ವಾಷಿಂಗ್ಟನ್, ಮೇ 26: ಮಧ್ಯಪ್ರಾಚ್ಯ ಸಂಘರ್ಷ (middle east crisis) ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅಮೆರಿಕ ಸೇನೆ ದಕ್ಷಿಣ ಇರಾನ್‌ನಲ್ಲಿ ಸ್ವಯಂ ರಕ್ಷಣಾತ್ಮಕ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ತಿಳಿಸಿದೆ. ಹೊರ್ಮುಜ್ ಜಲಸಂಧಿ (strait to Hormuz) ಸಮೀಪದಲ್ಲಿದ್ದ ಇರಾನ್‌ನ ಕ್ಷಿಪಣಿ ಉಡಾವಣೆ ಕೇಂದ್ರಗಳು ಹಾಗೂ ಕೆಲವು ನೌಕಾ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಯುದ್ಧನೌಕೆಗಳು ಮತ್ತು ವ್ಯಾಪಾರ ಹಡಗುಗಳಿಗೆ ಬೆದರಿಕೆ ಹೆಚ್ಚಾಗಿತ್ತು. ಇರಾನ್ ಪಡೆಗಳಿಂದ ಉಂಟಾಗುವ ಬೆದರಿಕೆಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ದಕ್ಷಿಣ ಇರಾನ್‌ನಲ್ಲಿ ಅಮೆರಿಕ ಸೇನೆಯು ಆತ್ಮರಕ್ಷಣಾ ದಾಳಿಗಳನ್ನು ನಡೆಸಿದವು ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ತಿಳಿಸಿದ್ದಾರೆ. ಕ್ಷಿಪಣಿ ಉಡಾವಣೆ ಕೇಂದ್ರಗಳು ಹಾಗೂ ಮಹತ್ವದ ಸಮುದ್ರ ಮಾರ್ಗದಲ್ಲಿ ಮೈನ್ಸ್ ಅಳವಡಿಸಲು ಪ್ರಯತ್ನಿಸುತ್ತಿದ್ದರೆಂದು ಆರೋಪಿಸಲಾದ ಇರಾನ್‌ನ ದೋಣಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕದನ ವಿರಾಮದ ಸಂದರ್ಭದಲ್ಲಿಯೂ ಅಮೆರಿಕದ ಕೇಂದ್ರ ಕಮಾಂಡ್ ನಮ್ಮ ಪಡೆಗಳನ್ನು ರಕ್ಷಿಸುವ ಕಾರ್ಯವನ್ನು ನಿಯಂತ್ರಿತ ರೀತಿಯಲ್ಲಿ ಮುಂದುವರಿಸುತ್ತಿದೆ ಎಂದು ಅವರು ಹೇಳಿದರು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಗೆ ಸೇರಿದ ಎರಡು ದೋಣಿಗಳು ಹೊರ್ಮುಜ್ ಜಲಸಂಧಿಯಲ್ಲಿ ಮೈನ್ಸ್ ಅಳವಡಿಸುತ್ತಿರುವುದು ಪತ್ತೆಯಾಗಿದೆ.
ಅಮೆರಿಕ-ಇರಾನ್ ಯುದ್ಧದ ಬಿಕ್ಕಟ್ಟಿನ ನಡುವೆ ಸಚಿವರಿಗೆ ಪ್ರಧಾನಿ ಮೋದಿಯಿಂದ 3 ಪ್ರಮುಖ ಸಂದೇಶ
ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಈ ಕ್ರಮ ಕೈಗೊಂಡಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ದಾಳಿಯಲ್ಲಿ ಇರಾನಿನ ಹಡಗುಗಳು ಮತ್ತು ಕ್ಷಿಪಣಿ ತಾಣ ಎರಡೂ ನಾಶವಾದವು ಎಂದು ಅಧಿಕಾರಿ ಹೇಳಿದರು.
ಸೋಮವಾರ (ಮೇ 25) ಹೊರ್ಮುಜ್ ಜಲಸಂಧಿಯ ಬಳಿಯ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿರುವ ಬಗ್ಗೆ ವರದಿಯಾಗಿವೆ. ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟವುಂಟಾಗಿರುವ ಬಗ್ಗೆ ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಆದರೆ ದಕ್ಷಿಣ ಕರಾವಳಿಯ ಸಿರಿಕ್ ಮತ್ತು ಜಾಸ್ಕ್ ಬಳಿ ಹೆಚ್ಚು ಸ್ಫೋಟಗಳು ಕೇಳಿಬಂದಿವೆ. ಈ ಬೆಳವಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ತನ್ನ ಯುರೇನಿಯಂ ಅನ್ನು ನಾಶಪಡಿಸಲು ಅಮೆರಿಕಕ್ಕೆ ಒಪ್ಪಿಸಬೇಕು ಎಂದು ಪುನರುಚ್ಚರಿಸಿದ ಬೆನ್ನಲ್ಲೇ ನಡೆದಿದೆ.
ಇರಾನ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದು ತನ್ನ ಪ್ರಭುತ್ವದ ಉಲ್ಲಂಘನೆ ಎಂದು ಆರೋಪಿಸಿದೆ. ಈ ಘಟನೆ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಆತಂಕ ಉಂಟಾಗಿದೆ.