ಲಂಡನ್, ಜೂ.3: ಬ್ರಿಟನ್‌ನಲ್ಲಿ ಹಲವು ವರ್ಷಗಳಿಂದ ವಿವಾದ ಮತ್ತು ಚರ್ಚೆಗೆ ಕಾರಣವಾಗಿರುವ "ಗ್ರೂಮಿಂಗ್ ಗ್ಯಾಂಗ್" (Grooming Gang) ಪ್ರಕರಣ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಬ್ರಿಟಿಷ್ ಸಂಸದ ರುಪರ್ಟ್ ಲೋವ್(British MP Rupert Lowe) ಅವರು ಸಂಸತ್ತಿನಲ್ಲಿ(Parliament) ಬಾಲಕಿಯರ ಮೇಲಿನ ಸಂಘಟಿತ ಲೈಂಗಿಕ ಶೋಷಣೆಗೆ (sexual abuse) ಸಂಬಂಧಿಸಿದ ಸಂತ್ರಸ್ತೆಯರ ಸಾಕ್ಷ್ಯಗಳನ್ನು ಓದಿದ್ದು, ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಂಸತ್ತಿನಲ್ಲಿ ಮಾತನಾಡಿದ ಲೋವ್, “ಸ್ವತಂತ್ರ ತನಿಖೆಯ ವೇಳೆ ನಾವು ಕೇಳಿದ ಸಾಕ್ಷ್ಯಗಳನ್ನು ಜಗತ್ತು ಕೇಳಬೇಕು. ಈ ಸಂತ್ರಸ್ತೆಯರು ಅನುಭವಿಸಿದ ನೋವು ಮತ್ತು ಅನ್ಯಾಯವನ್ನು ಇನ್ನಷ್ಟು ನಿರ್ಲಕ್ಷ್ಯ ಮಾಡಲಾಗದು. ಈಗಾದರೂ ಸರ್ಕಾರ ಹಾಗೂ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಸಂತ್ರಸ್ತೆಯರ ಹೇಳಿಕೆಗಳ ಪ್ರಕಾರ, ಅಪ್ರಾಪ್ತ ಬಾಲಕಿಯರನ್ನು ಸ್ನೇಹ, ಉಡುಗೊರೆ ಮತ್ತು ಸುಳ್ಳು ಭರವಸೆಗಳ ಮೂಲಕ ಸಂಪರ್ಕಿಸಿ ಬಳಿಕ ಲೈಂಗಿಕ ಶೋಷಣೆಗೆ ಒಳಪಡಿಸಲಾಗುತ್ತಿತ್ತು. ಕೆಲವರನ್ನು ಮಾದಕ ವಸ್ತುಗಳಿಗೆ ಬಲಿಯಾಗಿಸಿ, ಬೆದರಿಕೆ ಮತ್ತು ಹಿಂಸೆಯ ಮೂಲಕ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪಗಳಿವೆ.
ಒಬ್ಬ ಮಹಿಳೆ ತನ್ನ ಸಾಕ್ಷ್ಯದಲ್ಲಿ, “13ನೇ ವಯಸ್ಸಿನಲ್ಲಿ ನನ್ನ ಮೇಲಿನ ದೌರ್ಜನ್ಯ ಆರಂಭವಾಯಿತು. ಮೂರು ವರ್ಷಗಳ ಅವಧಿಯಲ್ಲಿ ಸುಮಾರು 600ರಿಂದ 700 ಮಂದಿವರೆಗೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು” ಎಂದು ಹೇಳಿದ್ದಾಳೆ. ಮತ್ತೊಬ್ಬ ಸಂತ್ರಸ್ತೆ, “ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಪಾರ್ಟಿಗಳು ದೊಡ್ಡದಾಗುತ್ತಿದ್ದು, ಹೆಚ್ಚಿನ ಜನರು ಮತ್ತು ಹೆಚ್ಚಿನ ಬಾಲಕಿಯರು ಭಾಗಿಯಾಗುತ್ತಿದ್ದರು. ಹಿಂಸೆ ಮತ್ತು ದೌರ್ಜನ್ಯವೂ ಹೆಚ್ಚಾಗುತ್ತಿತ್ತು” ಎಂದು ವಿವರಿಸಿದ್ದಾಳೆ.
ಕೆಲವು ಸಾಕ್ಷ್ಯಗಳಲ್ಲಿ ಜನಾಂಗೀಯ ಹಾಗೂ ಧಾರ್ಮಿಕ ಅವಹೇಳನಗಳ ಆರೋಪಗಳೂ ಕೇಳಿಬಂದಿವೆ. ಬಿಳಿಯ ವರ್ಣದ ಹಾಗೂ ಕ್ರೈಸ್ತ ಬಾಲಕಿಯರನ್ನು ಗುರಿಯಾಗಿಸಿ ಅವಮಾನಕಾರಿ ಮಾತುಗಳನ್ನು ಬಳಸಲಾಗುತ್ತಿತ್ತು ಎಂದು ಕೆಲವು ಸಂತ್ರಸ್ತೆಯರು ಆರೋಪಿಸಿದ್ದಾರೆ.
ಹೊರ್ಮುಜ್ ಬಿಕ್ಕಟ್ಟಿನ ನಡುವೆ ರಸಗೊಬ್ಬರ ಪೂರೈಕೆಗೆ ಭಾರತದ ಹೊಸ ಸಮುದ್ರ ಮಾರ್ಗ ಯೋಜನೆ; ಏನಿದು ಕೇಂದ್ರದ ಕಾರ್ಯತಂತ್ರ?
2025ರಲ್ಲಿ ರುಪರ್ಟ್ ಲೋವ್ ನೇತೃತ್ವದಲ್ಲಿ ನಡೆದ ಖಾಸಗಿ ತನಿಖೆಯು ಬ್ರಿಟನ್‌ನ ಕನಿಷ್ಠ 85 ಪ್ರದೇಶಗಳಲ್ಲಿ ಸಂಘಟಿತ ಬಾಲಕಿಯರ ಲೈಂಗಿಕ ಶೋಷಣೆಯ ಮಾದರಿಗಳನ್ನು ಗುರುತಿಸಿದೆ ಎಂದು ವರದಿಯಾಗಿದೆ. ತನಿಖೆಯು ಕೆಲವು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ವೈಫಲ್ಯಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.
ಬ್ರಿಟನ್‌ನಲ್ಲಿ 2000ರ ದಶಕದಲ್ಲಿಯೇ ಈ ಸಮಸ್ಯೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ವ್ಯಾಪಕ ಗಮನ ಸೆಳೆದಿತ್ತು. 2010ರಲ್ಲಿ ದಕ್ಷಿಣ ಯಾರ್ಕ್‌ಶೈರ್‌ನ ರೋಥರ್‌ಹ್ಯಾಮ್‌ನಲ್ಲಿ 12ರಿಂದ 16 ವರ್ಷದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಲವರಿಗೆ ಶಿಕ್ಷೆಯಾಗಿತ್ತು. ನಂತರ ನಡೆದ ತನಿಖೆಗಳು ಸಾವಿರಾರು ಬಾಲಕಿಯರು ವರ್ಷಗಳ ಕಾಲ ಶೋಷಣೆಗೆ ಒಳಗಾಗಿದ್ದರೆಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದವು. ಮತ್ತೀಗ ಈ ಪ್ರಕರಣಗಳು ಮುನ್ನಲೆಗೆ ಬಂದಿದ್ದು, ಬ್ರಿಟನ್‌ನಲ್ಲಿ ಮಕ್ಕಳ ರಕ್ಷಣೆ, ಕಾನೂನು ಜಾರಿ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿತನದ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.