ಹನೋಯಿ, ಜು. 11: ವಿಯೆಟ್ನಾಂನಲ್ಲಿ ದೋಣಿ ದುರಂತ (Boat accident) ಸಂಭವಿಸಿದ್ದು, ಸುಮಾರು 15 ಮಂದಿ ಭಾರತೀಯರು ದುರ್ಮರಣಕ್ಕೀಡಾಗಿದ್ದಾರೆ. ಹಲವು ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ದುರ್ಘಟನೆ ದಕ್ಷಿಣ ವಿಯೆಟ್ನಾಂನ (Vietnam) ಜನಪ್ರಿಯ ತಾಣವಾದ ಫು ಕ್ವಾಕ್ ದ್ವೀಪದ ಬಳಿ ಸಂಭವಿಸಿದೆ. ಕರಾವಳಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯನ್ನು ದೃಢಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ತಿಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ದುರಂತದಲ್ಲಿ ಸುಮಾರು 15 ಮಂದಿ ಭಾರತೀಯ ನಾಗರಿಕರು ಸಾವಿಗೀಡಾಗಿದ್ದಾರೆ. ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಹಡಗಿನಲ್ಲಿ 36 ಜನರಿದ್ದರು.
21 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹಡಗಿನಲ್ಲಿ 32 ಭಾರತೀಯ ಪ್ರವಾಸಿಗರು, ಮೂವರು ಸಿಬ್ಬಂದಿ ಮತ್ತು ಒಬ್ಬ ಸಹಾಯಕ ಸೇರಿದಂತೆ 36 ಜನರು ಇದ್ದರು. ಹೊನ್ ಮೇ ರುಟ್ ನ್ಗೋಯ್ ದ್ವೀಪದಿಂದ ಆನ್ ಥೋಯ್ ಬಂದರಿಗೆ ಹೊರಟ ಸ್ವಲ್ಪ ಸಮಯದ ನಂತರ, ಬಿರುಗಾಳಿಯಿಂದಾಗಿ ದೋಣಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಇದರಿಂದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ನೀರಿಗೆ ಬಿದ್ದರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ರಾಯಭಾರ ಕಚೇರಿಯ ಪೋಸ್ಟ್ ಇಲ್ಲಿದೆ:
ಮಹಾರಾಷ್ಟ್ರದಲ್ಲಿ ಮುಳುಗಿದ 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ದೋಣಿ
“ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಹಲವು ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಸ್ಥಳೀಯ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಸುತ್ತಿದ್ದಾರೆ. ಬಳಿಕವಷ್ಟೇ ಘಟನೆಯ ನಿಖರವಾದ ವಿವರಗಳು ತಿಳಿದುಬರಲಿದೆ” ಎಂದು ರಾಯಭಾರ ಕಚೇರಿ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
ಸಂತ್ರಸ್ತ ಪ್ರವಾಸಿಗರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿ, ಭಾರತೀಯ ರಾಯಭಾರ ಕಚೇರಿಯು ಎರಡು ಸ್ಥಳಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆದಿದೆ. ಹೋ ಚಿ ಮಿನ್ಹ್ ನಗರದಲ್ಲಿರುವ ಭಾರತೀಯ ದೂತಾವಾಸ ಮತ್ತು ಹನೋಯ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ.
ಸಹಾಯವಾಣಿ
ಮಾಹಿತಿ ಅಥವಾ ಸಹಾಯ ಬಯಸುವವರು ಹೋ ಚಿ ಮಿನ್ಹ್ ನಗರದ ನಿಯಂತ್ರಣ ಕೊಠಡಿಯನ್ನು +84 36 281 7930, +84 91 552 37 14 ಮತ್ತು +84 33 452 0414 ನಂಬರ್‌ನಲ್ಲಿ ಸಂಪರ್ಕಿಸಬಹುದು. ಹನೋಯ್‌ನಲ್ಲಿರುವ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ +84 91 308 9165. ಘಟನೆಗೆ ಸಂಬಂಧಿಸಿದ ಯಾವುದೇ ಸಹಾಯಕ್ಕೆ ಎರಡೂ ನಿಯಂತ್ರಣ ಕೊಠಡಿಗಳು ಲಭ್ಯವಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಜಬಲ್ಪುರ ದೋಣಿ ದುರಂತ: ಒಂಬತ್ತು ಮಂದಿ ನೀರುಪಾಲು
ಜನಪ್ರಿಯ ಪ್ರವಾಸಿ ಕೇಂದ್ರ
ಥೈಲ್ಯಾಂಡ್ ಕೊಲ್ಲಿಯಲ್ಲಿರುವ ಫು ಕ್ವೋಕ್ ದ್ವೀಪವು ಬಿಳಿ ಮರಳಿನ ಕಡಲತೀರಗಳು ಮತ್ತು ರೆಸಾರ್ಟ್‌ಗಳಿಗೆ ಹೆಸರುವಾಸಿ. ಕೆಲವು ವರ್ಷಗಳಿಂದ ನೇರ ವಿಮಾನಗಳು ಮತ್ತು ಸರಳೀಕೃತ ವೀಸಾ ಪ್ರಕ್ರಿಯೆಗಳಿಂದಾಗಿ ಹೆಚ್ಚಿನ ಭಾರತೀಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಸಿಬ್ಬಂದಿ ವಿಯೆಟ್ನಾಂ ಪ್ರಾಂತೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅಪಘಾತಕ್ಕೆ ಕಾರಣ ಮತ್ತು ರಕ್ಷಿಸಲ್ಪಟ್ಟವರ ಗುರುತಿನ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.