ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೆನೆಜುವೆಲಾಗೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ರಷ್ಯಾ ಜೊತೆ ಚಕಮಕಿಗೆ ಸಜ್ಜು?

ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್‌ ಅನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದೆ. ವೆನೆಜುವೆಲಾದ ತೈಲ ರಫ್ತಿನ ಮೇಲೆ ಅಮೆರಿಕದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ತೈಲ ಖರೀದಿಸಲು ಈ ಹಡಗು ವೆನೆಜುವೆಲಾಗೆ ತೆರಳುತ್ತಿತ್ತು

ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ರಷ್ಯಾ ಜೊತೆ ಚಕಮಕಿಗೆ ಸಜ್ಜು?

-

ಹರೀಶ್‌ ಕೇರ
ಹರೀಶ್‌ ಕೇರ Jan 8, 2026 7:18 AM

ವಾಷಿಂಗ್ಟನ್, ಜ.8: ವೆನೆಜುವೆಲಾದಮೇಲೆ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷರನ್ನು ಸೆರೆಹಿಡಿದ ಬೆನ್ನಲ್ಲೇ ಅಮೆರಿಕ (US forces) ಇದೀಗ ವೆನೆಜುವೆಲಾಗೆ (Venezuela) ಸೇರಿದ ರಷ್ಯಾದ (Russian) ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಅಟ್ಲಾಂಟಿಕ್ ಸಾಗರದಲ್ಲಿ ಸುಮಾರು 2 ವಾರಗಳ ಕಾಲ ಯುಎಸ್ ಕೋಸ್ಟ್ ಗಾರ್ಡ್ ಹಡಗನ್ನು ಹಿಂಬಾಲಿಸಿತ್ತು. ವೆನೆಜುವೆಲಾದ ತೈಲ ರಫ್ತಿನ ಮೇಲೆ ಅಮೆರಿಕದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ತೈಲ ಖರೀದಿಸಲು ಈ ಹಡಗು ವೆನೆಜುವೆಲಾಗೆ ತೆರಳುತ್ತಿತ್ತು.

ಈ ಕಾರ್ಯಾಚರಣೆಯ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಏಕೆಂದರೆ, ರಷ್ಯಾದ ಮಿಲಿಟರಿ ಹಡಗು ಮತ್ತು ಜಲಾಂತರ್ಗಾಮಿ ನೌಕೆ ಕೂಡ ಆ ಪ್ರದೇಶದಲ್ಲಿತ್ತು. ಆದರೆ, ರಷ್ಯಾ ಮತ್ತು ಅಮೆರಿಕ ದೇಶಗಳ ನಡುವೆ ಯಾವುದೇ ಮಿಲಿಟರಿ ಘರ್ಷಣೆ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ರಷ್ಯಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಅಮೆರಿಕ ವಶಪಡಿಸಿಕೊಂಡ ಹಡಗನ್ನು ಈ ಹಿಂದೆ ಬೆಲ್ಲಾ-1 ಎಂದು ಹೆಸರಿಸಲಾಗಿತ್ತು. ನಂತರ ಅದು ತನ್ನ ಹೆಸರನ್ನು ಮರಿನೆರಾ ಎಂದು ಬದಲಾಯಿಸಿಕೊಂಡಿತು. ಇದನ್ನು ರಷ್ಯಾದ ಧ್ವಜದ ಅಡಿಯಲ್ಲಿ ನೋಂದಾಯಿಸಲಾಗಿದೆ. ಈ ಹಿಂದೆ, ಈ ಹಡಗು ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ದಿಗ್ಬಂಧನವನ್ನು ತಪ್ಪಿಸಿತ್ತು. ಯುಎಸ್ ಕೋಸ್ಟ್ ಗಾರ್ಡ್ ಅದನ್ನು ತಡೆದು ತನಿಖೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.



ಐಸ್ಲ್ಯಾಂಡ್ ಬಳಿಯ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಹಡಗನ್ನು ಅಂತಿಮವಾಗಿ ತಡೆಹಿಡಿಯಲಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಅದು ಐಸ್ಲ್ಯಾಂಡ್ ಮತ್ತು ಬ್ರಿಟನ್ ನಡುವೆ ಪ್ರಯಾಣಿಸುತ್ತಿತ್ತು. ಸಂಪೂರ್ಣ ಕಾರ್ಯಾಚರಣೆಯನ್ನು ಯುಎಸ್ ಕೋಸ್ಟ್ ಗಾರ್ಡ್ ಮತ್ತು ಸೈನ್ಯ ಜಂಟಿಯಾಗಿ ನಡೆಸಿತು. ಯುಎಸ್ ಸೈನ್ಯದ ಯುರೋಪಿಯನ್ ಕಮಾಂಡ್ (EUCOM) ಸಾಮಾಜಿಕ ಮಾಧ್ಯಮದಲ್ಲಿ ಆ ತೈಲ ಟ್ಯಾಂಕರ್ ಹಡಗು ಯುಎಸ್ ನಿರ್ಬಂಧಗಳನ್ನು ಉಲ್ಲಂಘಿಸುತ್ತಿದೆ. ಇದೇ ಕಾರಣಕ್ಕೆ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಘೋಷಿಸಿತು.

ವಶಪಡಿಸಿಕೊಂಡ ಹಡಗನ್ನು ಮುಂದೆ ಎಲ್ಲಿಗೆ ಕೊಂಡೊಯ್ಯಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ, ಮೂಲಗಳು ಅದನ್ನು ಬ್ರಿಟಿಷ್ ಜಲಪ್ರದೇಶಕ್ಕೆ ಕಳುಹಿಸಬಹುದು ಎಂದು ಸೂಚಿಸುತ್ತವೆ. ಇದರ ಜೊತೆಗೆ ವೆನೆಜುವೆಲಾಗೆ ಸಂಬಂಧಿಸಿದ ಮತ್ತೊಂದು ಟ್ಯಾಂಕರ್ ಎಂ ಸೋಫಿಯಾವನ್ನು ಸಹ ಅಮೆರಿಕ ವಶಕ್ಕೆ ಪಡೆದುಕೊಂಡಿದೆ. ಈ ಹಡಗು ಪನಾಮ ಧ್ವಜದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ನಿರ್ಬಂಧಗಳ ಹೊರತಾಗಿಯೂ ವೆನೆಜುವೆಲಾದಿಂದ ಚೀನಾಕ್ಕೆ ತೈಲವನ್ನು ಸಾಗಿಸುತ್ತಿತ್ತು.

ವೆನೆಜುವೆಲಾದ ಅಕ್ರಮ ಮತ್ತು ನಿರ್ಬಂಧಿತ ತೈಲ ಸಾಗಣೆಗಳ ವಿರುದ್ಧ ಅಮೆರಿಕದ ಕ್ರಮವು ವಿಶ್ವಾದ್ಯಂತ ಮುಂದುವರಿಯುತ್ತದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ. ಅಂತಹ ಹಡಗುಗಳು ಎಲ್ಲಿದ್ದರೂ ಅಮೆರಿಕ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಅಮೆರಿಕ ಇತ್ತೀಚೆಗೆ ಪ್ರಮುಖ ಕ್ರಮ ಕೈಗೊಂಡ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.