ವಾಷಿಂಗ್ಟನ್, ಆ. 30: ಏಕತೆ ಮತ್ತು ವೈವಿಧ್ಯತೆ ಭಾರತದ ಡಿಎನ್‌ಎ ಎಂದು ಅಮೆರಿಕದ ನ್ಯೂಯಾರ್ಕ್‌ನ (New York) ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಭಾರತದ ವೈವಿಧ್ಯತೆಯಲ್ಲಿ ಏಕತೆ, ತತ್ವ, ಜಾಗತಿಕ ರಾಷ್ಟ್ರಗಳು ಹಾಗೂ ಅನಿವಾಸಿ ಭಾರತೀಯರ ಜವಾಬ್ದಾರಿಗಳು ಇತ್ಯಾದಿ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಆ್ಯಂಡ್ ಡೈಲಾಗ್ ಆಯೋಜಿಸಿದ್ದ ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ (ಜಾಗತಿಕ ಏಕತಾ ಆಚರಣೆ) ಎಂಬ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಮಾತನಾಡಿದರು. ಈ ವೇಳೆ ಅವರು ಭಾರತ ಮತ್ತು ಅಮೆರಿಕ ನಡುವೆ ಹೋಲಿಕೆ ಮಾಡುತ್ತ, ಎರಡೂ ದೇಶಗಳ ಡಿಎನ್‌ಎನಲ್ಲೇ (DNA) ಏಕತೆ ಮತ್ತು ವೈವಿಧ್ಯತೆ ಇದೆ ಎಂದು ಹೇಳಿದರು.
“ನಾವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಎಂದು ಹೇಳಿದಾಗ, ಒಂದು ಪದವನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆ. ಅದುವೇ ಬಹುತ್ವ. ಅದೇ ರೀತಿ ನಾವು ಭಾರತ ಎಂದು ಹೇಳಿದಾಗ, ಮತ್ತೊಂದು ನುಡಿಗಟ್ಟನ್ನು ಚರ್ಚಿಸಲಾಗುತ್ತದೆ. ಅದೇನೆಂದರೆ ವೈವಿಧ್ಯತೆಯಲ್ಲಿ ಏಕತೆ. ಭಾರತದ ಮಟ್ಟಿಗೆ, ಈ ಏಕತೆ ಮತ್ತು ಈ ವೈವಿಧ್ಯತೆ, ಎರಡೂ ಅದರ ಡಿಎನ್‌ಎಯಲ್ಲೇ ಇವೆ” ಎಂದು ಅವರು ಹೇಳಿದರು.
ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗರಲಾರ: ಮೋಹನ್ ಭಾಗವತ್
“ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ, ಪ್ರತಿಯೊಂದು ರಾಷ್ಟ್ರಕ್ಕೂ ಈಡೇರಿಸಬೇಕಾದ ಒಂದು ಉದ್ದೇಶ ಇರುತ್ತದೆ. ಭಾರತಕ್ಕೆ ನೀಡಲಾಗಿರುವ ಆ ಉದ್ದೇಶವೇನು? ಈ ವೈವಿಧ್ಯತೆಯಲ್ಲಿನ ಏಕತೆಯನ್ನು ತಾನು ಅರಿತುಕೊಳ್ಳುವುದು ಮತ್ತು ಕಾಲಕಾಲಕ್ಕೆ ಇಡೀ ಜಗತ್ತಿಗೆ ಅದನ್ನು ಮನವರಿಕೆ ಮಾಡಿಕೊಡುವುದೇ ಭಾರತದ ಮುಖ್ಯ ಉದ್ದೇಶ. ನಾವೆಲ್ಲರೂ ಒಂದೇ. ನಮ್ಮಲ್ಲಿರುವ ವೈವಿಧ್ಯತೆಯು ಆ ಏಕತೆಗೆ ಆಭರಣದಂತೆ ಅಂದವನ್ನು ಹೆಚ್ಚಿಸಿದೆ” ಎಂದು ಅವರು ಹೇಳಿದರು.
ವೈವಿಧ್ಯತೆಯನ್ನು ಕೇವಲ ಗುರುತಿಸಿದರೆ ಸಾಲದು, ಬದಲಿಗೆ ಅದನ್ನು ಆಚರಿಸಬೇಕು, ಗೌರವಿಸಬೇಕು ಮತ್ತು ಸ್ವೀಕರಿಸಬೇಕು ಎಂದು ಮೋಹನ್ ಭಾಗವತ್ ಒತ್ತಿ ಹೇಳಿದರು. ಭಾಷೆಗಳು, ಧರ್ಮಗಳು ಮತ್ತು ಮನುಷ್ಯನ ಮೂಲಭೂತ ಅಗತ್ಯಗಳು ಕೂಡ ಬೇರೆಯಾಗಿರಬಹುದಾದರೂ, ನಮ್ಮಲ್ಲಿ ಒಂದು ಅಂತರ್ಗತ ಏಕತೆ ಸದಾ ಉಳಿದಿರುತ್ತದೆ ಎಂದು ಜನರ ನಡುವಿನ ವ್ಯತ್ಯಾಸಗಳ ಕುರಿತು ಮೋಹನ್ ಭಾಗವತ್ ತಿಳಿಸಿದ್ದಾರೆ.
ಅಮೆರಿಕ ಮತ್ತು ಇತರ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಲಸಿಗರು ತಾವು ವಾಸಿಸುವ ದೇಶದ ಬಗ್ಗೆ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಹೇಳಿದರು.