ಇನ್ಸ್ಟಾಗ್ರಾಮ್ನಲ್ಲಿ ಆಮಿಷವೊಡ್ಡಿ ಭಾರತೀಯ ಯುವಕರ ಬ್ರೈನ್ವಾಶ್: ಎನ್ಐಎ ಬಲೆಗೆ ಬಿದ್ದ ಪಾಕಿಸ್ತಾನ ಉಗ್ರ ಶಹಜಾದ್ ಭಟ್ಟಿ ಜಾಲ
Shahzad Bhatti: ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಯುವಕರಿಗೆ ಹಣದ ಆಮಿಷವೊಡ್ಡಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದ ಪಾಕಿಸ್ತಾನ ಮೂಲದ ಕುಖ್ಯಾತ ಗ್ಯಾಂಗ್ಸ್ಟರ್ ಶಹಜಾದ್ ಭಟ್ಟಿ ಜಾಲದ ವಿರುದ್ಧ ರಾಷ್ಟ್ರೀಯ ತನಿಖಾ ದಳ ಬಲೆ ಬೀಸಿದೆ. ಶಹಜಾದ್ ಭಟ್ಟಿ ನೆಟ್ವರ್ಕ್ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನಡುವಿನ ನೇರ ನಂಟಿನ ಕುರಿತು ಎನ್ಐಎ ಎಫ್ಐಆರ್ ದಾಖಲಿಸಿದ್ದು, ದೇಶಾದ್ಯಂತ ಹರಡಿರುವ ಈ ಜಾಲದ ಸ್ಲೀಪರ್ ಸೆಲ್ಗಳನ್ನು ಕಿತ್ತೊಗೆಯಲು ಕಾರ್ಯಾಚರಣೆ ತೀವ್ರಗೊಳಿಸಿದೆ.
ಶಹಜಾದ್ ಭಟ್ಟಿ (ಸಂಗ್ರಹ ಚಿತ್ರ) -
ನವದೆಹಲಿ, ನ. 12: ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಯುವಕರನ್ನು ಮೂಲಭೂತವಾದದತ್ತ ಸೆಳೆದು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮೂಲದ ಕುಖ್ಯಾತ ಗ್ಯಾಂಗ್ಸ್ಟರ್ ಶಹಜಾದ್ ಭಟ್ಟಿ (Shahzad Bhatti) ಜಾಲದ ವಿರುದ್ಧ ರಾಷ್ಟ್ರೀಯ ತನಿಖಾ ದಳ (NIA) ಸಮರ ಸಾರಿದೆ. ಶಹಜಾದ್ ಭಟ್ಟಿ ನೆಟ್ವರ್ಕ್ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ನಡುವಿನ ನೇರ ನಂಟಿನ ಕುರಿತು ಎನ್ಐಎ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಕೇಂದ್ರ ಸರ್ಕಾರವು ಶಹಜಾದ್ ಭಟ್ಟಿ ನೆಟ್ವರ್ಕ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ ಬೆನ್ನಲ್ಲೇ, ಈ ಅಂತಾರಾಷ್ಟ್ರೀಯ ಜಾಲದ ಬೇರುಗಳನ್ನು ಕಿತ್ತೊಗೆಯಲು ಎನ್ಐಎ ಅಖಾಡಕ್ಕಿಳಿದಿದೆ.
ಎನ್ಐಎ ದಾಖಲಿಸಿರುವ ಎಫ್ಐಆರ್ನಲ್ಲಿ ಪಾಕಿಸ್ತಾನ ಮೂಲದ ಗ್ಯಾಂಗ್ಸ್ಟರ್ ಶಹಜಾದ್ ಭಟ್ಟಿ ಸೇರಿ ಒಟ್ಟು ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ಐಎಸ್ಐ ಏಜೆಂಟ್ಗಳಾದ ಎಂ.ಡಿ. ಹಮದ್ ಬರ್ಕತಿ, ಅಬಿದ್ ಜಾಟ್, ಮೇಜರ್ ಹಮೀದ್, ಮೇಜರ್ ಇಕ್ಬಾಲ್ ಹಾಗೂ ಮೇಜರ್ ಅನ್ವರ್ ಅವರ ಹೆಸರೂ ಸೇರಿವೆ. ಈ ವರ್ಷದ ಏಪ್ರಿಲ್ನಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದ್ದ ಉತ್ತರ ಪ್ರದೇಶದ ತುಷಾರ್ ಚೌಹಾಣ್ ಅಲಿಯಾಸ್ ಹಿಜ್ಬುಲ್ಲಾ ಅಲಿ ಖಾನ್ ಮತ್ತು ದೆಹಲಿಯ ಸಮೀರ್ ಎಂಬ ಇಬ್ಬರು ಆರೋಪಿಗಳನ್ನೂ ಎನ್ಐಎ ಪ್ರಕರಣದಲ್ಲಿ ಹೆಸರಿಸಿದೆ. ಇವರು ಪಾಕಿಸ್ತಾನದ ಹ್ಯಾಂಡ್ಲರ್ಗಳೊಂದಿಗೆ ನೇರ ಸಂಪರ್ಕದಲ್ಲಿದ್ದು, ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಹಣದ ಆಮಿಷ; ಸೋಶಿಯಲ್ ಮೀಡಿಯಾ ಮೂಲಕ ಟ್ರ್ಯಾಪ್
ತನಿಖಾ ಸಂಸ್ಥೆಗಳ ಪ್ರಕಾರ, ಶಹಜಾದ್ ಭಟ್ಟಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ಫಾಲೋವರ್ಗಳನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೋಗಿನಲ್ಲಿ ಭಾರತದ ಯುವಕರನ್ನು ಸಂಪರ್ಕಿಸುತ್ತಿದ್ದ ಎಂದು ತಿಳಿದುಬಂದಿದೆ. ಐಎಸ್ಐ ಸೂಚನೆಯಂತೆ ಶಹಜಾದ್ ಭಟ್ಟಿ ಮತ್ತು ಪಾಕಿಸ್ತಾನದ ಕೆಲವು ಮೂಲಭೂತವಾದಿ ಯುಟ್ಯೂಬರ್ಗಳು ಭಾರತೀಯ ಯುವಕರಿಗೆ ಹಣದ ಆಮಿಷವೊಡ್ಡಿ ದೇಶದ ಆಂತರಿಕ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಪ್ರಚೋದಿಸುತ್ತಿದ್ದರು. ಈ ಜಾಲಕ್ಕೆ ಸೇರಿದ ಯುವಕರಿಗೆ ರೈಲ್ವೆ ನಿಲ್ದಾಣಗಳು, ಏರ್ಪೋರ್ಟ್ ಹಾಗೂ ಪ್ರಮುಖ ರಸ್ತೆಗಳ ಹೊರಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಅದರ ನೇರ ದೃಶ್ಯಾವಳಿಗಳನ್ನು ಪಾಕಿಸ್ತಾನಕ್ಕೆ ರವಾನಿಸುವಂತೆ ಸೂಚಿಸಲಾಗುತ್ತಿತ್ತು. ಅಲ್ಲದೆ, ಆನ್ಲೈನ್ ಮೂಲಕವೇ ಪೆಟ್ರೋಲ್ ಬಾಂಬ್ ಮತ್ತು ಐಇಡಿ ತಯಾರಿಸುವ ತರಬೇತಿಯನ್ನೂ ನೀಡಲಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಅಂಬಾಲಾ ಬಾಂಬ್ ಸ್ಫೋಟಕ್ಕೆ ಗಾಜಿಯಾಬಾದ್ ವ್ಯಕ್ತಿ ನೇಮಕ
ಜನವರಿ 10ರಂದು ಅಂಬಾಲಾದ ಬಲದೇವ್ ನಗರ ಪೊಲೀಸ್ ಠಾಣೆ ಹೊರಗೆ ನಡೆದ ಬಾಂಬ್ ಸ್ಫೋಟದ ಕುರಿತು ತನಿಖೆ ನಡೆಸಿದ್ದ ಎನ್ಐಎಗೆ ಭಟ್ಟಿ ಆನ್ಲೈನ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಹೇಗೆ ಯುವಕರನ್ನು ಸೆಳೆಯುತ್ತಿದ್ದ ಎಂಬುದು ಗೊತ್ತಾಗಿದೆ. ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಮತ್ತು ಸಿಗ್ನಲ್ ಮೂಲಕ ಗಾಜಿಯಾಬಾದ್ನ 25 ವರ್ಷದ ಯುವಕನನ್ನು ಭಟ್ಟಿ ಸಂಪರ್ಕಿಸಿದ್ದ. ನಂತರ ಸ್ಫೋಟಕಗಳನ್ನು ಮತ್ತು ಎಲ್ಪಿಜಿ ಸಿಲಿಂಡರ್ಗಳನ್ನು ಹೊತ್ತ ಮಾರುತಿ 800 ಕಾರನ್ನು ಫಿರೋಜ್ಪುರದಿಂದ ಅಂಬಾಲಕ್ಕೆ ಸಾಗಿಸಲು ಆತನಿಗೆ ಕೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ಭಾರತದಲ್ಲಿ ನಡೆಸಿದ ಪ್ರಮುಖ ದಾಳಿಗಳು
- ಪಂಜಾಬ್ನ ಜಲಂಧರ್ನಲ್ಲಿ ನಡೆದ ಗ್ರೆನೇಡ್ ದಾಳಿ.
- ಹರಿಯಾಣದ ಅಂಬಾಲಾ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದ ಬಾಂಬ್ ಸ್ಫೋಟ.
- ಬಿಎಸ್ಎಫ್ ಪ್ರಧಾನ ಕಚೇರಿಗಳ ಬಳಿ ನಡೆದ ಲಘು ತೀವ್ರತೆಯ ಸ್ಫೋಟಗಳು.
- ದೇಶದ ವಿವಿಧೆಡೆ ನಡೆದ ಉದ್ದೇಶಿತ ಕೊಲೆಗಳು ಮತ್ತು ಪೆಟ್ರೋಲ್ ಬಾಂಬ್ ದಾಳಿಗಳು
ಮುಂದುವರಿದ ಭಯೋತ್ಪಾದಕರ ಬೇಟೆ: ಶಹಜಾದ್ ಭಟ್ಟಿ ಜತೆ ಸಂಪರ್ಕ ಹೊಂದಿದ್ದ ನಾಲ್ವರ ಬಂಧನ
ಅಲ್ಲದೆ ಆಗಸ್ಟ್ ತಿಂಗಳಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳು ಈ ಜಾಲದ ವಿರುದ್ಧ ದೇಶದ 14 ರಾಜ್ಯಗಳಲ್ಲಿ ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿ 200ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, 253ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದವು. ಇವರಿಂದ ಭಾರಿ ಪ್ರಮಾಣದ ಐಇಡಿ, ಗ್ರೆನೇಡ್ಗಳು ಮತ್ತು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.