ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams : ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತದೆ? ಎದುರಾಗುವ ಸವಾಲುಗಳು ಏನು?

8 ದಿನಗಳ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಬರೋಬ್ಬರಿ 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುವಾಗ ಹಾಗೂ ಅಲ್ಲಿಂದ ಬಂದ ನಂತರ ಎದುರಾಗುವ ಸವಾಲುಗಳೇನು? ಇಲ್ಲಿದೆ ಉತ್ತರ

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತದೆ?

ಸುನಿತಾ ವಿಲಿಯಮ್ಸ್

Profile Vishakha Bhat Mar 20, 2025 5:00 PM

ವಾಷಿಂಗ್ಟನ್‌: 8 ದಿನಗಳ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ (Sunita Williams) ಹಾಗೂ ಬುಚ್‌ ವಿಲ್ಮೋರ್‌ ಬರೋಬ್ಬರಿ 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ್ದಾರೆ. ಅಮೆರಿಕದ ನಾಸಾ, ರಷ್ಯಾದ ರೋಸ್ಕೋಸ್ಮೋಸ್ ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಹಸವನ್ನು ಮಾಡಿದೆ. ಆದರೆ ಬಾಹ್ಯಾಕಾಶಕ್ಕೆ ತೆರಳುವುದು ಹಾಗೂ ಅಲ್ಲಿನ ಜೀವನ ಅಷ್ಟು ಸುಲಭಲ್ಲ. ಈ ಹಂತದಲ್ಲಿ ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳು ಗಗನಯಾತ್ರಿಗಳನ್ನು ಕಾಡುತ್ತದೆ.

ಬಾಹ್ಯಾಕಾಶಕ್ಕೆ ಪ್ರಯಾಣಿಸುವಾಗ ಗಗನಯಾತ್ರಿಗಳು ಎದುರಿಸುವ ಪ್ರಾಥಮಿಕ ಸವಾಲುಗಳೇನು?

ಬಾಹ್ಯಾಕಾಶಕ್ಕೆ ತೆರಳಿ ಅಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳುವ ಮೊದಲು ಭೂಮಿಯಿಂದ ಹೊರಬೇಕಾದರೆ ಹಲವು ಸವಾಲುಗಳು ಎದುರಾಗುತ್ತವೆ. ಭೂಮಿಯ ವಾತಾವರಣದಿಂದ ಹೊರ ಬಂದು ಗುರುತ್ವಾಕರ್ಷಣ ಶಕ್ತಿಯಿಂದ ಮುಕ್ತವಾಗಲು ಅಗಾಧ ಶಕ್ತಿಯ ಅಗತ್ಯವಿರುತ್ತದೆ. ಒಮ್ಮೆ ಬಾಹ್ಯಾಕಾಶಕ್ಕೆ ಬಂದ ನಂತರ, ಗುರುತ್ವಾಕರ್ಷಣೆ ಶಕ್ತಿಯ ಕೊರತೆ ದೇಹದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ದೇಹದಲ್ಲಿ ಕೆಲ ಬದಲಾವಣೆಗಳಾಗಿ ತಲೆನೋವು, ವಾಕರಿಕೆ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಲೂಬಹುದು. ನಮ್ಮ ಒಳಗಿವಿಯ ಆಳದಲ್ಲಿ, ವೆಸ್ಟಿಬ್ಯುಲಾರ್ ಆರ್ಗನ್ ಎಂದು ಕರೆಯುವ ಒಂದು ಸಣ್ಣ ಅಂಗವಿದೆ. ಇದು ನಮ್ಮ ದೇಹದ ಸಮತೋಲನ ಕಾಪಾಡಲು ಅತ್ಯಂತ ಅವಶ್ಯಕವಾಗಿದೆ. ಗುರುತ್ವಾಕರ್ಷಣೆ ಬಹಳಷ್ಟು ಕಡಿಮೆ ಇರುವುದರಿಂದ ವೆಸ್ಟಿಬುಲಾರ್ ಅಂಗದಿಂದ ಬರುವ ಮಾಹಿತಿಗಳು ಬದಲಾಗುತ್ತಿರುತ್ತವೆ. ಇದು ಮೆದುಳಿಗೆ ಗೊಂದಲವನ್ನು ಉಂಟು ಮಾಡುತ್ತದೆ. ಈ ಪರಿಸ್ಥಿತಿ ದೀರ್ಘಕಾಲ ಇರುವುದಿಲ್ಲ. ಕೆಲವು ದಿನಗಳ ಬಳಿಕ ಬಳಿಕ, ಮೆದುಳು ವೆಸ್ಟಿಬುಲಾರ್ ಅಂಗದ ಹೊಸ ಸಂಕೇತಗಳಿಗೆ ಹೊಂದಿಕೊಳ್ಳುತ್ತದೆ. ಇದರ ಪರಿಣಾಮವಾಗಿ, ಆರೋಗ್ಯದ ಸ್ಥಿತಿಯಲ್ಲಿ ಚೇತರಿಕೆ ಕಾಣುತ್ತದೆ.

ತೂಕ ನಷ್ಟ ಹೇಗೆ ಪರಿಣಾಮ ಬೀರುತ್ತದೆ?

ಬಾಹ್ಯಾಕಾಶದಲ್ಲಿ ಶೂನ್ಯ ಗುರುತ್ವಾಕರ್ಷಣೆ ಇರುವುದರಿಂದ ಗಗನಯಾತ್ರಿಗಳು ತೂಕವನ್ನು ಕಳೆದು ಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅವರ ಸ್ನಾಯುಗಳ ಸಾಂದ್ರತೆ ಕಡಿಮೆಯಾಗುತ್ತದೆ. ತಿಂಗಳಿಗೆ ಸರಿಸುಮಾರು 1-2% ರಷ್ಟು ಸ್ನಾಯುಗಳು ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಬೆನ್ನು ಹಾಗೂ ಕಾಲಿನ ಸ್ನಾಯುಗಳ ತೂಕ ಕಡಿಮೆಯಾಗುತ್ತದೆ. ಹೆಚ್ಚಿನ ಶ್ರಮದ ಅವಶ್ಯಕತೆ ಇಲ್ಲದೆ ಒಂದೇ ಭಂಗಿಯಲ್ಲಿ ಇರಬಹುದು. ಇದರಿಂದಾಗಿ, ಬಾಹ್ಯಾಕಾಶದಲ್ಲಿ ಅತ್ಯಂತ ಸುದೀರ್ಘ ಸಮಯವನ್ನು ಕಳೆದರೆ, ದೇಹದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಅದರೊಡನೆ, ಮೂಳೆಗಳ ದ್ರವ್ಯರಾಶಿಯೂ ಕುಂಠಿತಗೊಳ್ಳುತ್ತದೆ. ಕೆಲವೊಮ್ಮೆ ಭೂಮಿಗೆ ಹಿಂದಿರುಗಿದ ನಂತರ ಮೂಳೆ ಮುರಿತ ಕೂಡ ಸಂಭವಿಸಬಹುದು ಎಂದು ವೈದರು ಹೇಳುತ್ತಾರೆ.

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಹಳಷ್ಟು ದುರ್ಬಲವಾಗಿರುತ್ತದೆ. ಸಾಮಾನ್ಯವಾಗಿ ಭೂಮಿಯ ಗುರುತ್ವಾಕರ್ಷಣೆಯಲ್ಲಿ ದೇಹದ ದ್ರವಗಳು ಕೆಳಗೆ ಎಳೆಯಲ್ಪಡುತ್ತವೆ. ಆದರೆ, ಬಾಹ್ಯಾಕಾಶದಲ್ಲಿ ಇಂತಹ ವಿದ್ಯಮಾನ ನಡೆಯುವುದಿಲ್ಲ. ಇದರಿಂದಾಗಿ, ದೈಹಿಕ ದ್ರವಗಳು ದೇಹದ ಮೇಲ್ಭಾಗದಲ್ಲಿ ಶೇಖರಗೊಳ್ಳುತ್ತವೆ. ಅನೇಕ ಗಗನಯಾತ್ರಿಗಳು ತಲೆಯಲ್ಲಿ ದ್ರವದ ಶೇಖರಣೆಯಿಂದಾಗಿ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಪೇಸ್‌ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (SANS) ಎಂದು ಕರೆಯಲ್ಪಡುವ ಸ್ಥಿತಿಯು ದೃಷ್ಟಿ ಮಂದವಾಗಲು ಕಾರಣವಾಗಬಹುದು. ಸದ್ಯ ಇದೀಗ ಹಿಂದಿರುಗಿರುವ ಸುನಿತಾ ವಿಲಿಯಮ್ಸ್‌ ಕೂಡ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಎದುರಾಗುವ ಮಾನಸಿಕ ಸವಾಲುಗಳೇನು?

ಬಾಹ್ಯಾಕಾಶಕ್ಕೆ ತೆರಳುವ ಮೊದಲು ಹಾಗೂ ಅಲ್ಲಿಂದ ಬಂದ ನಂತರ ಗಗನಯಾತ್ರಿಗಳು ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಾರೆ. ಅಲ್ಲಿನ ಇಕ್ಕಟ್ಟಾದ ಪರಿಸರ, ಒತ್ತಡ ಎವೆಲ್ಲವೂ ಸಮಸ್ಯೆಗಳಾಗಿ ಪರಿಣಮಿಸುತ್ತದೆ. ಒಂದು ಫುಟ್‌ಬಾಲ್‌ ಮೈದಾನದಷ್ಟು ದೊಡ್ಡದಾಗಿರುವ ISIS ಈ ನಿಲ್ದಾಣದಲ್ಲಿ ಗಗನಯಾತ್ರಿಗಳು ವೈಯಕ್ತಿಕ ಸ್ಥಳಾವಕಾಶ ಕಡಿಮೆ ಇರುತ್ತದೆ. ಗೌಪ್ಯತೆಯ ಕೊರತೆ ಎದುರಾಗುತ್ತದೆ. ಕುಟುಂಬ ಮತ್ತು ಸ್ನೇಹಿತರಿಂದ ಬೇರ್ಪಟ್ಟ ಒಂಟಿತನ ಕಾಡುತ್ತದೆ. ಭೂಮಿಯಿಂದ ಸಾವಿರಾರು ಕೀ.ಮಿ ದೂರದಲ್ಲಿದ್ದು ಸಂಪೂರ್ಣವಾಗಿ ತಂತ್ರಜ್ಞಾನದ ಮೇಲೆ ಅವಲಂಬಿತರಾದರೆ ಮಾನಸಿಕವಾಗಿ ಬಳಲಿಕೆಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ಒಂಟಿತನ ಕೂಡ ಅಲ್ಲಿ ಕಾಡಬಹುದು.

ವಾತಾವರಣ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಬಾಹ್ಯಾಕಾಶ ಯಾನದಲ್ಲಿ ವಿಕಿರಣಶೀಲತೆಯಿಂದಾಗಿ ಗಗನಯಾತ್ರಿಗಳು ಬಿಳಿ ರಕ್ತ ಕಣಗಳ ಸವಕಳಿಯ ಅಪಾಯ ಹೊಂದಿರುತ್ತಾರೆ. ವಿಕಿರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಭೂಮಿಗೆ ಮರಳಿದ ಹೃದಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ರಕ್ತದೊತ್ತಡದಲ್ಲಿ ಏರುಪೇರುಗಳು, ತ್ವರಿತ ಹೃದಯ ಬಡಿತ ಮತ್ತು ಬಡಿತವನ್ನು ಉಂಟುಮಾಡುತ್ತವೆ. ಮೈಕ್ರೊಗ್ರಾವಿಟಿಯಲ್ಲಿ ವಾಸಿಸುವುದರಿಂದ ರಕ್ತ ಪರಿಚಲನೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತದೆ. ರಕ್ತದ ಪರಿಚಲನೆ ಕೂಡ ಸರಾಗವಾಗುವುದಿಲ್ಲ. ಇದರಿಂದಾಗಿ ಅವರ ಮುಖ ಊದಿಕೊಂಡಿರುತ್ತದೆ ಹಾಗೂ ಕೈಕಾಲುಗಳು ಸಣ್ಣದಾಗಿರುತ್ತದೆ. ಹೆಚ್ಚುವರಿಯಾಗಿ, ತಲೆಯಲ್ಲಿ ದ್ರವಗಳು ಸಂಗ್ರಹವಾಗುತ್ತವೆ, ಇದರಿಂದಾಗಿ ಗಗನಯಾತ್ರಿಗಳು ನಿರಂತರ ಶೀತವನ್ನು ಅನುಭವಿಸುತ್ತಾರೆ. ರಕ್ತಪರಿಚಲನೆಯಲ್ಲಿನ ಬದಲಾವಣೆಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು.

ಭೂಮಿಯಲ್ಲಿ ವಿಕಿರಣದಿಂದ ರಕ್ಷಣೆಗೆ ರಕ್ಷಣಾ ಕವಚವಿದೆ. ಆದರೆ ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಮತ್ತು ಸೌರ ವಿಕಿರಣದಿಂದ ರಕ್ಷಣೆಗೆ ಯಾವುದೇ ರೀತಿಯ ಕವಚಗಳು ಇಲ್ಲ. ಗಗನಯಾತ್ರಿಗಳು ಭೂಮಿಯಲ್ಲಿ ಇರುವವರಿಗಿಂತ 20 ಪಟ್ಟು ಹೆಚ್ಚು ವಿಕಿರಣಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಾಹ್ಯಾಕಾಶವಾಸಿಗಳಿಗೆ ನಾಸಾ ಐಎಸ್ ಎಸ್ ಗೆ ಕೆಲವೊಂದು ರಕ್ಷಣಾ ಕವಚ ಗಳನ್ನು ಒದಗಿಸಿದೆ. ಸ್ನಾಯುಗಳ ನಷ್ಟವನ್ನು ತಪ್ಪಿಸಲು ಟ್ರೆಡ್‌ಮಿಲ್ (TVIS) ನಂತಹ ವಿಶೇಷ ಉಪಕರಣಗಳಲ್ಲಿ ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ.

ನೀರು, ಆಹಾರ, ತ್ಯಾಜ್ಯಗಳ ನಿರ್ವಹಣೆ ಹೇಗೆ?

ಬಾಹ್ಯಾಕಾಶದಲ್ಲಿ ಇರುವವರಿಗೆ ಉತ್ತಮ ಡಯಟ್‌ನ ಅವಶ್ಯಕತೆ ಇರುತ್ತದೆ. ಗಗನಯಾತ್ರಿಗಳು ದಿನಕ್ಕೆ 3.8 ಪೌಂಡ್‌ ಆಹಾರ ಸೇವಿಸಬೇಕಾಗುತ್ತದೆ. ಸುನಿತಾ ಹಾಗೂ ವಿಲ್ಮೋರ್‌ ಮೊದಲ ಕೆಲವು ದಿನ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಿದ್ದರು. ಪ್ಯಾಕೇಜ್‌ ಆಹಾರಗಳನ್ನು ಗಗನಯಾತ್ರಿಗಳು ಹೆಚ್ಚಾಗಿ ಬಳಸುತ್ತಾರೆ. ಗಗನಯಾತ್ರಿಗಳು ನೀರು ಕುಡಿಯುವಾಗ ಕೂಡ ಎಚ್ಚರಿಕೆ ವಹಿಸಬೇಕು ಅದು ಚೆಲ್ಲಿದರೆ ಜಲ್ಲಿಯ ರೀತಿಯಲ್ಲಾಗಿ ಗಾಳಿಯಲ್ಲಿ ತೇಲಾಡುತ್ತದೆ. . ಇನ್ನು ವಿಸರ್ಜನೆ ಮಾಡುವಾಗ ದೇಹದ ವಿಸರ್ಜನಾಂಗಗಳಿಗೆ ಸಕ್ಷನ್‌ ಪೈಪ್‌ ಅಥವಾ ಹೀರುಗೊಳವೆಗಳನ್ನು ಕಟ್ಟಿಕೊಳ್ಳ ಬೇಕಾಗುತ್ತದೆ. ಮೂತ್ರ ಹಾಗೂ ಬೆವರೂ ಕೂಡ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ:Sunita Williams: ಬಾಹ್ಯಾಕಾಶದಲ್ಲಿದ್ದಾಗ ಸುನಿತಾ ವಿಲಿಯಮ್ಸ್‌ ಸಂಬಳ ಎಷ್ಟಿತ್ತು ಗೊತ್ತಾ? ಇಲ್ಲಿದೆ ಮಾಹಿತಿ

ಈ ಎಲ್ಲಾ ಸವಾಲುಗಳಿಗೆ ಸಿದ್ಧತೆ ಹೇಗೆ?

ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತರಳುವ ಮುನ್ನ ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲಿ ಅವರಿಗೆ ಸ್ಪೇಸ್‌ ವಾಕ್‌ ಹಾಗೂ ತುರ್ತು ಪರಿಸ್ಥಿಗಳ ನಿರ್ವಹಣೆ ಹೇಗೆ ಎಂದು ತರಬೇತಿ ನೀಡಲಾಗುತ್ತದೆ. ಈ ಎಲ್ಲಾ ಕೌಶಲ್ಯಗಳ ತರಬೇತಿ ನೀಡುವುದರ ಜೊತೆಗೆ ಮಾನಸಿಕವಾಗಿ ಸಧೃಡರಾಗಲೂ ಸಹ ತರಬೇತಿಯನ್ನು ನೀಡಲಾಗುತ್ತದೆ. ನುರಿತ ಮನಶ್ಶಾಸ್ತ್ರಜ್ಞರಿಂದ ಒತ್ತಡ ನಿರ್ವಹಣೆಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.