ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸುಪ್ರೀಂ ತಡೆಯ ಬಳಿಕವೂ ಮೊಂಡಾಟ ಬಿಡದ ಡೊನಾಲ್ಡ್‌ ಟ್ರಂಪ್‌; ಸುಂಕ ಶೇಕಡಾ 10ರಿಂದ ಶೇಕಡಾ 15ಕ್ಕೆ ಏರಿಕೆ

ಇಡೀ ಜಗತ್ತಿನ ಉತ್ಪನ್ನಗಳಿಗೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ್ದು, ಬಹುತೇಕ ಸುಂಕ ರದ್ದುಗೊಳಿಸಿದೆ. ಈ ಮಧ್ಯೆ ಟ್ರಂಪ್‌ ಜಾಗತಿಕ ಸುಂಕವನ್ನು ಶೇಕಡಾ 10ರಿಂದ ಶೇಕಡಾ 15ಕ್ಕೆ ಹೆಚ್ಚಿಸಿದ್ದಾರೆ.

ಸುಂಕ ಶೇಕಡಾ 15ಕ್ಕೆ ಏರಿಸಿದ ಡೊನಾಲ್ಡ್‌ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ). -

Ramesh Ballamoole
Ramesh Ballamoole Feb 21, 2026 9:56 PM

ವಾಷಿಂಗ್ಟನ್‌, ಫೆ. 21: ಇಡೀ ಜಗತ್ತಿನ ಉತ್ಪನ್ನಗಳಿಗೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ್ದು, ಬಹುತೇಕ ಸುಂಕ ರದ್ದುಗೊಳಿಸಿದೆ. ಈ ಮಧ್ಯೆ ಟ್ರಂಪ್‌ ಜಾಗತಿಕ ಸುಂಕವನ್ನು ಶೇಕಡಾ 10ರಿಂದ ಶೇಕಡಾ 15ಕ್ಕೆ ಹೆಚ್ಚಿಸಿದ್ದಾರೆ. ಫೆಬ್ರವರಿ 21ರಂದು ಟ್ರೂತ್ ಸೋಶಿಯಲ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಟ್ರಂಪ್, ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿದರು. ಆ ಮೂಲಕ ಜಾಗತಿಕ ಸುಂಕವನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು.

ಟ್ರಂಪ್‌ ವಿಧಿಸಿರುವ ಏಕಪಕ್ಷೀಯ ಸುಂಕ ಆದೇಶ ಅಕ್ರಮ ಎಂದು‌ ಅಮೆರಿಕ ಸುಪ್ರೀಂ ಕೋರ್ಟ್ ಘೋಷಿಸಿದ ಮರುದಿನವೇ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

"ಶುಕ್ರವಾರ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಹಾಸ್ಯಾಸ್ಪದ, ಕಳಪೆ ತೀರ್ಪು ನೀಡಿದೆ. ಅಮೇರಿಕಾದ ಅಧ್ಯಕ್ಷನಾಗಿ ನಾನು ತಕ್ಷಣವೇ ಜಾರಿಗೆ ಬರುವಂತೆ ಜಾಗತಿಕವಾಗಿ ವಿಧಿಸಲಾಗುವ ಶೇಕಡಾ 10ರಷ್ಟು ಸುಂಕವನ್ನು ಶೇಕಡಾ 15ಕ್ಕೆ ಹೆಚ್ಚಿಸುತ್ತೇನೆ. ಮುಂದಿನ ದಿನಗಳಲ್ಲಿ ಹೊಸ ಮತ್ತು ಕಾನೂನುಬದ್ಧವಾಗಿ ಅನುಮತಿಸಲಾದ ಸುಂಕಗಳನ್ನು ನಿರ್ಧರಿಸುತ್ತೇವೆ. ಇದು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುವ ನಮ್ಮ ಅಸಾಧಾರಣ ಬದ್ಧತೆಯನ್ನು ಪ್ರದರ್ಶಿಸುತ್ತದೆʼʼ ಎಂದು ಬರೆದುಕೊಂಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌:



ಕೋರ್ಟ್‌ ಹೇಳಿದ್ದೇನು?

ಟ್ರಂಪ್‌ ಅವರಿಗೆ ಕ್ಯಾಬಿನೆಟ್‌ ಒಪ್ಪಿಗೆ ಇಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕವನ್ನು ವಿಧಿಸುವ ಅಧಿಕಾರವಿಲ್ಲ. ಅವರ ಸುಂಕ ನೀತಿ ಕಾನೂನು ಬಾಹಿರ ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ 6-3 ಅಂತರದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸಿದ ಕಾನೂನನ್ನು ಬಳಸಿಕೊಂಡು ವ್ಯಾಪಕ ಸುಂಕಗಳನ್ನು ವಿಧಿಸುವಾಗ ಟ್ರಂಪ್‌ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ

ಸುಪ್ರೀಂ ಕೋರ್ಟ್‌ ತೀರ್ಪು ಬೆನ್ನಲ್ಲೇ ಶುಕ್ರವಾರ ರಾತ್ರಿ ಸೆಡ್ಡು ಹೊಡೆದಿದ್ದ ಟ್ರಂಪ್‌ ಸೆಕ್ಷನ್‌ 122ರ ಅಡಿ ಶೇಕಡಾ 10ರಷ್ಟು ಹೆಚ್ಚುವರಿ ಸುಂಕ ಘೋಷಿಸಿದ್ದರು. ತೀರ್ಪಿನ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಅವರು, ʼʼಸುಪ್ರೀಂ ಈಗ ತೆರಿಗೆ ವಿಧಿಸಲು ನನಗೆ ಮತ್ತಷ್ಟು ಅವಕಾಶ ನೀಡಿದಂತಾಗಿದೆ. ನನ್ನ ಬಳಿ ಪರ್ಯಾಯ ಆಯ್ಕೆಗಳಿವೆ. ಎಲ್ಲ ರಾಷ್ಟ್ರಗಳ ಮೇಲಿನ ತೆರಿಗೆ ಮುಂದುವರಿಯಲಿದೆ. ಜತೆಗೆ ಶೇಕಡಾ 10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇನೆʼʼ ಎಂದು ಗುಡುಗಿದ್ದರು. ಜತೆಗೆ ʼʼಭಾರತ-ಅಮೆರಿಕ ಒಪ್ಪಂದದಲ್ಲಿ ಏನೂ ಬದಲಾಗದು. ಪ್ರಸ್ತುತ ಇರುವ ಶೇಕಡಾ 18ರಷ್ಟು ತೆರಿಗೆ ಮುಂದುವರಿಯಲಿದೆʼʼ ಎಂದಿದ್ದರು.

ಇದೀಗ ಟ್ರಂಪ್‌ ಮತ್ತೆ ಸುಂಕವನ್ನು ಶೇಕಡಾ 10ರಿಂದ 15ಕ್ಕೆ ಏರಿದ್ದಾರೆ. ಸದ್ಯ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.

image

ತೀರ್ಪು ನಾಚಿಕೆಗೇಡು. ಇದು ನ್ಯಾಯಾಧೀಶರು ವಿದೇಶಿ ಶಕ್ತಿಗಳ ಒತ್ತಾಯಕ್ಕೆ ಮಣಿದು ಹೊರಡಿಸಿರುವ ಆದೇಶ.

ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.