ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ನೀವು ನಾಶ ಮಾಡಿದ್ದಕ್ಕಿಂತ ವೇಗವಾಗಿ ಪುನರ್‌ನಿರ್ಮಾಣ ಮಾಡುತ್ತೇವೆ”: ಅಮೆರಿಕ-ಇಸ್ರೇಲ್‌ಗೆ ಇರಾನ್ ಸವಾಲು

Iran statement: ಇರಾನ್ ವಿರುದ್ಧದ ಯುದ್ಧದ ವೇಳೆ ಅಮೆರಿಕ ಮತ್ತು ಇಸ್ರೇಲ್ ಅಲ್ಲಿನ ಮಿಲಿಟರಿ ನೆಲೆ, ರೈಲ್ವೇ ಹಳಿಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿ, ಎಲ್ಲವನ್ನೂ ಹಾಳುಗೆಡವಿದೆ. ಇದೀಗ ಇರಾನ್ ವೇಗವಾಗಿ ಅವೆಲ್ಲವನ್ನು ಪುನರ್‌ನಿರ್ಮಿಸುವ ಪ್ರತಿಜ್ಞೆ ಮಾಡಿದೆ. ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಮೂಲಸೌಕರ್ಯಗಳನ್ನು ವೇಗವಾಗಿ ದುರಸ್ತಿ ಮಾಡುತ್ತಿದೆ.

ಅಮೆರಿಕ-ಇಸ್ರೇಲ್‌ಗೆ ಸವಾಲು ಒಡ್ಡಿದ ಇರಾನ್

ಇರಾನ್‌ನಲ್ಲಿ ಆರಂಭವಾದ ಪುನರ್‌ನಿರ್ಮಾಣ ಕಾರ್ಯ -

Priyanka P
Priyanka P Apr 15, 2026 8:07 PM

ಟೆಹರಾನ್, ಏ. 15: ಇರಾನ್ ವಿರುದ್ಧದ ಯುದ್ಧದ ವೇಳೆ ಅಮೆರಿಕ ಮತ್ತು ಇಸ್ರೇಲ್ (US-Isreal) ಮನಬಂದಂತೆ ವಾಯು ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಮಿಲಿಟರಿ ನೆಲೆ, ರೈಲ್ವೇ ಹಳಿಗಳು ಸೇರಿ ನಾಗರಿಕ ಮೂಲಸೌಕರ್ಯಗಳನ್ನು ನಾಶ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಇರಾನ್‌ನ ಸಾರಿಗೆ ಮತ್ತು ಸಂವಹನ ಜಾಲಗಳನ್ನು ದುರ್ಬಲಗೊಳಿಸುವ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಟ್ರಂಪ್, ಪದೇ ಪದೆ ಸೇತುವೆಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇರಾನ್ (Iran) ಅನ್ನು ಶಿಲಾಯುಗಕ್ಕೆ ಹಿಂತಿರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು. ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಇರಾನ್‌ ಇದೀಗ ದೇಶದ ಪುನರ್‌ನಿರ್ಮಾಣದ ‍ಪಣ ತೊಟ್ಟಿದೆ.

ಅಮೆರಿಕ ಮತ್ತು ಇಸ್ರೇಲ್ ಅನ್ನು ಅಣಕಿಸುವ ಮತ್ತು ಸವಾಲು ಹಾಕುವ ಹಾಗೆ ಇರಾನ್‌ ಪುನರ್‌ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿನಡೆಸುತ್ತಿದೆ. ಏಪ್ರಿಲ್‌ 8ರಂದು ಕದನ ವಿರಾಮ ಜಾರಿಗೆ ಬಂದ ನಂತರ, ದೇಶೀಯ ಎಂಜಿನಿಯರಿಂಗ್ ತಂಡಗಳನ್ನು ಬಳಸಿಕೊಂಡು ದಾಖಲೆಯ ಸಮಯದಲ್ಲಿ ಹಲವು ಹಾನಿಗೊಳಗಾದ ರೈಲು ಮಾರ್ಗಗಳು ಮತ್ತು ಸೇತುವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಇರಾನಿನ ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿದೆ ಪೋಸ್ಟ್:



ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸಲು ರೈಲ್ವೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದಕ್ಕಾಗಿಯೇ ಅವು ಬಹಳ ಹಿಂದಿನಿಂದಲೂ ಸುಲಭ ಗುರಿ ಎನಿಸಿಕೊಂಡಿವೆ. ಉದಾಹರಣೆಗೆ, ವಿಯೆಟ್ನಾಂ ಯುದ್ಧದ ಸಮಯದಲ್ಲಿ, ಚೀನಾದಿಂದ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಲು ಅಮೆರಿಕದ ಪಡೆಗಳು ಉತ್ತರ ವಿಯೆಟ್ನಾಂನಲ್ಲಿನ ರೈಲು ಕೇಂದ್ರಗಳ ಮೇಲೆ ಪದೇ ಪದೆ ದಾಳಿ ಮಾಡಿದವು. ವಿಯೆಟ್ನಾಂ ಸಿಬ್ಬಂದಿ ಗುಂಡಿನ ದಾಳಿಯ ಸಮಯದಲ್ಲಿ ಹಾನಿಯನ್ನು ಸರಿಪಡಿಸಿದ ರೀತಿಯಲ್ಲಿಯೇ, ಇರಾನ್ ಈಗ ತಮ್ಮ ಹಾನಿಗೊಳಗಾದ ರೈಲು ಜಾಲವನ್ನು ಪುನಃಸ್ಥಾಪಿಸುವಲ್ಲಿ ಇದೇ ರೀತಿಯ ದೃಢನಿಶ್ಚಯ ಮತ್ತು ವೇಗವನ್ನು ಪ್ರದರ್ಶಿಸುತ್ತಿವೆ.

ಇರಾನ್ ಜೊತೆಗಿನ ಯುದ್ಧ ಯಾವಾಗ ಕೊನೆಯಾಗುತ್ತೆ? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಸುಮಾರು 40 ದಿನಗಳ ಹೋರಾಟದಲ್ಲಿ ಹಾನಿಗೊಳಗಾದ ಸೇತುವೆಗಳು, ರೈಲು ಮಾರ್ಗಗಳು ಮತ್ತು ಇತರ ಮೂಲಸೌಕರ್ಯಗಳ ಪುನರ್‌ನಿರ್ಮಾಣ ಕಾರ್ಯವನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್‌ ದಾಳಿಯ ಸಮಯದಲ್ಲಿ ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡಿದ ನಂತರ ಇರಾನ್, ಹಲವು ಪ್ರಮುಖ ರೈಲು ಮಾರ್ಗಗಳಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಿದೆ. ಇರಾನ್‌ನ ವಾಯುವ್ಯ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ, ತಬ್ರಿಜ್ ನಗರದಿಂದ ಈಶಾನ್ಯದ ಟೆಹರಾನ್ ಮತ್ತು ಮಶಾದ್‌ಗೆ ಹೋಗುವ ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

ರಾಜಧಾನಿ ಟೆಹರಾನ್‌ನಲ್ಲಿ ಅವಶೇಷಗಳನ್ನು ತ್ವರಿತವಾಗಿ ತೆರವುಗೊಳಿಸಲಾಗುತ್ತಿದೆ. ಹಾನಿಗೊಳಗಾದ ಕಟ್ಟಡಗಳ ಪುನರ್ನಿರ್ಮಾಣಕ್ಕೆ ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ 1,25,000ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ಅವುಗಳಲ್ಲಿ ಹೆಚ್ಚಿನವು ವಸತಿ ಕಟ್ಟಡಗಳಾಗಿದ್ದು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ನಾಗರಿಕ ಸೌಲಭ್ಯಗಳೂ ನೆಲಸಮವಾಗಿದೆ.

ಅಮೆರಿಕ-ಇಸ್ರೇಲ್ ದಾಳಿಯಿಂದ ಹಾನಿಗೊಳಗಾದ ಎಲ್ಲ ಆರು ರೈಲ್ವೆ ತಾಣಗಳನ್ನು ಪುನಃ ಸ್ಥಾಪಿಸಲಾಗಿದೆ. ಇರಾನಿನ ಎಂಜಿನಿಯರ್‌ಗಳು 96 ಗಂಟೆಗಳಲ್ಲಿ ಸೇತುವೆಗಳನ್ನು ಪುನರ್‌ನಿರ್ಮಿಸಿದ್ದಾರೆ. ರೈಲು ಸೇವೆಗಳು ಸಂಪೂರ್ಣವಾಗಿ ಪುನರಾರಂಭಗೊಂಡಿವೆ ಎಂದು ಬಲ್ಗೇರಿಯಾದ ಇರಾನ್ ರಾಯಭಾರ ಕಚೇರಿ ಪೋಸ್ಟ್ ಮಾಡಿದೆ.