ದುಬೈ: ಶುಕ್ರವಾರ ಮುಂಜಾನೆ ದುಬೈ (Dubai) ಮತ್ತು ಅಬುಧಾಬಿಯಂತಹ (Abu Dhabi) ಪ್ರಮುಖ ಪ್ರದೇಶಗಳು ಸೇರಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಜನರನ್ನು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಯಿತು. ಹೀಗಾಗಿ ಜನಜೀವನ ಸ್ತಬ್ಧಗೊಂಡಿತು.
ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಅಪರೂಪಕ್ಕೆ ಮಾತ್ರ ಈ ರೀತಿ ಮಳೆ ಸುರಿಯುತ್ತದೆ. ಕಳೆದ ವರ್ಷ, 2024ರಲ್ಲಿ ಇದೇ ರೀತಿಯ ತೀವ್ರವಾದ ಮಳೆಯಿಂದಾಗಿ ದುಬೈ ಮತ್ತು ಅಬುಧಾಬಿಯ ಕೆಲವು ಭಾಗಗಳು ಜಲಾವೃತವಾಗಿದ್ದವು.
ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ, 51ಕ್ಕೂ ಅಧಿಕ ಮಂದಿ ಸಾವು
ಏನಾಯಿತು?
ಗುರುವಾರ ತಡರಾತ್ರಿ ದುಬೈನಲ್ಲಿ ಭಾರಿ ಮಳೆಯಾಗಿದ್ದು, ರಾಜಧಾನಿ ಅಬುಧಾಬಿಯಲ್ಲಿ ರಾತ್ರಿಯಿಡೀ ಬಿರುಗಾಳಿ ಬೀಸಿತು. ಶುಕ್ರವಾರ ಬೆಳಗ್ಗೆಯ ಹೊತ್ತಿಗೆ, ಹಲವಾರು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ವರದಿಯಾಗಿದೆ. ಉತ್ತರ ಎಮಿರೇಟ್ಸ್‌ನಲ್ಲಿ, ಭಾರಿ ನೀರು ನಿಂತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಹೀಗಾಗಿ ಅಂತಹ ಪ್ರದೇಶಗಳಿಗೆ ಹೋಗದಂತೆ ವಾಹನ ಸವಾರರಿಗೆ ಅಧಿಕಾರಿಗಳು ಸೂಚಿಸಿದರು.
ಪ್ರವಾಹದ ವಿಡಿಯೋ
ದುಬೈ ಸರ್ಕಾರವು ಎಲ್ಲಾ ಸರ್ಕಾರಿ ನೌಕರರನ್ನು ದೂರದಿಂದಲೇ ಕೆಲಸ ಮಾಡಲು ನಿರ್ದೇಶಿಸಿದರೆ, ಖಾಸಗಿ ಕಂಪನಿಗಳು ಕೂಡ ಇದನ್ನು ಅನುಸರಿಸುವಂತೆ ಸಲಹೆ ನೀಡಲಾಯಿತು. ಹೊರಗೆ ಹೋಗುವ ಅಗತ್ಯವಿಲ್ಲದಿದ್ದರೆ ಮನೆಯಲ್ಲೇ ಉಳಿಯುವಂತೆ ಅಬುಧಾಬಿಯ ಜನರಲ್ಲಿ ಅಧಿಕಾರಿಗಳು ಕೇಳಿಕೊಂಡರು. ಮುನ್ನೆಚ್ಚರಿಕೆಯಾಗಿ ಸಾರ್ವಜನಿಕ ಉದ್ಯಾನವನಗಳು ಮತ್ತು ಪ್ರವಾಸಿ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
ಯುಎಇ ಮುಳುಗಲು ಕಾರಣವೇನು?
ಗಲ್ಫ್‌ನಲ್ಲಿ ಈ ರೀತಿಯ ಹವಾಮಾನ ವೈಪರೀತ್ಯಗಳು ಸಾಮಾನ್ಯವಾಗಿವೆ. ದುಬೈನಂತಹ ಮರುಭೂಮಿಯ ನಗರಗಳಲ್ಲಿ ಇಂತಹ ಸಣ್ಣ ಪ್ರಮಾಣದ ಭಾರಿ ಮಳೆಯು ಹೆಚ್ಚು ತೊಂದರೆ ಉಂಟುಮಾಡುತ್ತದೆ. ಈ ಪ್ರದೇಶದ ಮೂಲಸೌಕರ್ಯವನ್ನು ಶುಷ್ಕ ಪರಿಸ್ಥಿತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ ಹಠಾತ್ ಮಳೆಯಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದಾಗ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ.
ಏಪ್ರಿಲ್ 2024ರ ಪ್ರವಾಹವು ನಗರ ಯೋಜನೆಯಲ್ಲಿನ ದುರ್ಬಲತೆಗಳನ್ನು ಈಗಾಗಲೇ ಬಹಿರಂಗಪಡಿಸಿದ್ದವು. ಶುಕ್ರವಾರದ ಮಳೆಯು ಸೌಮ್ಯವಾಗಿದ್ದರೂ, ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಎಷ್ಟು ಬೇಗನೆ ಪ್ರವಾಹಕ್ಕೆ ಒಳಗಾಗಬಹುದು ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿತು.
ದುಬೈ ಪುರಸಭೆಯು ತನ್ನ 24/7 ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಸಜ್ಜಾಗಿ ಇರಿಸಲಾಗಿದ್ದು, ಮಳೆಗೆ ಸಂಬಂಧಿತ ಘಟನೆಗಳನ್ನು ಎದುರಿಸಲು ವಿಶೇಷ ತಂಡಗಳು ಮತ್ತು ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ. ವಾರಾಂತ್ಯದಲ್ಲಿ ಅನಿವಾರ್ಯವಿಲ್ಲದಿದ್ದರೆ, ಮನೆಯಿಂದ ಹೊರಗೆ ಬಾರದಂತೆ ನಿವಾಸಿಗಳಲ್ಲಿ ಮನವಿ ಮಾಡಲಾಗಿದೆ.
Heavy Rain: ಭಾರಿ ಮಳೆಗೆ ತತ್ತರಿಸಿದ ಬಿಹಾರ; ತೀವ್ರ ಪ್ರವಾಹ, ಅಲ್ಲಲ್ಲಿ ರಸ್ತೆ ಕುಸಿತ, ಆಸ್ಪತ್ರೆಗಳು ಜಲಾವೃತ
ವಿಮಾನಗಳ ಹಾರಾಟದ ಮೇಲೂ ಪರಿಣಾಮ
ಇಂಡಿಗೋ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಂಭವನೀಯ ವಿಳಂಬ ಮತ್ತು ಅಡೆತಡೆಗಳ ಬಗ್ಗೆ ಎಚ್ಚರಿಕೆ ನೀಡಿವೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಇಂಡಿಗೋ, ಗುಡುಗು ಸಹಿತ ಹವಾಮಾನ ಬದಲಾವಣೆಗಳು ಯುಎಇಯಾದ್ಯಂತ ವಿಮಾನ ಕಾರ್ಯಾಚರಣೆಗಳ ಮೇಲೆ ಮಧ್ಯಂತರವಾಗಿ ಪರಿಣಾಮ ಬೀರಬಹುದು ಎಂದು ಹೇಳಿದೆ.
ಕ್ರಿಸ್‌ಮಸ್‌ಗೆ ಮನೆಗೆ ತೆರಳುವ ಕೆಲವು ಪ್ರಯಾಣಿಕರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವಲ್ಲಿ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಆದರೆ, ವಿಮಾ ಕಂಪನಿಗಳು ಪ್ರವಾಹ ಹಾನಿಯಿಂದ ವಾಹನಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ನಿವಾಸಿಗಳಿಗೆ ಸಲಹೆ ನೀಡುವ ಎಚ್ಚರಿಕೆಗಳನ್ನು ಕಳುಹಿಸಲಾಗಿದೆ.