ಅಮೆರಿಕ-ಇರಾನ್ ಯುದ್ಧದ ಬಿಕ್ಕಟ್ಟಿನ ನಡುವೆ ಸಚಿವರಿಗೆ ಪ್ರಧಾನಿ ಮೋದಿಯಿಂದ 3 ಪ್ರಮುಖ ಸಂದೇಶ
Narendra Modi: ಅಮೆರಿಕ-ಇರಾನ್ ಯುದ್ಧದಿಂದ ಉಂಟಾಗಬಹುದಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಮೂರು ಪ್ರಮುಖ ಸಂದೇಶಗಳನ್ನು ನೀಡಿದ್ದಾರೆ. ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ, ಇಂಧನ ಭದ್ರತೆಗೆ ಪರ್ಯಾಯ ಮೂಲಗಳ ಹುಡುಕಾಟ ಹಾಗೂ ವಿಕಸಿತ ಭಾರತ 2047 ಗುರಿಯತ್ತ ಬದ್ಧತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು. ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದ ತೈಲ ಮಾರುಕಟ್ಟೆಯಲ್ಲಿ ಆತಂಕ ಮುಂದುವರಿದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಿತು -
ದೆಹಲಿ, ಮೇ 22: ಅಮೆರಿಕ ಮತ್ತು ಇರಾನ್ (US - Iran) ನಡುವಿನ ಯುದ್ಧದಿಂದ ಉಂಟಾಗಬಹುದಾದ ಜಾಗತಿಕ ಆರ್ಥಿಕ ತಲ್ಲಣಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗುರುವಾರ ತಮ್ಮ ಸಚಿವ ಸಂಪುಟಕ್ಕೆ ಮೂರು ಪ್ರಮುಖ ಸಂದೇಶಗಳನ್ನು ನೀಡಿದ್ದಾರೆ. ಆಡಳಿತದ ವೇಗ ಹೆಚ್ಚಿಸುವುದು, ಇಂಧನ ಕೊರತೆ ಎದುರಿಸಲು ಸಿದ್ಧರಾಗುವುದು ಮತ್ತು ವಿಕಸಿತ ಭಾರತ 2047ರ ದೀರ್ಘಕಾಲೀನ ಗುರಿಯತ್ತ ಗಮನ ಹರಿಸುವುದು ಈ ಸಂದೇಶಗಳ ಮುಖ್ಯ ಸಾರ. ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಕುರಿತು ನಾಲ್ಕು ಗಂಟೆಗಳ ಕಾಲ ನಡೆದ ಈ ಪ್ರಮುಖ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಸಂದೇಶ 1: ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ
ಸರ್ಕಾರಿ ಕಡತಗಳು ಒಂದೇ ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ಅನಗತ್ಯವಾಗಿ ಅಲೆಯಬಾರದು ಎಂದು ಮೋದಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಸರಳಗೊಳಿಸಿ, ಪಾರದರ್ಶಕತೆ ಕಾಯ್ದುಕೊಂಡು ನಾಗರಿಕರ ಸುಲಭ ಜೀವನ ಸುಧಾರಿಸುವತ್ತ ಗಮನಹರಿಸಬೇಕು. ಹಳೆಯ ಸಾಧನೆಗಳ ಬೆನ್ನು ತಟ್ಟಿಕೊಳ್ಳುವ ಬದಲು ಭವಿಷ್ಯದ ಹೊಸ ಗುರಿಗಳತ್ತ ಸಚಿವರು ತಕ್ಷಣ ಗಮನ ಹರಿಸಬೇಕು ಎಂದು ಸೂಚಿಸಿದರು.
ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ʼಮೆಲೋಡಿʼ ಕ್ಷಣಕ್ಕೆ ಬೆರಗಾದ ನೆಟ್ಟಿಗರು
ಸಂದೇಶ 2: ಇಂಧನ ಭದ್ರತೆ
ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹೊರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಅಡಚಣೆ ಉಂಟಾಗಿರುವುದರಿಂದ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗಾಗಲೇ ಪ್ರತಿ ಲೀಟರ್‌ಗೆ ಸುಮಾರು 4 ರುಪಾಯಿಯಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಯೋಗ್ಯಾಸ್ ಮತ್ತು ನವೀಕರಿಸಬಹುದಾದ ಇಂಧನದಂತಹ ಪರ್ಯಾಯ ಮೂಲಗಳನ್ನು ತುರ್ತಾಗಿ ಹುಡುಕಲು ಮೋದಿ ಸೂಚಿಸಿದರು. ಜತೆಗೆ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಲು ಕಠಿಣ ಆರ್ಥಿಕ ಶಿಸ್ತಿಗೆ ಮನವಿ ಮಾಡಿದರು.
ಮೋದಿ ಅವರ ಎಕ್ಸ್ ಪೋಸ್ಟ್:
Had a fruitful meeting of the Council of Ministers yesterday. We exchanged perspectives and best practices relating to boosting ‘Ease of Living, ‘Ease of Doing Business’ and how to further reforms in order to realise our shared dream of a Viksit Bharat. pic.twitter.com/ifKpB8le17
— Narendra Modi (@narendramodi) May 22, 2026
ಸಂದೇಶ 3: ವಿಕಸಿತ ಭಾರತ 2047 ಬದ್ಧತೆ
ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ವಿಕಸಿತ ಭಾರತ ಕೇವಲ ಒಂದು ಘೋಷಣೆಯಾಗಬಾರದು, ಅದು ನಮ್ಮ ಕಡ್ಡಾಯ ಬದ್ಧತೆಯಾಗಬೇಕು ಎಂದು ಪ್ರಧಾನಿ ಹೇಳಿದರು. ಜನರ ಜೀವನವನ್ನು ನೇರವಾಗಿ ಸುಧಾರಿಸುವ ಮತ್ತು ಕಲ್ಯಾಣ ಯೋಜನೆಗಳನ್ನು ತಲುಪಿಸುವ ಮುಂದಿನ ಪೀಳಿಗೆಯ ಸುಧಾರಣೆಗಳ ಕಡೆಗೆ ಸಚಿವರು ಗಮನ ಹರಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಅಮೆರಿಕ-ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಮಾತುಕತೆ ಜಾರಿಯಲ್ಲಿದ್ದರೂ, ಹೊರ್ಮುಜ್ ಮಾರ್ಗದಲ್ಲಿ ಹಡಗುಗಳ ಸಂಚಾರ ಗಣನೀಯವಾಗಿ ಕುಸಿದಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆ ಇಂದಿಗೂ ತೀವ್ರ ಆತಂಕದಲ್ಲಿದೆ.