ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರಿ ಮುಖಭಂಗ; ಅಮೆರಿಕ ಅಧಿಕಾರಿಗಳ ಭೇಟಿ ನಿರಾಕರಿಸಿದ ಇರಾನ್: ಮಧ್ಯಸ್ಥಿಕ್ಕೆ ನಾಟಕಕ್ಕೆ ತೆರೆ

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು ಸ್ಥಗಿತಗೊಂಡಿದ್ದು, ಪಾಕಿಸ್ತಾನದ ನೇತೃತ್ವದ ಮಧ್ಯಸ್ಥಿಕೆ ವಿಫಲವಾಗಿದೆ. ಇರಾನ್ ಅಮೆರಿಕದ ಬೇಡಿಕೆಗಳನ್ನು ತಿರಸ್ಕರಿಸಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸಲು ನಿರಾಕರಿಸಿದೆ. ಪರ್ಯಾಯ ವೇದಿಕೆಗಳಾಗಿ ಕತಾರ್ ಮತ್ತು ಇಸ್ತಾಂಬುಲ್ ಪರಿಗಣನೆಯಲ್ಲಿದೆ. ಇದೇ ವೇಳೆ ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿರುವುದು ಪಶ್ಚಿಮ ಏಷ್ಯಾದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಖಮೇನಿ ಮತ್ತು ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್‌, ಏ. 4: ಅಮೆರಿಕ (America) ಮತ್ತು ಇರಾನ್ (Iran) ನಡುವೆ ಕದನ ವಿರಾಮ ಏರ್ಪಡಿಸಲು ಪ್ರಯತ್ನ ನಡೆಯುತ್ತಿದೆ. ಪ್ರಾದೇಶಿಕ ಮಧ್ಯಸ್ಥಿಕೆ ಪ್ರಯತ್ನಗಳು ಸದ್ಯಕ್ಕೆ ಸ್ಥಗಿತಗೊಂಡಿವೆ ಎಂದು ಸಂಧಾನಕಾರರು ತಿಳಿಸಿರುವುದಾಗಿ 'ವಾಲ್ ಸ್ಟ್ರೀಟ್ ಜರ್ನಲ್ʼ (Wall Street Journal) ವರದಿ ಮಾಡಿದೆ.

ಪಾಕಿಸ್ತಾನದ ನೇತೃತ್ವದಲ್ಲಿ ನಡೆಯುತ್ತಿದ್ದ ಈ ರಾಜತಾಂತ್ರಿಕ ಪ್ರಯತ್ನಗಳು ಯಾವುದೇ ಸಕಾರಾತ್ಮಕ ಫಲಿತಾಂಶ ನೀಡುವಲ್ಲಿ ವಿಫಲವಾಗಿವೆ. ಮುಂಬರುವ ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಾತುಕತೆಗೆ ತನ್ನ ಅಧಿಕಾರಿಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಇರಾನ್ ಅಧಿಕೃತವಾಗಿ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ. ಅಮೆರಿಕದ ಬೇಡಿಕೆಗಳು ತನಗೆ ಒಪ್ಪುವಂತಹದ್ದಲ್ಲ ಎಂದು ಇರಾನ್ ಸ್ಪಷ್ಟಪಡಿಸಿದ್ದು, ಪ್ರಸ್ತುತ ಮಾತುಕತೆಯ ಚೌಕಟ್ಟನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ಪರ್ಯಾಯ ವೇದಿಕೆಗಳ ಹುಡುಕಾಟ

ಪಾಕಿಸ್ತಾನದ ಸಂಧಾನ ಪ್ರಯತ್ನಗಳು ಹಳಿತಪ್ಪಿರುವ ಹಿನ್ನೆಲೆಯಲ್ಲಿ, ಟರ್ಕಿ ಮತ್ತು ಈಜಿಪ್ಟ್ ಈಗ ಪರ್ಯಾಯ ಪರಿಹಾರ ಮಾರ್ಗದತ್ತ ಗಮನ ಹರಿಸಿವೆ. ಸ್ಥಗಿತಗೊಂಡಿರುವ ಕದನ ವಿರಾಮ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಲು ಮಾತುಕತೆಯ ವೇದಿಕೆಯನ್ನು ಇಸ್ಲಾಮಾಬಾದ್‌ನಿಂದ ಬದಲಾಯಿಸಲು ಈ ದೇಶಗಳು ಆಲೋಚಿಸುತ್ತಿವೆ. ಈ ನಿಟ್ಟಿನಲ್ಲಿ ಕತಾರ್ ಮತ್ತು ಇಸ್ತಾಂಬುಲ್ ನಗರಗಳು ಮಾತುಕತೆ ಆಯೋಜಿಸಲು ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮ್ಮಿವೆ.

ಇಸ್ರೇಲ್ ಮೇಲೆ ಇರಾನ್-ಹಿಜ್ಬುಲ್ಲಾ ಜತೆಗೂಡಿ 3ನೇ ಜಂಟಿ ಕಾರ್ಯಾಚರಣೆ ಘೋಷಿಸಿದ ಹೌತಿ ಪಡೆ

ಹೊರ್ಮುಜ್ ಜಲಸಂಧಿ ಮತ್ತು ಟ್ರಂಪ್ ಎಚ್ಚರಿಕೆ

ಇರಾನ್ ತನ್ನ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕೆಂದು ಅಮೆರಿಕ ಷರತ್ತು ವಿಧಿಸಿದೆ ಎಂದು 'ಆಕ್ಸಿಯೋಸ್' ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಈ ಕುರಿತು ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, "ಹೊರ್ಮುಜ್ ಜಲಸಂಧಿಯು ಮುಕ್ತ ಮತ್ತು ಸುರಕ್ಷಿತವಾಗುವವರೆಗೆ ನಾವು ಇರಾನ್ ಮೇಲೆ ವಿನಾಶಕಾರಿ ದಾಳಿಯನ್ನು ಮುಂದುವರಿಸುತ್ತೇವೆ. ಅಲ್ಲಿಯವರೆಗೆ ಇರಾನ್ ಅನ್ನು ಶಿಲಾಯುಗದ ಸ್ಥಿತಿಗೆ ತಳ್ಳುವಷ್ಟು ಬಾಂಬ್ ದಾಳಿ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಹೇಳಿಕೆಗಳನ್ನು "ಸುಳ್ಳು ಮತ್ತು ಆಧಾರರಹಿತ" ಎಂದು ತಳ್ಳಿ ಹಾಕಿದ್ದಾರೆ.

ಈ ಬೆಳವಣಿಗೆಗಳಿಂದಾಗಿ ಪಶ್ಚಿಮ ಏಷ್ಯಾದಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ಹಂತದ ಮಾತುಕತೆಗಳು ಅನಿಶ್ಚಿತತೆಯಲ್ಲಿ ಸಿಲುಕಿವೆ.