ವಾಷಿಂಗ್ಟನ್: ಇರಾನ್ ವಿರುದ್ಧ ಯುದ್ಧ ಆರಂಭಿಸುವಂತೆ (Israel Iran War) ಅಮೆರಿಕವನ್ನು ಒತ್ತಾಯಿಸಿದವರು ತಮ್ಮ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pentagon Chief Pete Hegseth) ಎಂದು ಹೇಳುವ ಮೂಲಕ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ. ಟ್ರಂಪ್ ಮಾಧ್ಯಮಗಳಿಗೆ ತಿಳಿಸುತ್ತಾ, ಟೆಹ್ರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ ತಮ್ಮ ತಂಡದಲ್ಲಿನ ಮೊದಲ ವ್ಯಕ್ತಿ ಹೆಗ್ಸೆತ್ ಎಂದು ಹೇಳಿದರು. ನಾನು ಪೀಟ್ ಹೇಗೆತ್ಸ್, ಜನರಲ್ ಕೇನ್ ಸೇರಿದಂತೆ ಹಲವರಿಗೆ ಕರೆ ಮಾಡಿ ಅವರಿಗೆ ಮಧ್ಯಪ್ರಾಚ್ಯದಲ್ಲಿ ಒಂದು ಸಮಸ್ಯೆಯಿದೆ, ಈ ಪ್ರದೇಶದಲ್ಲಿ ಇರಾನ್ ಎಂಬ ದೇಶವಿದ್ದು, ಇದು ಸುಮಾರು 47 ವರ್ಷಗಳಿಂದ ಭಯೋತ್ಪದನೆ ಪ್ರಾಯೋಜಕರಾಗಿದ್ದು, ಪರಮಾಣು ಅಸ್ತ್ರವನ್ನು ಹೊಂದುವಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತೊಡೆದುಹಾಕಲು ನಾನು ಅಲ್ಲಿ ಹೋಗಿ ಅದನ್ನು ನಿವಾರಿಸಬಹುದು ಎಂದು ಹೇಳಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕದನವಿರಾಮ ಕುರಿತು ಮಾತನಾಡಿದ ಟ್ರಂಪ್ ಅಮರಿಕಾ ಹಾಗೂ ಇರಾನ್ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ. ಕಳೆದ ರಾತ್ರಿ ಹಾಗೂ ಅದಕ್ಕೂ ಮೊದಲು ಸಹ ಉತ್ತಮ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಟ್ರಂಪ್, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಸಂಪೂರ್ಣ ಪರಿಹಾರದ ಕುರಿತು ಕಳೆದ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ಉತ್ತಮ ಮತ್ತು ಉತ್ಪಾದಕ ಮಾತುಕತೆಗಳನ್ನು ನಡೆಸಿವೆ ಎಂದು ಹೇಳಿಕೊಂಡಿದ್ದರು.
ಮಾತುಕತೆಗಳು ವಾರವಿಡೀ ಮುಂದುವರಿಯಲಿವೆ ಮತ್ತು ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯದ ವಿರುದ್ಧದ ಯಾವುದೇ ಮತ್ತು ಎಲ್ಲಾ ಮಿಲಿಟರಿ ದಾಳಿಗಳನ್ನು ಮುಂದೂಡಲು ಅವರು ಯುದ್ಧ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಅಂತೆಯೇ ನಡೆಯುತ್ತಿರುವ ಸಭೆಗಳು ಮತ್ತು ಚರ್ಚೆಗಳಿಗೆ ಒಳಪಟ್ಟು ದಾಳಿಗಳನ್ನು ಕೆಲವು 5 ದಿನಗಳವರೆಗೆ ಮುಂದೂಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರು ಟ್ರಂಪ್ ಹೇಳಿಕೆಯನ್ನು ಅಲ್ಲಗಳೆದಿದ್ದು, ಅಮೆರಿಕದೊಂದಿಗಿನ ಮಾತುಕತೆಗಳು ಈಗಾಗಲೇ ಅಂತ್ಯಗೊಂಡಿವೆ. ಇದು ನಮಗೆ ಅತ್ಯಂತ ಕಹಿ ಅನುಭವ ಮತ್ತು ವಿಶ್ವಾಸಘಾತುಕತನದ ಸಂಕೇತವಾಗಿದೆ. ಈ ಸಂಘರ್ಷವು ಸದ್ಯಕ್ಕೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.