ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೇಲ್ ಮೇಲೆ ಇರಾನ್-ಹಿಜ್ಬುಲ್ಲಾ ಜತೆಗೂಡಿ 3ನೇ ಜಂಟಿ ಕಾರ್ಯಾಚರಣೆ ಘೋಷಿಸಿದ ಹೌತಿ ಪಡೆ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದೆ. ಇದರ ಸೂಚನೆ ಎಂಬಂತೆ ಇರಾನ್, ಹಿಜ್ಬುಲ್ಲಾ ಹಾಗೂ ಯೆಮನ್‌ನ ಹೌತಿ ಪಡೆಗಳು ಸೇರಿ ಇಸ್ರೇಲ್ ಮೇಲೆ ಮೂರನೇ ಜಂಟಿ ದಾಳಿ ನಡೆಸಿರುವುದಾಗಿ ಘೋಷಿಸಿವೆ. ಕ್ಷಿಪಣಿ ದಾಳಿಗಳನ್ನು ಇಸ್ರೇಲ್ ತಡೆಯಲು ಪ್ರಯತ್ನಿಸಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಇಸ್ರೇಲ್ ಮೇಲೆ ಇರಾನ್-ಹಿಜ್ಬುಲ್ಲಾ-ಹೌತಿ ದಾಳಿ

ಯೆಮನ್ ಸಶಸ್ತ್ರ ಪಡೆಗಳ ವಕ್ತಾರ ಯಾಹ್ಯಾ ಸಾರೀ -

Profile
Sushmitha Jain Apr 1, 2026 10:07 PM

ಟೆಹರಾನ್‌, ಏ. 1: ಪಶ್ಚಿಮ ಏಷ್ಯಾದಲ್ಲಿ (West Asia) ಯುದ್ಧದ ಭೀತಿ ಮತ್ತಷ್ಟು ಉಲ್ಬಣಗೊಂಡಿದ್ದು, ಇರಾನ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗಳೊಂದಿಗೆ ಸೇರಿ ಇಸ್ರೇಲ್ ಮೇಲೆ ಮೂರನೇ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ಯೆಮನ್‌ನ ಹೌತಿ ಸಶಸ್ತ್ರ ಪಡೆಗಳು (Yemen's Houthi armed forces) ಘೋಷಿಸಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯ ಸಂಘರ್ಷವು ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿರುವುದನ್ನು ಸೂಚಿಸಿದೆ.

ಯೆಮನ್ ಸಶಸ್ತ್ರ ಪಡೆಗಳ (Yemeni Armed Forces) ವಕ್ತಾರ ಯಾಹ್ಯಾ ಸಾರೀ (Yahya Saree) ಮಾಹಿತಿ ನೀಡಿ, "ಆಕ್ರಮಿತ ಪ್ಯಾಲೆಸ್ತೀನ್‌ನ ದಕ್ಷಿಣ ಭಾಗದಲ್ಲಿರುವ ಇಸ್ರೇಲಿ ಶತ್ರುಗಳ ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆʼʼ ಎಂದು ತಿಳಿಸಿದ್ದಾರೆ.

ಹೌತಿ ಪಡೆಗಳಿಂದ ಇಸ್ರೇಲ್‌ ಮೇಲೆ ದಾಳಿ:



ಈ ಕಾರ್ಯಾಚರಣೆಯಲ್ಲಿ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದ್ದು, ಇರಾನ್ ಮತ್ತು ಹಿಜ್ಬುಲ್ಲಾದ ಸಹಕಾರದೊಂದಿಗೆ ದಾಳಿ ಯಶಸ್ವಿಯಾಗಿದೆ ಎಂದು ಹೌತಿ ಪಡೆಗಳು ಪ್ರತಿಪಾದಿಸಿವೆ. ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆಯ ಪ್ರಕಾರ, ಈ ದಾಳಿಯು ಪ್ರತಿರೋಧದ ಸಂಘಟನೆಗಳ ಬೆಂಬಲಕ್ಕಾಗಿ ನಡೆಸಲಾದ ಸಂಘಟಿತ ಪ್ರಯತ್ನವಾಗಿದೆ.

ಯುದ್ದ ನಿಲ್ಲಿಸಿ ಶಾಂತಿ ನೆಲೆಸಲು ಸಹಕರಿಸಿ ಎಂದು ಕ್ರಿಶ್ಚಿಯನ್ ಬಾಂಧವರಿಂದ ವಿಶೇಷ ಪ್ರಾರ್ಥನೆ: ರೆವೆರೆಂಡ್ ಪ್ರವೀಣ್

ಮತ್ತೊಂದೆಡೆ, ಇಸ್ರೇಲ್ ರಕ್ಷಣಾ ಪಡೆಗಳು (IDF) ಬುಧವಾರ ಇರಾನ್‌ನಿಂದ ಹಾರಿಬಂದ ಕ್ಷಿಪಣಿಗಳನ್ನು ಗುರುತಿಸಿರುವುದಾಗಿ ಖಚಿತಪಡಿಸಿವೆ. ಈ ಬೆದರಿಕೆಯನ್ನು ಎದುರಿಸಲು ಇಸ್ರೇಲ್‌ನ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಆಕಾಶದಲ್ಲಿಯೇ ಅವುಗಳನ್ನು ತಡೆಯಲು ಪ್ರಯತ್ನಿಸಿವೆ. ಇಸ್ರೇಲ್‌ನ ಹೋಮ್ ಫ್ರಂಟ್ ಕಮಾಂಡ್ ಇಲಾಖೆಯು ಸಂಭವನೀಯ ಹಾನಿ ತಪ್ಪಿಸಲು ಪ್ರಮುಖ ನಗರಗಳ ನಿವಾಸಿಗಳಿಗೆ ತುರ್ತು ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಿ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದೆ.

ಇದು ಹೌತಿಗಳು ನಡೆಸುತ್ತಿರುವ ಮೂರನೇ ಪ್ರಮುಖ ಜಂಟಿ ಕಾರ್ಯಾಚರಣೆ. ಕಳೆದ ಭಾನುವಾರವಷ್ಟೇ (ಮಾರ್ಚ್‌ 29) ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಎರಡನೇ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡಿತ್ತು. ಶನಿವಾರ ಈ ಯೆಮನ್ ಮೂಲದ ಹೌತಿ ಗುಂಪು ಅಧಿಕೃತವಾಗಿ ಸಂಘರ್ಷಕ್ಕೆ ಧುಮುಕಿದ್ದು, ಅಲ್ಲಿಂದೀಚೆಗೆ ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಇರಾನ್ ಬೆಂಬಲಿತ ಈ ಗುಂಪುಗಳು ಒಗ್ಗೂಡಿ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವುದು ಜಾಗತಿಕ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಜಂಟಿ ದಾಳಿಗಳಿಗೆ ಇಸ್ರೇಲ್ ಯಾವ ರೀತಿಯ ಕಠಿಣ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಈಗ ಇಡೀ ವಿಶ್ವದ ಕುತೂಹಲ ಮತ್ತು ಆತಂಕದಿಂದ ನೋಡುತ್ತಿದೆ.