ರತೆ?

CJP Protests: ಕಾಕ್ರೋಚ್‌ ಜನತಾ ಪಾರ್ಟಿಯು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಅಳವಡಿಸಿದ್ದಾರೆ. ಕೇಂದ್ರ ಅರೆಸೇನಾ ಪಡೆಗಳ ಜತೆಗೆ ಪೊಲೀಸರ ವಿಶೇಷ ಪಿಂಕ್ ಫೋರ್ಸ್‌ ನಿಯೋಜಿಸಲಾಗಿದೆ. ಸಮವಸ್ತ್ರಕ್ಕೆ ಅಳವಡಿಸುವಂತಹ ಬಾಡಿ ಕ್ಯಾಮೆರಾಗಳನ್ನು ಪೊಲೀಸ್ ಸಿಬ್ಬಂದಿಗೆ ಒದಗಿಸಲಾಗಿದೆ.

ದೆಹಲಿಯಲ್ಲಿ ಪಿಂಕ್ ಫೋರ್ಸ್ ನಿಯೋಜನೆ, ಬಾಡಿ ಕ್ಯಾಮೆರಾ ಅಳವಡಿಕೆ

ಸಿಜೆಪಿ ಪ್ರತಿಭಟನೆ ನಡುವೆ ದೆಹಲಿಯಲ್ಲಿ ಬಿಗಿ ಭದ್ರತೆ -

Priyanka P
Priyanka P Oct 10, 2026 5:49 PM

ನವದೆಹಲಿ, ಅ. 10: ಕಾಕ್ರೋಚ್‌ ಜನತಾ ಪಾರ್ಟಿಯು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ (CJP Protest) ತಡೆಯಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೇಂದ್ರ ಅರೆಸೇನಾ ಪಡೆಗಳ ಜತೆಗೆ ಪೊಲೀಸರ ವಿಶೇಷ ಪಿಂಕ್ ಫೋರ್ಸ್‌ (Pink Force) ಅನ್ನು ನಿಯೋಜಿಸಲಾಗಿದೆ. ಅಲ್ಲದೆ, ಕಡಿಮೆ ಬೆಳಕಿನಲ್ಲಿಯೂ ದೃಶ್ಯಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವಿರುವ ಸಮವಸ್ತ್ರಕ್ಕೆ ಅಳವಡಿಸುವಂತಹ ಬಾಡಿ ಕ್ಯಾಮೆರಾಗಳನ್ನು ಪೊಲೀಸ್ ಸಿಬ್ಬಂದಿಗೆ ಒದಗಿಸಲಾಗಿದೆ.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ನಡೆಸಿದ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಹಲ್ಲೆ ಮತ್ತು ದುರ್ವರ್ತನೆಗೆ ಒಳಗಾಗಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಈ ಘಟನೆಗಳ ಬೆನ್ನಲ್ಲೇ, ಕೆಲವೇ ದಿನಗಳ ನಂತರ ಪ್ರತಿಭಟನೆಯನ್ನು ನಿಯಂತ್ರಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಪಿಂಕ್ ಫೋರ್ಸ್‌ ನಿಯೋಜಿಸಲಾಗಿದೆ.

ಪ್ರತಿಭಟನೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರತಿಭಟನಾಕಾರರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಪೊಲೀಸರನ್ನು ಬಲವಂತವಾಗಿ ಪ್ರತಿಭಟನಾಕಾರರ ಗುಂಪಿನೊಳಗೆ ಕರೆದೊಯ್ದಿದ್ದಾರೆ. ಅವರ ಸಮವಸ್ತ್ರವನ್ನು ಹರಿದು, ಬ್ಯಾಡ್ಜ್‌ಗಳನ್ನು ಕಿತ್ತುಹಾಕಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಇಲ್ಲಿದೆ ಪೋಸ್ಟ್:





ಪಾರದರ್ಶಕತೆ ಕಾಪಾಡಲು ಮತ್ತು ಸಂಘರ್ಷವನ್ನು ತಪ್ಪಿಸಲು ಹಲವು ಪೊಲೀಸ್ ಸಿಬ್ಬಂದಿ ತಮ್ಮ ಸಮವಸ್ತ್ರಕ್ಕೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. “ಈ ಬಾಡಿ ಕ್ಯಾಮೆರಾಗಳು ನಮ್ಮನ್ನು ಮತ್ತು ಇತರರನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಯಾರೊಂದಿಗಾದರೂ ಪೊಲೀಸರು ಕೈಕೈ ಮಿಲಾಯಿಸಿದಂತಹ ಘಟನೆಗಳು ನಡೆದಾಗ ದೆಹಲಿ ಪೊಲೀಸರ ವಿರುದ್ಧ ಆರೋಪಗಳು ಕೇಳಿಬರುತ್ತವೆ. ಹೀಗಾಗಿ, ನಾವು ಯಾರಿಗಾದರೂ ಏನಾದರೂ ಮಾಡಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಈ ಕ್ಯಾಮೆರಾಗಳು ಸಾಬೀತುಪಡಿಸುತ್ತವೆ. ಪ್ರತಿಯೊಂದು ಘಟನೆಯನ್ನೂ ಇವು ದಾಖಲಿಸುತ್ತವೆ” ಎಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?

ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡದಿದ್ದರೂ, ಸಿಜೆಪಿ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಗಾಗಿ ಸೇರಿದ್ದ 400ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಇದರಲ್ಲಿ 30ರಿಂದ 40 ಅಪರಾಧಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣಗಳು ಬಂದ್, ರೈಲುಗಳು ರದ್ದು

ನವದೆಹಲಿಯ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್ ಮತ್ತು ಕಾಶ್ಮೀರಿ ಗೇಟ್ ಸೇರಿ 45 ದೆಹಲಿ ಮೆಟ್ರೋ ನಿಲ್ದಾಣಗಳು ಶನಿವಾರ (ಅ. 10) ಮುಚ್ಚಲ್ಪಟ್ಟಿವೆ. ಭದ್ರತಾ ಕಾರಣಗಳಿಂದಾಗಿ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗವನ್ನು ಮುಚ್ಚಲಾಗಿದೆ. ನವದೆಹಲಿ ಮೆಟ್ರೋ ನಿಲ್ದಾಣವನ್ನು ಹೊರತುಪಡಿಸಿ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್‌ ಸೌಲಭ್ಯ ಲಭ್ಯವಿರುತ್ತದೆ ಎಂದು ಡಿಎಂಆರ್‌ಸಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಇನ್ನು ಸಿಜೆಪಿಯ ಪ್ರತಿಭಟನೆ ಹಿನ್ನೆಲೆಯಲ್ಲಿ, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಸಂಬಂಧಿಸಿದ 250ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರೈಲ್ವೆ ಮಂಡಳಿ ರದ್ದುಗೊಳಿಸಿದೆ.