ಇಸ್ಲಾಮಾಬಾದ್, ಜ. 5: ನವೆಂಬರ್‌ನಲ್ಲಿ ಪಾಕಿಸ್ತಾನದ ನಂಕಾನಾ ಸಾಹಿಬ್‌ಗೆ ತೀರ್ಥಯಾತ್ರೆಗೆ ಹೋಗಿದ್ದ ಪಂಜಾಬ್ ಮಹಿಳೆ ಸರಬ್ಜೀತ್ ಕೌರ್ (Sarabjit Kaur) ಭಾರತಕ್ಕೆ ಮರಳಿರಲಿಲ್ಲ. ಇವರ ಬಗ್ಗೆ ವ್ಯಾಪಕ ಊಹಾಪೋಹಗಳು ಹರಿದಾಡಿದ್ದವು. ಬಳಿಕ ಪಾಕಿಸ್ತಾನಕ್ಕೆ (Pakistan) ಹೋಗಿದ್ದ ಕೌರ್, ಪ್ರಿಯಕರನನ್ನು ಮದುವೆಯಾಗಿ ಇಸ್ಲಾಂಗೆ (Islam) ಮತಾಂತರಗೊಂಡಿರುವುದು ತಿಳಿದು ಬಂದಿತ್ತು. ಇದೀಗ ಆಕೆಯನ್ನು ಪಾಕಿಸ್ತಾನಿ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಿದ್ದಾರೆ.
ನವೆಂಬರ್‌ನಲ್ಲಿ ಗುರುನಾನಕ್ ದೇವ್ ಅವರ ಜನ್ಮ ದಿನಾಚರಣೆಗಾಗಿ ಸರಬ್ಜೀತ್ ಕೌರ್ ಸಿಖ್ ಜಾಥಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ನಂತರ ಜಾಥಾದಿಂದ ನಾಪತ್ತೆಯಾದ ಅವರು ಶೇಖುಪುರ ಜಿಲ್ಲೆಯ ಪಾಕಿಸ್ತಾನಿ ವ್ಯಕ್ತಿ ನಾಸಿರ್ ಹುಸೇನ್‌ನನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡರು.
ಕೈಕೋಳ, ಕಾಲುಗಳನ್ನು ಕಟ್ಟಿ ಅಮೆರಿಕದಿಂದ ಗಡಿಪಾರು: ಭಯಾನಕ ಅನುಭವ ಬಿಚ್ಚಿಟ್ಟ ಪಂಜಾಬ್ ಮಹಿಳೆ
ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಸರಬ್ಜಿತ್ ಮತ್ತು ಆಕೆಯ ಪ್ರಿಯಕರ ನಾಸಿರ್‌ನನ್ನು ಬಂಧಿಸಿದೆ. ಪಾಕಿಸ್ತಾನ ಸರ್ಕಾರವು ಈಗ ಸರಬ್ಜಿತ್ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸದ್ಯದಲ್ಲೇ ಅಟ್ಟಾರಿ-ವಾಘಾ ಚೆಕ್ ಪೋಸ್ಟ್‌ನಲ್ಲಿ ಆಕೆಯನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.
ನವೆಂಬರ್‌ನಲ್ಲಿ ನಾಪತ್ತೆಯಾದ ಕೆಲವು ದಿನಗಳ ನಂತರ ಸರಬ್ಜೀತ್ ಕೌರ್ ಕಳೆದ ವಾರ ಪಾಕಿಸ್ತಾನದ ಶೇಖುಪುರ ಜಿಲ್ಲೆಯಲ್ಲಿ ಲಾಹೋರ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 4ರಂದು ಪಾಕಿಸ್ತಾನಕ್ಕೆ ಬಂದ ಒಂದು ದಿನದ ನಂತರ, ಲಾಹೋರ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ಕೌರ್ ವಿವಾಹವಾದರು. ಅವರು ಇಸ್ಲಾಂಗೆ ಮತಾಂತರಗೊಂಡಿದ್ದಾಗಿ ಘೋಷಿಸಿದರು ಎಂದು ನವೆಂಬರ್ 16ರಂದು ಪಾಕಿಸ್ತಾನ ಅಧಿಕಾರಿಯೊಬ್ಬರು ತಿಳಿಸಿದ್ದರು. ದಂಪತಿ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದರು.
ನವೆಂಬರ್ 18ರಂದು ದಂಪತಿ ಲಾಹೋರ್ ಹೈಕೋರ್ಟ್ ಸಂಪರ್ಕಿಸಿ, ಪೊಲೀಸರು ತಮ್ಮ ಮದುವೆಯನ್ನು ಮುರಿಯುವಂತೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಶೇಖುಪುರದ ಫಾರೂಕಾಬಾದ್‌ನಲ್ಲಿರುವ ಮನೆಯ ಮೇಲೆ ಅಕ್ರಮ ದಾಳಿ ನಡೆಸಲಾಗಿದೆ ಎಂದು ದೂರು ನೀಡಿದ್ದರು. ಇದರ ನಂತರ, ಲಾಹೋರ್ ಹೈಕೋರ್ಟ್ ನ್ಯಾಯಮೂರ್ತಿ ಫಾರೂಕ್ ಹೈದರ್, ದಂಪತಿಗಳನ್ನು ಏಕಾಂಗಿಯಾಗಿ ಬಿಡುವಂತೆ ಪೊಲೀಸರಿಗೆ ಆದೇಶಿಸಿದರು.
ಅರ್ಜಿಯಲ್ಲಿ ಕೌರ್ ತನ್ನ ಪತಿ ಪಾಕಿಸ್ತಾನಿ ಪ್ರಜೆಯಾಗಿದ್ದು, ಪಾಕಿಸ್ತಾನಿ ಪೌರತ್ವ ಪಡೆಯಲು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿರುವುದಾಗಿ ತಿಳಿಸಿದ್ದಾರೆ. ಸರಬ್ಜಿತ್ ಕೌರ್ ತನ್ನ ಹೆಸರನ್ನು ನೂರ್ ಹುಸೇನ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳ ನಿಕಾಹ್‍ನ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಮತ್ತು ಪಾಕಿಸ್ತಾನಿ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವರು ಸ್ವಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವುದಾಗಿ ಹೇಳಿರುವುದು ಕಂಡು ಬಂದಿತ್ತು.
ವಿಡಿಯೊದಲ್ಲಿ ಸರಬ್ಜಿತ್ ಕೌರ್ ತಾನು ಸ್ವಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ನಾನು ನಾಸಿರ್‌ನನ್ನು ಪ್ರೀತಿಸುತ್ತೇನೆ ಮತ್ತು ಕಳೆದ ಒಂಭತ್ತು ವರ್ಷಗಳಿಂದ ಅವನನ್ನು ಬಲ್ಲೆ. ನಾನು ಪ್ರಸ್ತುತ ವಿಚ್ಛೇದನ ಪಡೆದಿದ್ದೇನೆ ಮತ್ತು ಸ್ವಇಚ್ಛೆಯಿಂದ ಅವನನ್ನು ಮದುವೆಯಾಗುತ್ತಿದ್ದೇನೆ ಎಂದು ಅವರು ಹೇಳಿದ್ದರು.