ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಂಪ್ ಹತ್ಯೆ ಸಂಚು ಪ್ರಕರಣ; ಪಾಕಿಸ್ತಾನಿ ಪ್ರಜೆಗೆ 27 ವರ್ಷ ಜೈಲು ಶಿಕ್ಷೆ, ಇರಾನ್ ನಂಟು ಬಯಲಾಗಿದ್ದು ಹೇಗೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬನಿಗೆ ಅಮೆರಿಕದ ನ್ಯಾಯಾಲಯವು 27 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಿದೆ. ಇರಾನ್ ಬೆಂಬಲಿತ ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಆಸಿಫ್ ಮರ್ಚೆಂಟ್ ಎಂಬಾತನಿಗೆ ನ್ಯೂಯಾರ್ಕ್‌ನ ಫೆಡರಲ್ ಕೋರ್ಟ್ ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

Donald Trump

ವಾಷಿಂಗ್ಟನ್, ನ.18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೇರಿದಂತೆ ಅಮೆರಿಕದ ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಇರಾನ್ ಬೆಂಬಲದೊಂದಿಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ (Asif Merchant) ಎಂಬಾತನಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 27 ವರ್ಷಗಳಿಗೂ ಹೆಚ್ಚು ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಕುರಿತು ಅಮೆರಿಕದ ನ್ಯಾಯಾಂಗ ಇಲಾಖೆ (US Department of Justice) ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಅಮೆರಿಕದ ಪ್ರಾಸಿಕ್ಯೂಟರ್‌ಗಳ ಮಾಹಿತಿಯ ಪ್ರಕಾರ, 46 ವರ್ಷದ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ ಇರಾನ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್ ಮತ್ತು ಇತರ ಅಮೆರಿಕನ್ ಅಧಿಕಾರಿಗಳನ್ನು ಹತ್ಯೆ ಮಾಡಲು 'ಮರ್ಡರ್-ಫಾರ್-ಹೈರ್' ಮೂಲಕ ಹತ್ಯೆ ಸಂಚು ರೂಪಿಸಿದ್ದನು. ಈ ಕೃತ್ಯಕ್ಕಾಗಿ ನ್ಯೂಯಾರ್ಕ್‌ನಲ್ಲಿ ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲು ಆತ ಯತ್ನಿಸಿದ್ದನು ಎಂದು ತನಿಖಾ ಸಂಸ್ಥೆಗಳು ಆರೋಪಿಸಿದ್ದವು.

ರಾಜಸ್ಥಾನ ರೈಲ್ವೆ ಹಳಿ ಸ್ಫೋಟ: ಪಾಕಿಸ್ತಾನದ ನಂಟು ಹೊಂದಿದ ಮಹಿಳೆ ಸೇರಿ ಪಂಜಾಬ್‌ನ ಇಬ್ಬರ ಬಂಧನ

ಎಫ್‌ಬಿಐ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರೋಪಿ

ಆಸಿಫ್ ಮರ್ಚೆಂಟ್ ಹಂತಕರನ್ನು ನೇಮಿಸಿಕೊಳ್ಳಲು ಮುಂದಾದಾಗ, ಆತ ಸಂಪರ್ಕಿಸಿದ್ದ ವ್ಯಕ್ತಿಗಳು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ (FBI) ನ ರಹಸ್ಯ ಏಜೆಂಟರಾಗಿದ್ದರು. ಈ ಮೂಲಕ ಹತ್ಯೆ ಸಂಚನ್ನು ವಿಫಲಗೊಳಿಸಿದ ಎಫ್‌ಬಿಐ ಅಧಿಕಾರಿಗಳು, ಮರ್ಚೆಂಟ್ ಅಮೆರಿಕದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಆತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಒತ್ತಡದಿಂದ ಈ ಕೃತ್ಯಕ್ಕೆ ಮುಂದಾಗಿದ್ದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದನು ಎಂದು ವರದಿಯಾಗಿದೆ.

2026ರ ಮಾರ್ಚ್‌ನಲ್ಲಿ ನಡೆದ ವಿಚಾರಣೆ ವೇಳೆ ಮರ್ಚೆಂಟ್ ಅಪರಾಧ ಸಾಬೀತಾಗಿತ್ತು. ವಿಚಾರಣೆ ಸಂದರ್ಭದಲ್ಲಿ "ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ನನ್ನ ಕುಟುಂಬಕ್ಕೆ IRGC ಯಿಂದ ಜೀವ ಬೆದರಿಕೆ ಇತ್ತು. ಕುಟುಂಬವನ್ನು ರಕ್ಷಿಸಲು ನಾನು ಒತ್ತಡಕ್ಕೆ ಮಣಿದು ಈ ಕೆಲಸಕ್ಕೆ ಒಪ್ಪಿಕೊಂಡೆ" ಎಂದು ಮರ್ಚೆಂಟ್ ವಾದಿಸಿದ್ದನು. ಆದರೆ, ಆತನ ಲ್ಯಾಪ್‌ಟಾಪ್ ಮತ್ತು ಫೋನ್‌ನಲ್ಲಿ ಟ್ರಂಪ್ ರ್ಯಾಲಿಗಳ ಸ್ಥಳದ ಗೂಗಲ್ ಮ್ಯಾಪ್ ಹುಡುಕಾಟ ಹಾಗೂ ಅಮೆರಿಕ ವಿರೋಧಿ ಪೋಸ್ಟ್‌ಗಳು ಪತ್ತೆಯಾಗಿದ್ದನ್ನು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯದ ಮುಂದಿಟ್ಟರು. "ನಮ್ಮ ನಾಯಕರ ವಿರುದ್ಧದ ವಿದೇಶಿ ಭಯೋತ್ಪಾದಕ ಸಂಚುಗಳನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ" ಎಂದು ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ತೀರ್ಪಿನ ಬಳಿಕ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಮಿಷವೊಡ್ಡಿ ಭಾರತೀಯ ಯುವಕರ ಬ್ರೈನ್‌ವಾಶ್: ಎನ್‌ಐಎ ಬಲೆಗೆ ಬಿದ್ದ ಪಾಕಿಸ್ತಾನ ಉಗ್ರ ಶಹಜಾದ್ ಭಟ್ಟಿ ಜಾಲ

ಸಂಚು ಕಾರ್ಯಗತಗೊಳಿಸಲು ಮಹಿಳೆಯರ ಬಳಕೆ

ಈ ಹತ್ಯೆ ಸಂಚನ್ನು ಕಾರ್ಯಗತಗೊಳಿಸಲು ಆಸಿಫ್ ಮರ್ಚೆಂಟ್ ಅಮೆರಿಕದ ಸ್ಥಳೀಯ ಮಹಿಳೆಯರನ್ನು ಬಳಸಿಕೊಂಡು ರಾಜಕೀಯ ರ‍್ಯಾಲಿಗಳ ವೇಳೆ ಕೃತಕ ಪ್ರತಿಭಟನೆಗಳನ್ನು ಸೃಷ್ಟಿಸಲು ಹಾಗೂ ಭದ್ರತಾ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆಯಲು ಯೋಜಿಸಿದ್ದನು ಎಂದು ತನಿಖಾ ದಾಖಲೆಗಳು ಬಹಿರಂಗಪಡಿಸಿವೆ. ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವೆ ದಶಕಗಳಿಂದ ನಡೆಯುತ್ತಿರುವ ಪರಮಾಣು ವಿವಾದ, ಆರ್ಥಿಕ ನಿರ್ಬಂಧಗಳು ಮತ್ತು ಮಧ್ಯಪ್ರಾಚ್ಯದ ಸೇನಾ ಸಂಘರ್ಷಗಳ ಮುಂದುವರಿದ ಭಾಗವಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ (IRGC) ಅಮೆರಿಕದ ನೆಲದಲ್ಲೇ ಇಂತಹ ರಹಸ್ಯ ಕಾರ್ಯಾಚರಣೆಗಳಿಗೆ ಸಂಚು ರೂಪಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿದೆ.